ಉತ್ತರ ಭಾರತೀಯರು ದಕ್ಷಿಣದ ಭಾಷೆಗಳನ್ನು ಕಲಿಯಲಿ: ಹಿರಿಯ ಪತ್ರಕರ್ತ ರವೀಶ್ ಕುಮಾರ್

Update: 2019-09-23 05:50 GMT

ಪತ್ರಕರ್ತರು ತುಂಬಾ ದುಃಖಿಯಾಗಿದ್ದಾರೆ. ಸತ್ಯವನ್ನು ತಿಳಿಸಬೇಕು ಎಂದು ಬಯಸುತ್ತಾರೆ. ಆದರೆ, ಸಾಧ್ಯವಾಗುತ್ತಿಲ್ಲ. ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ. ಆದರೆ, ಇದು ಕಾರ್ಪೊರೇಟ್ ಮಾಲಕರಿಗೆ ಸಂಬಂಧಿಸಿದ ವಿಚಾರ. ಅವರು ತಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ. ಇಲ್ಲಿ ನಮ್ಮ ಮಕ್ಕಳ ಕೈಗೆ ಯಾವುದೇ ವಿಚಾರವಿಲ್ಲದ ಹಿಂದಿ ಪತ್ರಿಕೆಗಳನ್ನು ಕೊಟ್ಟುಬಿಡುತ್ತಾರೆ.

ಉತ್ತರ ಭಾರತೀಯರು ದಕ್ಷಿಣದ ಎರಡು ಅಥವಾ ಮೂರು ಭಾಷೆಗಳನ್ನು ಕಲಿಯಬೇಕು. ಇಲ್ಲದಿದ್ದರೆ ಕನಿಷ್ಠ ಒಂದು ಭಾಷೆ ಅಥವಾ ಅದರಲ್ಲಿನ ಹತ್ತು ಪದಗಳನ್ನಾದರೂ ಕಲಿಯುವ ಪ್ರಯತ್ನ ಮಾಡಬೇಕು. ಆಗ ಮಾತ್ರ ಭಾಷೆಯ ಚರ್ಚೆಯಲ್ಲಿ ಭಾಗವಹಿಸಲು ಅವರು ಅರ್ಹರಾಗುತ್ತಾರೆ ಎಂದು ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
 ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಹಿಂದಿಯನ್ನು ರಾಷ್ಟ್ರಭಾಷೆಯಾಗಿಸುವ ಪ್ರಯತ್ನದ ಕುರಿತಂತೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತಂತೆ ಅವರು ಈ ಸಂದರ್ಭದಲ್ಲಿ ಚರ್ಚೆ ನಡೆಸಿದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 ಪ್ರಶ್ನೆ: ಒಂದು ದೇಶ, ಒಂದು ಭಾಷೆ ಆಗಬೇಕು ಎಂದು ಹಿಂದಿ ಭಾಷೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?
 ರವೀಶ್‌ಕುಮಾರ್: ಬೆಂಗಳೂರಿನಲ್ಲಿ ಟ್ಯಾಕ್ಸಿಯವರು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಹಾಗೂ ತೆಲುಗು ಐದು ಭಾಷೆಗಳನ್ನು ಮಾತನಾಡುತ್ತಾರೆ. ಅಮಿತ್ ಶಾ ಅವರನ್ನು ಇಲ್ಲಿನ ಟ್ಯಾಕ್ಸಿಗಳಲ್ಲಿ ಓಡಾಡಿಸಬೇಕು. ಇದರಿಂದ ಅವರು ಐದು ಭಾಷೆ ಕಲಿಯಲು ಸಾಧ್ಯವಾಗುತ್ತದೆ. ಅವರು ಗುಜರಾತಿ. ಆದರೆ, ಹಿಂದಿ ಮಾತನಾಡುತ್ತಾರೆ. ಉತ್ತರ ಪ್ರದೇಶದಲ್ಲಿ 10 ಲಕ್ಷ ಮಕ್ಕಳು 10 ಹಾಗೂ 12ನೇ ತರಗತಿಯಲ್ಲಿ ಹಿಂದಿ ಭಾಷೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಬಗ್ಗೆ ಅವರು ಏನು ಹೇಳುವುದಿಲ್ಲ. ಆದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಮಾಡಲು ಹೊರಟಿದ್ದಾರೆ.
 ಪ್ರಶ್ನೆ: ಕಳೆದ ಒಂದು ದಶಕದಲ್ಲಿ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಆಗಿರುವ ಬದಲಾವಣೆ ಕುರಿತು ಏನು ಹೇಳುತ್ತೀರಿ?
