ಪ್ರಣೀತ್‌ಗೆ ಸೋಲು, ಭಾರತದ ಸವಾಲು ಅಂತ್ಯ

Update: 2019-09-20 18:54 GMT

ಚಾಂಗ್‌ಝೌ, ಸೆ.20: ಚೀನಾ ಓಪನ್ ವರ್ಲ್ಡ್‌ಟೂರ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ ಬಿ.ಸಾಯಿ ಪ್ರಣೀತ್ ವಿಶ್ವದ ನಂ.9ನೇ ಆಟಗಾರ ಅಂಥೋನಿ ಸಿನಿಸುಕಾ ಜಿಂಟಿಂಗ್ ವಿರುದ್ಧ ಮೂರು ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಪ್ರಣೀತ್ ಸೋಲಿನೊಂದಿಗೆ ಟೂರ್ನಮೆಂಟ್‌ನಲ್ಲಿ ಭಾರತದ ಸವಾಲಿಗೆ ತೆರೆ ಬಿದ್ದಿದೆ.

ಸುಮಾರು ಒಂದು ತಿಂಗಳ ಹಿಂದೆ ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದ ವಿಶ್ವದ ನಂ.15ನೇ ಆಟಗಾರ ಪ್ರಣೀತ್ ಇಂಡೋನೇಶ್ಯದ ಜಿಂಟಿಂಗ್‌ಗೆ 55 ನಿಮಿಷಗಳ ಹೋರಾಟದಲ್ಲಿ 21-16, 6-21, 16-21 ಗೇಮ್‌ಗಳ ಅಂತರದಿಂದ ಶರಣಾಗಿದ್ದಾರೆ. ಈ ಸೋಲಿನೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದರು.

ಜಿಂಟಿಂಗ್ ಪ್ರಶಸ್ತಿ ಸುತ್ತಿನಲ್ಲಿ ಡೆನ್ಮಾರ್ಕ್‌ನ 8ನೇ ಶ್ರೇಯಾಂಕದ ಆ್ಯಂಡರ್ಸ್ ಅಂಟೊನ್‌ಸೆನ್‌ರನ್ನು ಎದುರಿಸಲಿದ್ದಾರೆ. ಆಂಟೊನ್‌ಸೆನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ವರ್ಷಾರಂಭದಲ್ಲಿ ಸ್ವಿಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪ್ರಣೀತ್ ಅವರು ಜಿಂಟಿಂಗ್ ವಿರುದ್ಧ ಇಂದಿನ ಪಂದ್ಯಕ್ಕಿಂತ ಮೊದಲು 3-2 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದರು. ಮೊದಲ ಪಂದ್ಯವನ್ನು 21-16ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದ ಪ್ರಣೀತ್ ಆ ಬಳಿಕ ಎರಡು ಪಂದ್ಯಗಳಲ್ಲಿ ಕೈಚೆಲ್ಲುವುದರೊಂದಿಗೆ ನಿರಾಸೆಗೊಳಿಸಿದರು.

ಪ್ರಣೀತ್ ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಟೂರ್ನಿಯಲ್ಲಿ 36 ವರ್ಷಗಳಿಂದ ಪುರುಷರ ಸಿಂಗಲ್ಸ್‌ನಲ್ಲಿ ಭಾರತ ಎದುರಿಸುತ್ತಿದ್ದ ಪದಕದ ಬರವನ್ನು ನೀಗಿಸಿದ್ದರು.

 ಕಂಚು ಜಯಿಸಿದ್ದ ಪ್ರಣೀತ್ 1983ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆಯವರ ದಾಖಲೆಯನ್ನು ಸರಿಗಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News