ಅ.21ಕ್ಕೆ ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗ ಘೋಷಣೆ

Update: 2019-09-21 07:15 GMT

ಹೊಸದಿಲ್ಲಿ, ಸೆ.21: ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಅಕ್ಟೋಬರ್ 21 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಘೋಷಿಸಿದೆ.

ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ ಚುನಾವಣೆ ದಿನಾಂಕ ಘೋಷಿಸಿದರು.

ಈ ಎರಡು ರಾಜ್ಯಗಳ ಚುನಾವಣೆಯ ಫಲಿತಾಂಶ ಅ.24ರಂದು ಹೊರ ಬರಲಿದೆ. ಸೆ.27ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಮಹಾರಾಷ್ಟ್ರ ಅಸೆಂಬ್ಲಿಯ ಅವಧಿಯು ನ.9ರಂದು ಕೊನೆಯಾಗಲಿದೆ. ಹರ್ಯಾಣ ವಿಧಾನಸಭೆಯ ಅವಧಿಯೂ ನ.2ಕ್ಕೆ ಅಂತ್ಯವಾಗಲಿದೆ. ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಿಗೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.

ಮಹಾರಾಷ್ಟ್ರ ವಿಧಾನಸಭೆ ಒಟ್ಟು 288 ಸದಸ್ಯಬಲ ಹೊಂದಿದ್ದು, ಆಡಳಿತರೂಢ ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಗಳ ನಡುವೆ ನೇರ ಸ್ಪರ್ಧೆ ಇದೆ. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ್ನು ಮಣಿಸಿ ಸತತ ಎರಡನೇ ಬಾರಿ ಅಧಿಕಾರದ ಗದ್ದುಗೆಗೆ ಏರಲು ಉತ್ಸುಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News