ರಾಜ್ಯದ ಮಳೆ ಸಂತ್ರಸ್ತರನ್ನು ಬಲಿಕೊಟ್ಟು ಕೇಂದ್ರಕ್ಕೆ ಕೊಡೆ ಹಿಡಿದ ಬಿಜೆಪಿ

Update: 2019-09-22 18:32 GMT

ಈ ಹಿಂದೆ ಕನ್ನಡಕ್ಕೆ ಯಾವುದೇ ಅಪಾಯ ಅಥವಾ ಸಂಕಷ್ಟ ಒದಗಿ ಬಂದಾಗಲೂ ಸರ್ವ ಪಕ್ಷಗಳು ಒಂದಾಗುವ ಸಂಪ್ರದಾಯವಿತ್ತು. ಕೇಂದ್ರದಲ್ಲಿ ಯಾವುದೇ ಸರಕಾರ ಅಸ್ತಿತ್ವದಲ್ಲಿರಲಿ, ನಾಡು ನುಡಿಗೆ ಅಪಾಯ ಬಂದಾಗ ಪಕ್ಷಭೇದ ಮರೆತು ಸಂಸದರು ಒಂದಾಗಿ ಕೇಂದ್ರದೆಡೆಗೆ ನಿಯೋಗ ಹೊರಡುತ್ತಿದ್ದರು. ಕಾವೇರಿ ನೀರಿನ ವಿಷಯದಲ್ಲಿ ಅನ್ಯಾಯವಾದಾಗ, ಬೆಳಗಾವಿಯಲ್ಲಿ ಕನ್ನಡಕ್ಕೆ ಧಕ್ಕೆ ಬಂದಾಗ, ನೆರೆ, ಬರದಿಂದ ತತ್ತರಿಸಿದಾಗ ಕೇಂದ್ರದ ನೆರವಿಗಾಗಿ ಸರ್ವ ಪಕ್ಷ ಒಂದಾಗಿ ಒತ್ತಡ ಹೇರಿದ ಹಲವು ಉದಾಹರಣೆಗಳಿವೆ. ಕೇಂದ್ರದ ನೆರವನ್ನು ಯಾಚಿಸುವುದು ಎಂದರೆ ಕೇಂದ್ರದ ಜೊತೆಗೆ ಭಿಕ್ಷೆ ಬೇಡುವುದು ಎಂದರ್ಥವಲ್ಲ. ದೇಶವೆಂದರೆ ಹಲವು ರಾಜ್ಯಗಳ ಒಕ್ಕೂಟ ರಾಜ್ಯಗಳಿಗೆ ನೆರವಾಗುವುದು ಕೇಂದ್ರದ ಕರ್ತವ್ಯ. ಅದು ಹಣದ ರೂಪದಲ್ಲಿರಲಿ ಅಥವಾ ಇನ್ನಾವುದೇ ರೂಪದಲ್ಲಿರಲಿ. ಬರ ಅಥವಾ ನೆರೆ ಪರಿಹಾರದಲ್ಲಿ ತತ್ತರಿಸಿದಾಗ ತಕ್ಷಣ ಕೇಂದ್ರ ಸರಕಾರ, ಪರಿಹಾರ ಹಣ ಬಿಡುಗಡೆ ಮಾಡುವುದು ಉತ್ತಮ ಆಡಳಿತದ ಭಾಗ.