 ರವೀಶ್: ಈ ಮಾಧ್ಯಮ ಜನ ವಿರೋಧಿ. ಜನರು ಇವತ್ತಿನ ಮಾಧ್ಯಮಗಳ ಬಗ್ಗೆ ಜಾಗೃತರಾಗಿರಬೇಕು. ಓದುಗ ತನ್ನ ಕೆಲಸ ಮಾಡುತ್ತಿದ್ದಾನೆ. ಆದರೆ, ಅದನ್ನು ಸಿದ್ಧಪಡಿಸುವವರು, ಅದರಲ್ಲಿ ಬರೆಯುವವರು ತಮ್ಮ ಕೆಲಸವನ್ನು ಅಷ್ಟೇ ಆಸಕ್ತಿಯಿಂದ ಮಾಡುತ್ತಿದ್ದಾರೆಯೇ ಎಂಬುದನ್ನು ನಾವು ನೋಡಬೇಕಿದೆ. ಪ್ರಜಾಪ್ರಭುತ್ವದ ಮಟ್ಟಕ್ಕೆ ಮಾಧ್ಯಮ ಏರುತ್ತಿಲ್ಲ.
ಓದುಗರು ಪತ್ರಿಕೆಗಳ ಮೇಲೆ ಒತ್ತಡ ಹೇರಬೇಕು. ನಾವು ಮಾಹಿತಿ ಪಡೆಯಲು ಪತ್ರಿಕೆ ಖರೀದಿಸುತ್ತೇವೆ. ಆದರೆ, ನೀವು ಯಾವ ಮಾಹಿತಿ ನೀಡುತ್ತಿದ್ದೀರಾ ಎಂದು ಪ್ರಶ್ನಿಸಬೇಕಿದೆ? ಓದುಗ ತನ್ನ ಸ್ವಾಭಿಮಾನ ಉಳಿಸಬೇಕಾದರೆ ಪ್ರಭುತ್ವವನ್ನು ಓಲೈಸುವ ಪತ್ರಿಕೆಗಳನ್ನು ಬಹಿಷ್ಕರಿಸಬೇಕು, ಸುದ್ದಿ ವಾಹಿನಿಗಳ ಚಂದಾದಾರರಾಗುವುದನ್ನು ನಿಲ್ಲಿಸಬೇಕು. ಜನತೆ ಎಲ್ಲಿಯವರೆಗೆ ಇವರ ಮೇಲೆ ಒತ್ತಡ ಹೇರುವುದಿಲ್ಲವೋ ಈ ಪತ್ರಿಕೆಗಳಲ್ಲಿ ಸುಧಾರಣೆಯಾಗುವುದಿಲ್ಲ. ಸದ್ಯದ ದಿನಗಳಲ್ಲಿ ಪತ್ರಕರ್ತರು ಎಷ್ಟರಮಟ್ಟಿಗೆ ಹೋರಾಟ ಮಾಡಬಹುದು? ಪತ್ರಕರ್ತರಾದ ನಾವು ಜನಸಾಮಾನ್ಯರಿಗೆ ದೇಶದ ಲೋಕತಂತ್ರದ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಪತ್ರಿಕೆಗಳಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ದಿನನಿತ್ಯ ನಾವು ಯಾರನ್ನೆಲ್ಲ ಭೇಟಿಯಾಗುತ್ತೇವೆಯೋ ಅವರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು.
 ಪ್ರಶ್ನೆ: ಸತ್ಯವನ್ನು ತಿಳಿಸುವ ಪತ್ರಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟುವ ಕೆಲಸವಾಗುತ್ತಿದೆಯಲ್ಲ?
 ರವೀಶ್: ಹೌದು. ಇಂತಹ ಸಂದರ್ಭದಲ್ಲಿ ಓದುಗರು ಪತ್ರಕರ್ತರೊಂದಿಗೆ ನಿಲ್ಲದಿದ್ದರೆ ಪ್ರಜಾಪ್ರಭುತ್ವವನ್ನು ಉಳಿಸುವುದು ಹೇಗೆ?
ಒಬ್ಬ ಪತ್ರಕರ್ತ ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ. ಪತ್ರಕರ್ತ ಎರಡು ಸಾಲುಗಳನ್ನು ಬರೆಯುವುದು ಕಷ್ಟಕರವಾಗುವಂತಹ ದೇಶವನ್ನು ನಿರ್ಮಿಸುವ ನಿರ್ಣಯವನ್ನು ಈ ದೇಶದ ನಾಗರಿಕರು ಯಾಕೆ ತೆಗೆದುಕೊಂಡಿದ್ದಾರೆ ಎಂದು ಕೇಳಲು ಬಯಸುತ್ತೇನೆ.
