ಒಲಿಂಪಿಕ್ಸ್ ಗೆ ಅರ್ಹತೆ ಪಡೆದ 4ನೇ ಕುಸ್ತಿಪಟು ದೀಪಕ್

Update: 2019-09-21 18:13 GMT

ನೂರ್-ಸುಲ್ತಾನ್(ಕಝಖ್‌ಸ್ತಾನ), ಸೆ.21: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ದೀಪಕ್ ಪೂನಿಯಾ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ನಾಲ್ಕನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 86 ಕೆಜಿ ತೂಕ ವಿಭಾಗದ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ ಚೊಚ್ಚಲ ಸೀನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ ದೀಪಕ್ ಕೊಲಂಬಿಯಾದ ಕಾರ್ಲೊಸ್ ಅರ್ಟುರೊ ಮೆಂಡೆಝ್ ಅವರನ್ನು 7-6 ಅಂತರದಿಂದ ಮಣಿಸಿದ್ದಾರೆ.

ದೀಪಕ್ ಮುಂದಿನ ಸುತ್ತಿನಲ್ಲಿ ಸ್ವಿಟ್ಝರ್ಲೆಂಡ್‌ನ ಸ್ಟೆಫನ್ ರೀಚ್‌ಮುತ್ ಸವಾಲು ಎದುರಿಸಲಿದ್ದಾರೆ.

61 ಕೆಜಿ ಒಲಿಂಪಿಕ್ಸ್‌ಯೇತರ ವಿಭಾಗದಲ್ಲಿ ರಾಹುಲ್ ಅವಾರೆ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ದೀಪಕ್ ಹಾಗೂ ರಾಹುಲ್ ಸೆಮಿ ಫೈನಲ್ ಹಾದಿಯಲ್ಲಿ ಕಝಖ್ ಕುಸ್ತಿಪಟುಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ್ದರು. ದೀಪಕ್ ಈಗ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಟಿಕೆಟ್ ಪಡೆದ ಭಾರತದ ನಾಲ್ಕನೇ ಕುಸ್ತಿಪಟು ಆಗಿದ್ದಾರೆ. ವಿನೇಶ್ ಪೋಗಟ್, ಬಜರಂಗ್ ಪೂನಿಯಾ ಹಾಗೂ ರವಿ ದಹಿಯಾ ಈಗಾಗಲೇ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಮೂವರು ಕಂಚಿನ ಪದಕ ಜಯಿಸಿದ್ದಾರೆ.

 ಜಿತೇಂದರ್(79ಕೆಜಿ)ಕ್ವಾರ್ಟರ್ ಫೈನಲ್‌ನಲ್ಲಿ ಸ್ಲೋವಾಕಿಯದ ಟೈಮುರಾಝ್ ಸಲ್ಕಾಝನೊವ್‌ಗೆ 0-4 ಅಂತರದಿಂದ ಸೋಲುಂಡರು. ವೌಸಮ್ ಖತ್ರಿ 97 ಕೆಜಿಯ ಮೊದಲ ಸುತ್ತಿನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ಕೈಲ್ ಫ್ರೆಡ್ರಿಕ್ ಸ್ನೈಡರ್ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಸೋತಿದ್ದಾರೆ.

ದೀಪಕ್ ಮೊದಲ ಸುತ್ತಿನ ಪಂದ್ಯದಲ್ಲಿ ಕಝಖ್‌ಸ್ತಾನದ ಆಡಿಲೆಟ್ ಡವ್ಲಂಬಯೆವ್ ವಿರುದ್ಧ 8-7 ಅಂತರದ ಜಯ ಸಾಧಿಸಿದ್ದರು. ತಜಿಕಿಸ್ತಾನದ ಬಖೊದುರ್ ಕೊಡಿರೊವ್‌ರನ್ನು 6-0 ಅಂತರದಿಂದ ಸೋಲಿಸಿದ ದೀಪಕ್ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News