ಕೇಂದ್ರ ತನ್ನ ಕೈಯಿಂದಲೇನೂ ಈ ಹಣವನ್ನು ನೀಡುವುದಲ್ಲ. ರಾಜ್ಯಗಳಿಂದ ಸಂಗ್ರಹಿಸಿದ ಸಂಪನ್ಮೂಲಗಳನ್ನೇ ಆಯಾ ರಾಜ್ಯಗಳು ಸಂಕಷ್ಟದಲ್ಲಿದ್ದಾಗ ನೆರವಿನ ರೂಪದಲ್ಲಿ ಕೇಂದ್ರ ಸರಕಾರ ನೀಡುತ್ತದೆ. ರಾಜ್ಯದಲ್ಲಿ ನೆರೆ ಬಂದು ಸಹಸ್ರಾರು ಜನರು ಸಂಕಷ್ಟದಲ್ಲಿರುವಾಗ ಕೇಂದ್ರದ ನೆರವು ಕೇಳದೆ ರಾಜ್ಯವೇ ನಿಭಾಯಿಸಬೇಕು ಎಂದರೆ, ಕರ್ನಾಟಕ ಭಾರತದ ಭಾಗ ಅಲ್ಲ ಎಂದಾಯಿತು. ಕರ್ನಾಟಕವು ಸ್ವತಂತ್ರ ದೇಶವಾಗಿದ್ದರೆ ಇನ್ನೊಂದು ದೇಶದ ಜೊತೆಗೆ ಪರಿಹಾರವನ್ನು ಕೇಳುವ ಅಗತ್ಯವೂ ಬೀಳುವುದಿಲ್ಲ. ಕೇರಳದಲ್ಲಿ ನೆರೆ ಬಂದು ಜನರು ತತ್ತರಿಸಿದಾಗ ದೂರದ ಕೊಲ್ಲಿ ರಾಷ್ಟ್ರವು ಕೋಟ್ಯಂತರ ರೂಪಾಯಿ ನೆರವನ್ನು ನೀಡಲು ಮುಂದೆ ಬಂದಿತ್ತು. ಹೀಗಿರುವಾಗ, ಭಾರತದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದಲ್ಲಿ ನೆರೆ ಬಂದಾಗ ಅದಕ್ಕೆ ತಕ್ಷಣ ಸ್ಪಂದಿಸುವುದು ಕೇಂದ್ರದ ಕರ್ತವ್ಯ. ದುರದೃಷ್ಟಕ್ಕೆ, ಕರ್ನಾಟಕದಲ್ಲಿ ನೆರೆಬಂದು ಅರ್ಧಕ್ಕರ್ಧ ರಾಜ್ಯವೇ ಕೊಚ್ಚಿ ಹೋಗಿರುವ ಹೊತ್ತಿನಲ್ಲಿ, ಕೇಂದ್ರ ಈವರೆಗೆ ಕಣ್ಣು ಹಾಯಿಸಿಲ್ಲ. ಸ್ವತಃ ಪ್ರಧಾನಿ ರಾಜ್ಯಕ್ಕೆ ಬಂದು, ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರವನ್ನು ಘೋಷಿಸಬೇಕಾಗಿತ್ತು. ಭೇಟಿ ನೀಡುವುದು ಪಕ್ಕಕ್ಕಿರಲಿ, ಪರಿಹಾರವನ್ನು ಕೇಳುತ್ತಿರುವ ಕರ್ನಾಟವನ್ನು ಭಿಕ್ಷುಕನನ್ನು ಕಂಡಂತೆ ವರ್ತಿಸುತ್ತಿದೆ. ಕೇಂದ್ರದ ಈ ವರ್ತನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹತಾಶೆಯಿಂದ ಮಾತನಾಡುವಂತಾಗಿದೆ.

ಅತ್ಯಂತ ದುರಂತದ ಸಂಗತಿಯೆಂದರೆ, ಈ ಸಂದರ್ಭದಲ್ಲಿ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದ್ದ ಬಿಜೆಪಿ ಸಂಸದರು, ನೆರೆ ಸಂತ್ರಸ್ತರ ರಕ್ಷಣೆಗೆ ನಿಲ್ಲದೆ ಕೇಂದ್ರದ ರಕ್ಷಣೆಗೆ ಹೊರಟಿರುವುದು. ಒಬ್ಬ ಮೂರ್ಖ ಸಂಸದ, ರಾಜ್ಯಕ್ಕೆ ಕೇಂದ್ರ ಸರಕಾರ ನೆರೆ ಪರಿಹಾರ ನೀಡುವ ಅಗತ್ಯ ಇಲ್ಲ ಎಂದು ನೆರೆ ಪೀಡಿತರ ಬದುಕಿಗೇ ಬರೆ ಇಟ್ಟಿದ್ದಾರೆ. ‘‘ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬಾರದು. ರಾಜ್ಯ ಸರಕಾರದ ಬಳಿ ಅದಕ್ಕೆ ಬೇಕಾದ ಸಂಪನ್ಮೂಲವಿದೆ’’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನೀಡಿರುವ, ರಾಜ್ಯ ವಿರೋಧಿ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೊಳಗಾಗುತ್ತಿವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ, ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯಕ್ಕೆ ಹೆಚ್ಚು ಸಹಾಯ ದೊರಕಬೇಕಾಗಿತ್ತು. ರಾಜ್ಯದಿಂದ ಆಯ್ಕೆಯಾಗಿರುವ ಬಹುತೇಕ ಸಂಸದರು ಬಿಜೆಪಿಯವರೇ ಆಗಿರುವುದರಿಂದ, ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುವ ಸಂಪೂರ್ಣ ಹೊಣೆಗಾರಿಕೆ ಇವರದ್ದೇ ಆಗಿದೆ. ಆದರೆ ಪರಿಹಾರಕ್ಕೆ ಒತ್ತಾಯಿಸುವುದು ಪಕ್ಕಕ್ಕಿರಲಿ, ಕೇಂದ್ರ ಪರಿಹಾರವನ್ನು ನೀಡುವ ಅಗತ್ಯವೇ ಇಲ್ಲ ಎಂಬಂತಹ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ನೀಡಿದ್ದಾರೆ. ‘‘ಪ್ರಧಾನಿ ಮೋದಿಯವರು ಪ್ರಧಾನಿಯಾದ ಬಳಿಕ ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದ್ದಾರೆ. ಅತಿವೃಷ್ಟಿಯಾದ ಸಂದರ್ಭದಲ್ಲಿ ರಾಜ್ಯಗಳು ಕೇಂದ್ರದ ಕದ ತಟ್ಟದಿರಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ’’ ಎಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆಯೇ ಹೊರತು, ಆಕಸ್ಮಿಕವಾಗಿ ಎದುರಾಗುವ ಬರ, ನೆರೆ, ಭೂಕಂಪದಂತಹ ಪ್ರಕೃತಿ ವಿಕೋಪಗಳನ್ನು ಎದುರಿಸುವುದಕ್ಕಲ್ಲ ಎನ್ನುವ ಸಣ್ಣ ಅಂಶವನ್ನು ತಿಳಿಯದ ಸಂಸದ ತನ್ನ ಕ್ಷೇತ್ರವನ್ನಾದರೂ ಹೇಗೆ ಅಭಿವೃದ್ಧಿಗೊಳಿಸಬಲ್ಲ? ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆಯಾದ ಹಣವನ್ನು ಬರ, ನೆರೆಗಳಿಗೆ ಬಳಸಲಾಗುವುದಿಲ್ಲ ಮತ್ತು ಇಂತಹ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿಯೇ ಕೇಂದ್ರ ತನ್ನ ಬಳಿ ನಿಧಿಯನ್ನು ಇಟ್ಟುಕೊಂಡಿದೆಯೆನ್ನುವ ಸಂಗತಿ ಸಂಸದರಿಗೆ ಹೊಳೆಯಬೇಕಾಗಿತ್ತು. ಇಂತಹ ಪ್ರಕೃತಿ ವಿಕೋಪಗಳು ತೀವ್ರ ಪರಿಣಾಮವನ್ನು ಮಾಡಿದರೆ ಅವುಗಳನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ಕ್ರಮ ಕೈಗೊಳ್ಳುವುದು ಸರಕಾರದ ಹೊಣೆಗಾರಿಕೆ. ಇಲ್ಲಿ, ಕನಿಷ್ಠ ಪರಿಹಾರವನ್ನು ಕೂಡ ಕೇಂದ್ರ ನೀಡುವುದಕ್ಕೆ ಮುಂದೆ ಬಂದಿಲ್ಲ ಮತ್ತು ಕೇಂದ್ರದ ಈ ನಿಲುವನ್ನು ಅದೇ ಸರಕಾರದ ಸಂಸದನೊಬ್ಬ ಬಹಿರಂಗವಾಗಿ ಸಮರ್ಥಿಸುವ ಸಾಹಸಕ್ಕಿಳಿದಿದ್ದಾರೆ. ಇಷ್ಟೇ ಅಲ್ಲ ‘‘ನೆರೆಯ ವಿಷಯದಲ್ಲಿ ರಾಜಕೀಯ ಮಾಡಬೇಡಿ’’ ಎಂದೂ ವಿರೋಧ ಪಕ್ಷದ ನಾಯಕರಿಗೆ ಈ ಎಳೆ ಸಂಸದ ಸಲಹೆ ನೀಡಿದ್ದಾರೆ.