ನಿಮ್ಮ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವವರು ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದರೆ ನೀವು ಅವರ ಬೆಂಬಲಕ್ಕೆ ನಿಲ್ಲುತ್ತಿರುವುದು ಎಷ್ಟರಮಟ್ಟಿಗೆ ಸರಿ? ಓದುಗರು ಪತ್ರಿಕೆಗಳ ಖರೀದಿಗೆ ಹಾಗೂ ಸುದ್ದಿವಾಹಿನಿಗಳ ಚಂದಾದಾರಾಗಲು ಖರ್ಚು ಮಾಡುತ್ತಿರುವ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಿ, ನಿಮ್ಮ ಮನೆಗಳ ಹೊರಗೆ ಪ್ರಧಾನಿಯ ಭಾವಚಿತ್ರ ಹಾಕಿಕೊಳ್ಳಿ. ಇದರಿಂದ ಅವರು(ನರೇಂದ್ರ ಮೋದಿ) ಬೇಸರಗೊಳ್ಳುವುದಿಲ್ಲ. ಪತ್ರಿಕೆಗಳಲ್ಲಿ ಪ್ರತಿದಿನ ಅವರ ಮುಖವೇ ನೋಡುವುದಾದರೆ ಅದಕ್ಕಿಂತ ಇದು ಉತ್ತಮವಲ್ಲವೆ. ಅವರ ಜನಪ್ರಿಯತೆಯೂ ಹೆಚ್ಚಾಗುತ್ತದೆ.
 ಪ್ರಶ್ನೆ: 370ನೇ ವಿಧಿ ರದ್ದು ಬಳಿಕ ಕಾಶ್ಮೀರದಲ್ಲಿನ ಸಮಸ್ಯೆಗಳ ಬಗ್ಗೆ ಏನು ಹೇಳುತ್ತೀರಾ?
 ರವೀಶ್: ಕಾಶ್ಮೀರದಲ್ಲಿ ಕಳೆದ 45 ದಿನಗಳಿಂದ ಸಂವಹನದ ಯಾವ ಮೂಲವೂ ಇಲ್ಲ. 83 ವರ್ಷದ ಫಾರೂಕ್ ಅಬ್ದುಲ್ಲಾರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಕಾಶ್ಮೀರದ ಬಗ್ಗೆ ದೊಡ್ಡ ನಿರ್ಣಯ ತೆಗೆದುಕೊಂಡಿರುವವರು ಹೋಗಿ ಅಲ್ಲಿನ ಜನರ ಬಳಿ ಮಾತನಾಡಬೇಕಿತ್ತು. ದೇಶಾದ್ಯಂತ ರ್ಯಾಲಿಗಳನ್ನು ನಡೆಸುವವರು ಯಾಕೆ ಅಲ್ಲಿಗೆ ಹೋಗುತ್ತಿಲ್ಲ?
 ಹ್ಯೂಸ್ಟನ್‌ನಲ್ಲಿ ನಡೆಯಲಿರುವ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಅಲ್ಲಿನ ಪೌರತ್ವ ಪಡೆದವರು, ವೀಸಾ ಪಡೆದು ಹೋಗಿರುವವರು ಭಾಗವಹಿಸುತ್ತಿದ್ದಾರೆ. ಅದೇ ರೀತಿ ನಮ್ಮ ದೇಶದಲ್ಲಿ ಏನಾದರೂ ಅಲ್ಲಿಂದ ವಲಸೆ ಬಂದಿರುವ 10 ಲಕ್ಷ ಜನ ಸೇರಿ ಸಭೆ ಮಾಡಿ, ಅಲ್ಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದು ಭಾಷಣ ಮಾಡಿದರೆ, ಇಲ್ಲಿನ ಮುಖ್ಯವಾಹಿನಿಯ ಆ್ಯಂಕರ್‌ಗಳು ಸಭೆಯಲ್ಲಿ ಸೇರಿದವರನ್ನೆಲ್ಲ ದೇಶದ್ರೋಹಿಗಳು ಎಂದು ಬಿಂಬಿಸಿ, ಎನ್‌ಆರ್‌ಸಿ ತನ್ನಿ ಎಂದು ಆಗ್ರಹ ಮಾಡಬಹುದು.
ಅಮೆರಿಕ ಹಾಗೂ ಅಲ್ಲಿನ ಸಮಾಜಕ್ಕೆ ನಮ್ಮ ಪ್ರಧಾನಿ ಧನ್ಯವಾದ ಹೇಳಬೇಕು. ಬಿಹಾರದ ವ್ಯಕ್ತಿ ರಶ್ಯಗೆ ಹೋಗಿ ಶಾಸಕನಾಗುತ್ತಾನೆ. ಅಮೆರಿಕ, ಆಸ್ಟ್ರೇಲಿಯದಲ್ಲಿಯೂ ನಮ್ಮ ದೇಶವರು ಶಾಸಕರಾಗಿದ್ದಾರೆ. ಅದನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಆದರೆ, ಯಾರಾದರೂ ಬೇರೆ ದೇಶದಿಂದ ಬಂದು ನಮ್ಮಲ್ಲಿ ಚುನಾವಣೆಗೆ ನಿಂತರೆ ದೇಶದ ಭದ್ರತೆ ಸಂಕಷ್ಟದಲ್ಲಿದೆ ಎಂದು ಹೇಳುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತೇವೆ. ಪ್ರಜಾಪ್ರಭುತ್ವದ ವಿಚಾರದಲ್ಲಿ ತುಂಬಾನೇ ಹೇಡಿ ಹಾಗೂ ಬಲಹೀನರಾಗಿದ್ದೇವೆ.
