ಅರ್ಜುನ ಪ್ರಶಸ್ತಿ ಪುರಸ್ಕೃತ ಗೌರವ್ ಗಿಲ್ ಚಲಾಯಿಸುತ್ತಿದ್ದ ರೇಸ್ ಕಾರು ಢಿಕ್ಕಿ: ಮೂವರು ಮೃತ್ಯು

Update: 2019-09-21 17:32 GMT

ಜೋಧ್‌ಪುರ, ಸೆ.21: ಇಂಡಿಯನ್ ನ್ಯಾಶನಲ್ ರ್ಯಾಲಿ ಚಾಂಪಿಯನ್‌ ಶಿಪ್‌ ನ ವೇಳೆ ಅರ್ಜುನ ಪ್ರಶಸ್ತಿ ಪುರಸ್ಕೃತ ಗೌರವ್ ಗಿಲ್ ಅವರು ಚಲಾಯಿಸುತ್ತಿದ್ದ ಕಾರು ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್‌ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.

ಇಲ್ಲಿ ಶನಿವಾರ ಚಾಂಪಿಯನ್ಸ್ ಯಾಚಾತ್ ಕ್ಲಬ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಶನಲ್ ರ್ಯಾಲಿಯಲ್ಲಿ ಗಿಲ್ ಅವರ ಕಾರು ಫಿನಿಶಿಂಗ್ ಲೈನ್ ತಲುಪಲು ಇನ್ನೂ 150 ಮೀಟರ್ ದೂರ ಬಾಕಿ ಇದ್ದಾಗ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.

ಬೈಕ್‌ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಆದರೆ ಅವರ್ಯಾರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.

ರ್ಯಾಲಿ ವೇಳೆ ಸಂಘಟಕರು ಎಚ್ಚರಿಕೆ ನೀಡಿದ್ದರೂ ಬೈಕ್ ಸವಾರರು ಅಕ್ರಮವಾಗಿ ಟ್ರ್ಯಾಕ್ ಪ್ರವೇಶಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕಾರ್‌ ಗೆ ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ನಲ್ಲಿದ್ದ ಮೂವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ಗಿಲ್ ಅವರು ಗಾಯಗೊಂಡಿದ್ದಾರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಿಲ್ ಇಂಡಿಯನ್ ನ್ಯಾಶನಲ್ ರ್ಯಾಲಿ ಚಾಂಪಿಯನ್‌ಶಿಪ್(ಐಎನ್‌ಆರ್‌ಸಿ)ನಲ್ಲಿ 6 ಬಾರಿ ಚಾಂಪಿಯನ್ ಆಗಿದ್ದರು. ಮೋಟಾರು ಸ್ಪೋರ್ಟ್ಸ್ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ ಮೊದಲ ಚಾಲಕ ಎನಿಸಿಕೊಂಡಿದ್ದರು. ಅಪಘಾತದ ಬಳಿಕ ಮೋಟಾರು ರ್ಯಾಲಿ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News