ರಾಜ್ಯ ಸಂಕಟದಲ್ಲಿರುವಾಗ ಅವರ ಪರವಾಗಿ ನಿಂತು ರಾಜಕೀಯ ನಡೆಸುವುದರಲ್ಲಿ ತಪ್ಪೇನಿದೆ? ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಕೇಂದ್ರವನ್ನು ಒತ್ತಾಯಿಸುವುದು ರಾಜಕೀಯವಾದರೆ, ರಾಜಕಾರಣಿಗಳು ರಾಜಕಾರಣ ಮಾಡಬೇಕಾದುದು ಯಾವ ವಿಷಯದ ಮೇಲೆ? ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟುವುದು, ಕೋಮು ಹಿಂಸೆಗೆ ಕರೆ ನೀಡುವುದು ಇತ್ಯಾದಿಗಳನ್ನು ಮಾಡುತ್ತಾ ಕಾಲ ಕಳೆಯುವುದು ಸಂಸದರ ಕೆಲಸವೇ? ರಾಜ್ಯ ನೆರೆಯಿಂದ ತತ್ತರಿಸಿ ಕೂತಾಗ ‘‘ಅವರಿಗೆ ಪರಿಹಾರ ನೀಡಬೇಡಿ’’ ಎಂದು ಕೇಂದ್ರಕ್ಕೆ ಪರೋಕ್ಷ ಸಲಹೆ ನೀಡುವುದು ತನಗೆ ಮತನೀಡಿದ ಮತದಾರರ ಋಣ ಸಂದಾಯ ಮಾಡುವ ರೀತಿಯೇ? ಪರಿಹಾರಕ್ಕಾಗಿ ಕೇಂದ್ರವನ್ನು ಪ್ರಶ್ನಿಸುವ, ಒತ್ತಾಯಿಸುವ ಧೈರ್ಯವಿಲ್ಲದೆ, ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟು ಕೇಂದ್ರವನ್ನು ಸಮರ್ಥಿಸಲು ಮುಂದಾಗಿರುವ ಬಿಜೆಪಿ ಸಂಸದ ರಾಜ್ಯದ ಕ್ಷಮೆಯಾಚಿಸಬೇಕಾಗಿದೆ. ಸಂಸದ ಕ್ಷಮೆಯಾಚಿಸುವವರೆಗೂ ಆತನಿಗೆ ರಾಜ್ಯ ಪ್ರವೇಶವನ್ನೇ ತಡೆಹಿಡಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News