 ಪ್ರಶ್ನೆ: ಪ್ರಧಾನಿ ಮೋದಿಯ ಸಂದರ್ಶನ ನಡೆಸಲು ನಿಮಗೆ ಅವಕಾಶ ಸಿಕ್ಕರೆ ಕೇಳುವ ಮೊದಲ ಪ್ರಶ್ನೆ ಏನು?
 ರವೀಶ್: ಮೊದಲ ಪ್ರಶ್ನೆ ಏನು ಎಂದು ಈಗಲೇ ಹೇಳುವುದು ಸರಿಯಾಗುವುದಿಲ್ಲ. ಬೇರೆಯವರಂತೆ ನಾನು ಸಹ ಅವರಿಗೆ ನಮ್ಮ ಪ್ರಧಾನಿ ಎಂದು ಗೌರವ ಕೊಡುತ್ತೇನೆ. ಸಂದರ್ಶನ ಮಾಡಲು ಆಹ್ವಾನ ನೀಡಿದರೆ ಖಂಡಿತ ಹೋಗುತ್ತೇನೆ. ಆದರೆ, ಮಾವಿನ ಹಣ್ಣಿನ ಬಗ್ಗೆ ಮಾತ್ರ ಪ್ರಶ್ನೆ ಕೇಳುವುದಿಲ್ಲ.
 ಪ್ರಶ್ನೆ: ನಾಗರಿಕ ಪತ್ರಿಕೋದ್ಯಮ-ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ಬಗ್ಗೆ ಏನು ಹೇಳುತ್ತೀರಾ?
 ರವೀಶ್: ನಾಗರಿಕ ಪತ್ರಿಕೋದ್ಯಮ ನಡೆಸುವುದು ಕಷ್ಟದ ಕೆಲಸ. ಮುಖ್ಯವಾಹಿನಿಯ ಪತ್ರಕರ್ತರಿಗೇ ಸಮಾಜ ಬೆಂಬಲ ನೀಡುತ್ತಿಲ್ಲ. ಅಂತಹದರಲ್ಲಿ ನಾಗರಿಕ ಪತ್ರಕರ್ತರಿಗೆ ಹೇಗೆ ಸಹಕಾರ ನೀಡುತ್ತದೆ. ಇದೊಂದು ಕಠಿಣ ಹಾಗೂ ಸವಾಲಿನ ಕೆಲಸವಾಗಲಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಹೊರಗುತ್ತಿಗೆ ಪ್ರವೃತ್ತಿಯನ್ನು ಬೆಳೆಸಿದ ಪರಿಣಾಮವಾಗಿ ಈ ಸಮಸ್ಯೆ ಎದುರಾಗಿದೆ.
ಒಬ್ಬ ವೈದ್ಯ ಅಥವಾ ಒಬ್ಬ ವಕೀಲ ಎಂದಾದರೂ ನೀವು ನಾಗರಿಕ ವೈದ್ಯ, ನಾಗರಿಕ ವಕೀಲನಾಗು ಎಂದು ಯಾರಿಗಾದರೂ ಹೇಳಲು ಸಾಧ್ಯವೇ? ಸಮಾಜದಲ್ಲಿರುವ ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಬೇಕು. ಪತ್ರಕರ್ತರಾದವರು ನಾಗರಿಕರ ಪರವಾಗಿ ಕೆಲಸ ಮಾಡಬೇಕು.
ವಾಟ್ಸ್‌ಆ್ಯಪ್ ಯೂನಿವರ್ಸಿಟಿ ನಾಗರಿಕ ಪತ್ರಿಕೋದ್ಯಮವಲ್ಲ. ಅದು ಐಟಿ ಸೆಲ್‌ನ ಪ್ರಚಾರದ ಪ್ರಮುಖ ಅಸ್ತ್ರ. ಅಲ್ಲಿ ಜನರಿಗೆ ರಾಜಕೀಯ ಪ್ರೇರಿತ ಮಾಹಿತಿಯನ್ನು, ನೆಹರೂ, ಸರ್ದಾರ್ ಪಟೇಲ್ ಬಗ್ಗೆ ಸುಳ್ಳನ್ನು ನೀಡಲಾಗುತ್ತದೆ. ಬಹುಸಂಖ್ಯಾತರನ್ನು ಮುಸ್ಲಿಂ ವಿರೋಧಿಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ.
 ಯಾರು ಮೋದಿಗೆ ಮತ ನೀಡಿದ್ದಾರೋ ಅವರ ಸಮಸ್ಯೆಗಳನ್ನೇ ಮುಖ್ಯವಾಹಿನಿಯ ಮಾಧ್ಯಮಗಳು ತೋರಿಸುತ್ತಿಲ್ಲ. ಪತ್ರಕರ್ತ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇರುವ ವೇದಿಕೆಯನ್ನು ಹೈಜಾಕ್ ಮಾಡಲಾಗಿದೆ. ಮಾಧ್ಯಮ ಸಂಸ್ಥೆಯಲ್ಲಿ ಒಬ್ಬ ದಲಿತ ಸಂಪಾದಕನಿದ್ದರೂ ಆತನು ಕೂಡ ಇದೇ ಮಾದರಿಯ ಪ್ರಚಾರವನ್ನು ಮಾಡಬೇಕು.
