ಈ.ಡಿ. ಹೇಳಿದಂತೆ ಡಿಕೆಶಿಯ 21ನೆ ಬ್ಯಾಂಕ್ ಖಾತೆ ತೋರಿಸಲಿ: ನ್ಯಾಯವಾದಿ ಸಿಂಘ್ವಿ

Update: 2019-09-22 15:20 GMT

  ಹೊಸದಿಲ್ಲಿ, ಸೆ.22: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕರ್ನಾಟಕದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆಯ ಮೂಲಕ ಅಗಾಧ ಮೊತ್ತ ಕಲೆ ಹಾಕಿದ್ದಾರೆ ಎಂದು ಬಿಂಬಿಸುವ ಮೂಲಕ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

   ಈ ಪ್ರಕರಣದಲ್ಲಿ ಒಳಗೊಂಡಿದೆ ಎನ್ನಲಾದ ಮೊತ್ತವನ್ನು ದಿನೇ ದಿನೇ ಹೆಚ್ಚಿಸುವ ಮೂಲಕ ಜಾರಿ ನಿರ್ದೇಶನಾಲಯ ಅಗಾಧ ಮೊತ್ತದ ವಂಚನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಶಿವಕುಮಾರ್ ಹೆಸರಲ್ಲಿ 20 ಸಕ್ರಿಯ ಬ್ಯಾಂಕ್ ಖಾತೆಗಳಿವೆ. ಆದರೆ ಜಾರಿ ನಿರ್ದೇಶನಾಲಯದ ಪ್ರಕಾರ 317 ಬ್ಯಾಂಕ್ ಖಾತೆಗಳಿವೆ. ಡಿಕೆಶಿಯ ಹೆಸರಲ್ಲಿರುವ 21ನೇ ಖಾತೆಯನ್ನು ತನಗೆ ತೋರಿಸಿದರೆ ಇಲ್ಲೇ ಕುಳಿತುಬಿಡುತ್ತೇನೆ ಎಂದು ಸಿಂಘ್ವಿ ವಾದ ಮಂಡಿಸಿದರು.

   ಡಿಕೆ ಶಿವಕುಮಾರ್ ತಪ್ಪೆಸಗಿಲ್ಲ. ಆದರೂ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಹತಾಶ ಪ್ರಯತ್ನ ಮುಂದುವರಿಸಿದೆ ಎಂದು ಮತ್ತೊಬ್ಬ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಹೇಳಿದರು. ಒಂದು ಬಾರಿ ನಡೆದ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿದ ವಿಚಾರಣೆ ಇದಾಗಿದೆ. ಯಾವುದೇ ಅಪರಾಧ ಘಟಿಸಿಲ್ಲ ಆದರೂ ವಿಚಾರಣೆ ಮುಂದುವರಿಯುತ್ತಿದೆ. ಒಂದು ದಾಳಿಗೆ ಸಂಬಂಧಿಸಿದ ವಿಚಾರಣೆಯಲ್ಲಿ ಏನು ಬೇಕಾದರೂ ವಿಚಾರಣೆ ನಡೆಸಲು, ಎಲ್ಲಿಯಾದರೂ ವಿಚಾರಣೆ ನಡೆಸಲು ನಿಮಗೆ ಯಾರು ಅನುಮತಿ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದರು.

 ನ್ಯಾಯಾಲಯದ ಎದುರು ತನಿಖಾ ಸಂಸ್ಥೆಗಳು ನೀಡುತ್ತಿರುವ ಹೇಳಿಕೆಗಳಿಂದಾಗಿ ಜೈಲುಗಳು ತುಂಬಿ ತುಳುಕುತ್ತಿವೆ. ಪಿ ಚಿದಂಬರಂ ದೇಶ ಬಿಟ್ಟು ಪರಾರಿಯಾಗುವ ಭಯವಿದೆ, ಡಿಕೆಶಿ ದೇಶ ಬಿಟ್ಟು ಪರಾರಿಯಾಗಬಹುದು ಎಂದು ತನಿಖಾ ಸಂಸ್ಥೆಗಳು ಹೇಳುತ್ತಿವೆ. ಓರ್ವ ವಕೀಲರಾಗಿರುವ, 40 ವರ್ಷಗಳಿಂದ ರಾಜಕೀಯದಲ್ಲಿರುವ ಚಿದಂಬರಂ ದೇಶಬಿಟ್ಟು ಓಡಿಹೋಗುವ ಸಾಧ್ಯತೆ ಇದೆ ಎಂದಾದರೆ ಇತರ ಎಲ್ಲಾ ವ್ಯಕ್ತಿಗಳೂ ದೇಶ ಬಿಟ್ಟು ಓಡಿಹೋಗುವ ಸಾಧ್ಯತೆ ಇದೆ ಎಂದು ರೋಹಟ್ಗಿ ವಾದ ಮಂಡಿಸಿದರು.

ಈ ಪ್ರಕರಣದಲ್ಲಿ ಡಿಕೆಶಿ ಜಾಮೀನು ಅರ್ಜಿಯ ಕುರಿತು ಸೆ.25ರಂದು ನ್ಯಾಯಾಲಯ ತೀರ್ಪು ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News