​ದೇವಸ್ಥಾನ ಪಕ್ಕದಲ್ಲೇ ಕಸಾಯಿಖಾನೆ: ಬಿಜೆಪಿ ಯೋಜನೆ ತಡೆಗೆ ಮುಂದಾದ ಕಾಂಗ್ರೆಸ್!

Update: 2019-09-22 03:42 GMT

ಭೋಪಾಲ್, ಸೆ.22: ನಗರದ ಹೊರವಲಯದಲ್ಲಿ ದೇವಸ್ಥಾನದ ಪಕ್ಕದಲ್ಲೇ ಕಸಾಯಿಖಾನೆ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ಯೋಜನೆಯನ್ನು ತಕ್ಷಣ ತಡೆ ಹಿಡಿಯುವಂತೆ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ತಮ್ಮ ಪುತ್ರ, ಮಧ್ಯಪ್ರದೇಶ ಸಚಿವ ಜೈವರ್ಧನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ದೇವಾಲಯಗಳ ಒಳಗೆ ಅತ್ಯಾಚಾರಗಳು ನಡೆಯುತ್ತಿವೆ ಎಂಬ ಹೇಳಿಕೆಯಿಂದ ವಿವಾದದ ಕೇಂದ್ರಬಿಂದುವಾಗಿರುವ ಸಿಂಗ್, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯ ಅನುಷ್ಠಾನವನ್ನು ತಕ್ಷಣ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದ ನಗರಾಭಿವೃದ್ಧಿ ಖಾತೆ ಸಚಿವ ಹಾಗೂ ತಮ್ಮ ಪುತ್ರ ಜೈವರ್ಧನ್ ಸಿಂಗ್‌ಗೆ ಪತ್ರ ಬರೆದು, ಹಿಂದಿನ ಬಿಜೆಪಿ ಸರ್ಕಾರದ ಈ ನಿರ್ಧಾರ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿವರಿಸಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಕಂಕಾಳಿ ದೇವಸ್ಥಾನಕ್ಕೆ ಲಕ್ಷಾಂತರ ಯಾತ್ರಿಗಳು ಆಗಮಿಸುತ್ತಾರೆ. ಈ ದೇವಸ್ಥಾನ ಉದ್ದೇಶಿತ ಕಸಾಯಿಖಾನೆಯ ಸ್ಥಳವಾದ ಆದಾಂಪುರ ಚಾವ್ನಿಗೆ ಸನಿಹದಲ್ಲಿರುವುದು ಮಾತ್ರವಲ್ಲದೇ, ಕಂಕಾಳಿ ದೇವಸ್ಥಾನಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ರಾಮ ದೇವಸ್ಥಾನ ಹಾಗೂ ಇಸ್ಕಾನ್ ದೇವಸ್ಥಾನ ಕೂಡಾ ಇದೆ ಎಂದು ವಿವರಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಸುಭಾಷ್‌ ನಗರ ಕಸಾಯಿಖಾನೆಯನ್ನು ಆದಂಪುರ ಚಾವ್ನಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ತೀವ್ರ ವಿರೋಧದಿಂದಾಗಿ ಕಾಮಗಾರಿಯನ್ನು ಬಿಜೆಪಿ ಸರ್ಕಾರ ತಡೆಹಿಡಿದಿತ್ತು. ಆದರೆ 2017ರಲ್ಲಿ ಭೋಪಾಲ್ ಮಹಾನಗರ ಪಾಲಿಕೆ ಮೇಯರ್ ಮತ್ತೆ ಈ ಪ್ರಸ್ತಾವದಂತೆ ಕಾಮಗಾರಿ ಮುಂದುವರಿಸಲು ಸೂಚನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News