 ಪ್ರಶ್ನೆ: ವೈಚಾರಿಕತೆ ಹರಡಿಸುವುದರಲ್ಲಿ ಪತ್ರಕರ್ತರು ಮಾಡಬೇಕಾದ ಕೆಲಸವನ್ನು ಹಾಸ್ಯಕಲಾವಿದರು ಮಾಡುತ್ತಿದ್ದಾರೆ ಎಂದು ಅನಿಸುತ್ತಿಲ್ಲವೇ?
 ರವೀಶ್: ಪತ್ರಕರ್ತರು ಮಾಡಬೇಕಾದ ಕೆಲಸವನ್ನು ಹಾಸ್ಯಕಲಾವಿದರು ಮಾಡುತ್ತಿದ್ದಾರೆ. ಆದರೆ, ವೃತ್ತಿಪರ ಭಾಷೆ, ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಪ್ರಭಾವಕ್ಕೂ ಹಾಸ್ಯ ಕಲಾವಿದರ ಕಾರ್ಯಕ್ರಮಗಳಲ್ಲಿ ಆಡಳಿತ ನಡೆಸುವವರ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳಿಗೂ ವ್ಯತ್ಯಾಸವಿದೆ.
 ಹಾಸ್ಯ ಕಲಾವಿದರಂತೆ ಮುಖ್ಯ ವಾಹಿನಿಯ ಮಾಧ್ಯಮಗಳು ತಮ್ಮ ಪಾಲಿನ ಕೆಲಸವನ್ನು ಮಾಡಿದರೆ ಮಾತ್ರ ಸಮಾಜದಲ್ಲಿ ಪರಿಣಾಮ ಕಾಣಲು ಸಾಧ್ಯ. ಮೋದಿ ಬಗ್ಗೆ ಯಾರಾದರೂ ವ್ಯಂಗ್ಯಚಿತ್ರ ಬರೆದರೆ ಆತ ಕೆಲಸ ಕಳೆದುಕೊಳ್ಳಬಹುದು, ಜೈಲಿಗೂ ಹೋಗಬಹುದು.
ರಾಜಾರಾಮ್ ಮೋಹನ್ ರಾಯ್ ಇವತ್ತು ಬದುಕಿದ್ದು ಹಿಂದೂ ಧರ್ಮದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ್ದರೆ, ಈ ಆ್ಯಂಕರ್‌ಗಳೆಲ್ಲ ಸೇರಿ ಅವರನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಿ, ಸತಿ ಸಹಗಮನ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿ ಅವರ ಮೇಲೆ ಗುಂಪು ಹಲ್ಲೆ ಮಾಡಿಸಿಬಿಡುತ್ತಿದ್ದರು.
 ಪ್ರಶ್ನೆ: ಮುಖ್ಯವಾಹಿನಿಯ ಮಾಧ್ಯಮಗಳ ಮುಂದಿರುವ ಸವಾಲುಗಳನ್ನು ಯಾವ ರೀತಿ ಎದುರಿಸಬಹುದು?
 ರವೀಶ್: ಪತ್ರಕರ್ತರು ತುಂಬಾ ದುಃಖಿಯಾಗಿದ್ದಾರೆ. ಸತ್ಯವನ್ನು ತಿಳಿಸಬೇಕು ಎಂದು ಬಯಸುತ್ತಾರೆ. ಆದರೆ, ಸಾಧ್ಯವಾಗುತ್ತಿಲ್ಲ. ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ. ಆದರೆ, ಇದು ಕಾರ್ಪೊರೇಟ್ ಮಾಲಕರಿಗೆ ಸಂಬಂಧಿಸಿದ ವಿಚಾರ. ಅವರು ತಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ. ಇಲ್ಲಿ ನಮ್ಮ ಮಕ್ಕಳ ಕೈಗೆ ಯಾವುದೇ ವಿಚಾರವಿಲ್ಲದ ಹಿಂದಿ ಪತ್ರಿಕೆಗಳನ್ನು ಕೊಟ್ಟುಬಿಡುತ್ತಾರೆ. ಜನತೆ ಈಗ ಪತ್ರಿಕೆಗಾಗಿ ಹೋರಾಡಬೇಕು. ಪತ್ರಿಕೋದ್ಯಮ ಸರ್ವನಾಶವಾಗುತ್ತಿದೆ. ಈಗಿನ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯವಿಲ್ಲದಂತಾಗಿದೆ. ಮುಖ್ಯ ವಾಹಿನಿಯಲ್ಲಿರುವ ಮಾಧ್ಯಮ ಸತ್ತು ಹೋಗಿದೆ.
 ಪ್ರಶ್ನೆ: ಪರ್ಯಾಯ ಮಾಧ್ಯಮಗಳ ಬೆಳವಣಿಗೆಗೆ ಅವಕಾಶವಿಲ್ಲವೇ?
 ರವೀಶ್: ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳ ಬಗ್ಗೆ ನಾವು ಈಗ ಚರ್ಚೆ ಮಾಡಬೇಕಿಲ್ಲ. ಕೋಟ್ಯಂತರ ರೂ. ಬಂಡವಾಳ ಹೂಡಿಕೆ ಮಾಡಿ, ಕೋಟ್ಯಂತರ ಜನರ ಬಳಿ ತಲುಪಿ ಅವರನ್ನು ನಂಬಿಸುತ್ತಿರುವವರ ಬಗ್ಗೆ ನಾವು ಹೋರಾಟ ಮಾಡಬೇಕಿದೆ. ಪರ್ಯಾಯ ಮಾಧ್ಯಮಗಳು ಇನ್ನೂ ಮುಖ್ಯವಾಹಿನಿ ಮಾಧ್ಯಮಗಳಿಗೆ ನೇರ ಸ್ಪರ್ಧೆ ಒಡ್ಡುವಂತಹ ಮಟ್ಟಕ್ಕೆ ಬೆಳೆದಿಲ್ಲ. ಯಾವತ್ತು ಆ ಶಕ್ತಿ ಪರ್ಯಾಯ ಮಾಧ್ಯಮಗಳಿಗೆ ಬರುತ್ತೊ ಆಗ ನಾವು ಮಾತನಾಡಬಹುದು.
 ಪ್ರಶ್ನೆ: ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸಿದರೆ, ಹಿಂದಿನ ಕಾಂಗ್ರೆಸ್ ಸರಕಾರಗಳತ್ತ ಬೊಟ್ಟು ಮಾಡುವ ಪ್ರವೃತ್ತಿ ಯಾಕೆ ಬೆಳೆದಿದೆ?
 ರವೀಶ್:   ಕಾಶ್ಮೀರದ ಪಂಡಿತರ ಬಗ್ಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಯಾರೊಬ್ಬರೂ ಬರೆಯದೇ ಇದ್ದಿದ್ದರೆ ಇವರಿಗೆ ಮಾಹಿತಿ ಎಲ್ಲಿಂದ ಸಿಗುತ್ತಿತ್ತು? ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಷ್ಟೇಯೇ ಈ ವಿಚಾರಗಳೆಲ್ಲ ಹೊರಗೆ ಬಂದಿರುವುದು? ದೇಶದಲ್ಲಿ ನಡೆಯುತ್ತಿರುವ ಗುಂಪುಗಳ ಹಲ್ಲೆಗಳ ಬಗ್ಗೆ ಸ್ಪಷ್ಟವಾದ ನಿಲುವು ತಾಳುವಂತೆ ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿತ್ತು. ಆದರೆ, ಯಾವುದೇ ಕ್ರಮ ಈ ನಿಟ್ಟಿನಲ್ಲಿ ನಡೆದಿಲ್ಲ.
  ಅಧಿಕಾರದಲ್ಲಿ ಮುಂದುವರೆಯಲು ಗುಂಪುಗಳನ್ನು ರಚಿಸಲಾಗುತ್ತಿದೆ. ಈ ರೋಬೋ ರಿಪಬ್ಲಿಕ್ ಒಂದು ಕಡೆ ಮುಸ್ಲಿಮರನ್ನು, ಮತ್ತೊಂದು ಕಡೆ ಮಕ್ಕಳ ಕಳ್ಳತನದ ಹೆಸರಿನಲ್ಲಿ ಹಿಂದೂ ಹಾಗೂ ಮುಸ್ಲಿಮರನ್ನು ಥಳಿಸಿ ಹತ್ಯೆ ಮಾಡುತ್ತಿದೆ. ಸುಭೋದ್ ಕುಮಾರ್ ಸಿಂಗ್, ಪೆಹ್ಲ್ಲೂ ಖಾನ್ ಹತ್ಯೆ ಇದಕ್ಕೆ ಉದಾಹರಣೆ. ಜಾರ್ಖಂಡ್‌ನಲ್ಲಿ ಜಯಂತ್ ಸಿನ್ಹಾ, ಗುಂಪು ಹಲ್ಲೆ ಪ್ರಕರಣದ ಆರೋಪಿಗಳಿಗೆ ಸಿಹಿ ತಿನ್ನಿಸುತ್ತಾರೆ. ಸುಭೋದ್ ಹತ್ಯೆ ಪ್ರಕರಣದ ಆರೋಪಿಗಳನ್ನು ಜನ ಸ್ವಾಗತಿಸುತ್ತಾರೆ. ಇದು ನಮ್ಮ ಸಮಾಜ. ಇಲ್ಲಿ ನಾಚಿಕೆ ಹಾಗೂ ಪಶ್ಚಾತ್ತಾಪಕ್ಕೆ ಸ್ಥಳವೇ ಇಲ್ಲದಂತಾಗಿದೆ.
 ಪ್ರಶ್ನೆ: ದೇಶದ ಇತಿಹಾಸವನ್ನು ತಿರುಚಿ, ಸತ್ಯ ಸಂಗತಿಗಳನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಏನು ಹೇಳುತ್ತೀರಾ?
 
ರವೀಶ್: ಮಧ್ಯಪ್ರದೇಶದ ಇಂಧೋರ್‌ನ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥರೊಬ್ಬರು ‘ಗೋಡ್ಸೆಯ ಪಿಸ್ತೂಲು ಹರಾಜು ಹಾಕಿ ನೋಡಿ’ ಅವರು ದೇಶ ಭಕ್ತರೋ ಅಥವಾ ಭಯೋತ್ಪಾದಕರೋ ಎಂಬುದು ಗೊತ್ತಾಗುತ್ತದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ್ದರು. ಯಾರಾದರೂ ಆ ಪಿಸ್ತೂಲನ್ನು 2 ಕೋಟಿ ರೂ.ಕೊಟ್ಟು ಖರೀದಿ ಮಾಡಿಬಿಟ್ಟರೆ, ಗೋಡ್ಸೆ ದೇಶಭಕ್ತನಾಗುತ್ತಾನೆ ಎಂದು ಅರ್ಥವಲ್ಲವೇ? ಇಂತಹ ಹೇಳಿಕೆಗಳನ್ನು ಸಮರ್ಥಿಸುವುದಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಇಂತಹವರನ್ನೆ ಜೊತೆಯಲ್ಲಿ ಕರೆದುಕೊಂಡು ತಿರುಗುತ್ತಾರೆ.
   ಇತಿಹಾಸದ ಬಗ್ಗೆ ನಮಗೆ ಉದ್ದೇಶಪೂರ್ವಕವಾಗಿ ತಪ್ಪು ತಿಳುವಳಿಕೆ ನೀಡಲಾಗುತ್ತಿದೆ. ರಾಜ್ಯದ ಚುನಾವಣೆ ನಡೆಯುತ್ತಿದ್ದ ವೇಳೆ ಮೋದಿ ಇಲ್ಲಿಗೆ ಬಂದು ಭಾಷಣ ಮಾಡುವ ವೇಳೆ ಭಗತ್‌ಸಿಂಗ್ ಜೈಲಿನಲ್ಲಿದ್ದಾಗ ಯಾವ ಕಾಂಗ್ರೆಸ್ ನಾಯಕರು ಅವರನ್ನು ಭೇಟಿ ಮಾಡಲು ಹೋಗಿರಲಿಲ್ಲ ಎಂದು ಸುಳ್ಳು ಹೇಳಿದ್ದರು. ಭಗತ್‌ಸಿಂಗ್‌ರನ್ನು ಭೇಟಿ ಮಾಡಿದವರ ಬಗ್ಗೆ ಹಲವಾರು ದಾಖಲೆಗಳು ಹೊರಗೆ ಬಂದಿವೆ. ತಾನು ಹೇಳುತ್ತಿರುವುದು ಸುಳ್ಳು ಎಂದು ಒಮ್ಮೆಯೂ ಮೋದಿ ಸ್ಪಷ್ಟೀಕರಣ ನೀಡುವುದಿಲ್ಲ. ಕನಿಷ್ಠ ಪಕ್ಷ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿಯಾದರೂ ಈ ಬಗ್ಗೆ ಹೇಳಿಕೆ ಕೊಡಲಿ.
  ಪ್ರಶ್ನೆ: ಹಾಂಕಾಂಗ್‌ನಲ್ಲಿ ಇತ್ತೀಚೆಗೆ ಚೀನಾದ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿ ನಮ್ಮ ದೇಶದ ಯುವಕರು ಯಾಕೆ ತಮ್ಮ ಸಮಸ್ಯೆಗಳ ವಿರುದ್ಧ ಒಂದಾಗುತ್ತಿಲ್ಲ?
 ರವೀಶ್: ಪ್ರಜಾಪ್ರಭುತ್ವದ ಚೇತನ ಕಳೆದುಕೊಂಡು, ವರದಕ್ಷಿಣೆ ಪಡೆದು ಮದುವೆಯಾಗುವ ಈ ಯುವಕರ ಮೇಲೆ ಯಾವ ನಂಬಿಕೆ ಇಡಲು ಸಾಧ್ಯ? ಇವರ ವೈಚಾರಿಕತೆ ಬಲಹೀನವಾಗಿದೆ. ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹಾಗೂ ಕೋಮುವಾದಿಗಳಾಗಲು ಮಾತ್ರ ಇವರಿಗೆ ಸಾಧ್ಯ. ಇದರಲ್ಲಿ ಯುವಕರ ತಪ್ಪಿಲ್ಲ. ಅವರಲ್ಲಿರುವ ಆಲೋಚನೆಯ ಶಕ್ತಿಯನ್ನು ಸಾಯಿಸಲಾಗಿದೆ. ಜ್ಞಾನವನ್ನು ಹಂಚಿಕೆ ಮಾಡುವ ಪ್ರವೃತ್ತಿ ನಾಶವಾಗಿದೆ. ಹಾಂಕಾಂಗ್ ಮಾದರಿಯನ್ನು ನಮ್ಮ ದೇಶದಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಇಲ್ಲಿನ ಯುವಕರನ್ನು ಭಾಷೆ, ಧರ್ಮ, ಪ್ರಾದೇಶಿಕತೆಯ ಮೇಲೆ ಹಂಚಿಕೆ ಮಾಡಲಾಗಿದೆ.

ಹ್ಯೂ ಸ್ಟನ್‌ನಲ್ಲಿ ನಡೆಯಲಿರುವ ‘ಹೌಡೀ ಮೋದಿ’ ಕಾರ್ಯಕ್ರಮದಲ್ಲಿ ಅಲ್ಲಿನ ಪೌರತ್ವ ಪಡೆದವರು, ವೀಸಾ ಪಡೆದು ಹೋಗಿರುವವರು ಭಾಗವಹಿಸುತ್ತಿದ್ದಾರೆ. ಅದೇ ರೀತಿ ನಮ್ಮ ದೇಶದಲ್ಲಿ ಏನಾದರೂ ಅಲ್ಲಿಂದ ವಲಸೆ ಬಂದಿರುವ 10 ಲಕ್ಷ ಜನ ಸೇರಿ ಸಭೆ ಮಾಡಿ, ಅಲ್ಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದು ಭಾಷಣ ಮಾಡಿದರೆ, ಇಲ್ಲಿನ ಮುಖ್ಯವಾಹಿನಿಯ ಆ್ಯಂಕರ್‌ಗಳು ಸಭೆಯಲ್ಲಿ ಸೇರಿದವರನ್ನೆಲ್ಲ ದೇಶದ್ರೋಹಿಗಳು ಎಂದು ಬಿಂಬಿಸಿ, ಎನ್‌ಆರ್‌ಸಿ ತನ್ನಿ ಎಂದು ಆಗ್ರಹ ಮಾಡಬಹುದು.

ಬೆಂಗಳೂರಿನಲ್ಲಿ ಟ್ಯಾಕ್ಸಿಯವರು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಹಾಗೂ ತೆಲುಗು ಐದು ಭಾಷೆಗಳನ್ನು ಮಾತನಾಡುತ್ತಾರೆ. ಅಮಿತ್ ಶಾ ಅವರನ್ನು ಇಲ್ಲಿನ ಟ್ಯಾಕ್ಸಿಗಳಲ್ಲಿ ಓಡಾಡಿಸಬೇಕು. ಇದರಿಂದ ಅವರು ಐದು ಭಾಷೆ ಕಲಿಯಲು ಸಾಧ್ಯವಾಗುತ್ತದೆ. ಅವರು ಗುಜರಾತಿ. ಆದರೆ, ಹಿಂದಿ ಮಾತನಾಡುತ್ತಾರೆ. ಉತ್ತರ ಪ್ರದೇಶದಲ್ಲಿ 10 ಲಕ್ಷ ಮಕ್ಕಳು 10 ಹಾಗೂ 12ನೇ ತರಗತಿಯಲ್ಲಿ ಹಿಂದಿ ಭಾಷೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.

ಪ್ರಜಾಪ್ರಭುತ್ವದ ಚೇತನ ಕಳೆದುಕೊಂಡು, ವರದಕ್ಷಿಣೆ ಪಡೆದು ಮದುವೆಯಾಗುವ ಈ ಯುವಕರ ಮೇಲೆ ಯಾವ ನಂಬಿಕೆ ಇಡಲು ಸಾಧ್ಯ? ಇವರ ವೈಚಾರಿಕತೆ ಬಲಹೀನವಾಗಿದೆ. ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹಾಗೂ ಕೋಮುವಾದಿಗಳಾಗಲು ಮಾತ್ರ ಇವರಿಗೆ ಸಾಧ್ಯ. ಇದರಲ್ಲಿ ಯುವಕರ ತಪ್ಪಿಲ್ಲ. ಅವರಲ್ಲಿರುವ ಆಲೋಚನೆಯ ಶಕ್ತಿಯನ್ನು ಸಾಯಿಸಲಾಗಿದೆ. ಜ್ಞಾನವನ್ನು ಹಂಚಿಕೆ ಮಾಡುವ ಪ್ರವೃತ್ತಿ ನಾಶವಾಗಿದೆ.

Writer - ಅಮ್ಜದ್‌ಖಾನ್ ಎಂ.

contributor

Editor - ಅಮ್ಜದ್‌ಖಾನ್ ಎಂ.

contributor

Similar News

ಜಗದಗಲ
ಜಗ ದಗಲ