×
Ad

ಕಾಂಗ್ರೆಸ್‌ನಂತೆ ನಾನೂ ಧೈರ್ಯಶಾಲಿ

Update: 2019-09-23 19:40 IST

ಹೊಸದಿಲ್ಲಿ,ಸೆ.23: ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಸೋಮವಾರ ಇಲ್ಲಿಯ ತಿಹಾರ ಜೈಲಿನಲ್ಲಿ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಐಎನ್‌ಎಕ್ಸ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅ.3ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ನನ್ನನ್ನು ಭೇಟಿಯಾಗಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿಗೆ ಆಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷವು ಎಲ್ಲಿಯವರೆಗೆ ಪ್ರಬಲ ಮತ್ತು ಧೈರ್ಯಶಾಲಿಯಾಗಿ ಮುಂದುವರಿಯುವುದೋ ಅಲ್ಲಿಯವರೆಗೆ ನಾನೂ ಪ್ರಬಲ ಮತ್ತು ಧೈರ್ಯಶಾಲಿಯಾಗಿರುತ್ತೇನೆ ’ಎಂದು ಭೇಟಿಯ ಬಳಿಕ ಚಿದಂಬರಂ ಟ್ವೀಟಿಸಿದ್ದಾರೆ. ಚಿದಂಬರಂ ಅವರ ಟ್ವಿಟರ್ ಖಾತೆಯನ್ನು ಅವರ ಕುಟುಂಬವು ನಿರ್ವಹಿಸುತ್ತಿದೆ.

ರವಿವಾರ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿರುವ ಚಿದಂಬರಂ, ‘ನಿರುದ್ಯೋಗ,ಉದ್ಯೋಗ ನಷ್ಟ,ಕಡಿಮೆ ವೇತನ,ಗುಂಪು ಹಿಂಸೆ, ಕಾಶ್ಮೀರದಲ್ಲಿ ನಿರ್ಬಂಧ ಮತ್ತು ಪ್ರತಿಪಕ್ಷ ನಾಯಕರ ಬಂಧನ ಇವುಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಪ್ರತಿಯೊಂದೂ ಚೆನ್ನಾಗಿದೆ ’ಎಂದು ಕುಟುಕಿದ್ದಾರೆ.

 ಚಿದಂಬರಂ ಪುತ್ರ ಕಾರ್ತಿ ಅವರೂ ಸೋಮವಾರ ಜೈಲಿನಲ್ಲಿ ತಂದೆಯನ್ನು ಭೇಟಿಯಾಗಿದ್ದರು. ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್ ಅವರು ಬೆಂಬಲವನ್ನು ವ್ಯಕ್ತಪಡಿಸಿರುವುದಕ್ಕೆ ತನ್ನ ತಂದೆ ಮತ್ತು ತನ್ನ ಕುಟುಂಬ ಅವರಿಗೆ ಋಣಿಯಾಗಿದ್ದೇವೆ. ಈ ರಾಜಕೀಯ ಹೋರಾಟದಲ್ಲಿ ಇದು ತಮಗೆ ಉತ್ತೇಜನ ನೀಡಲಿದೆ ಎಂದು ಹೇಳಿದ ಅವರು,ಮೂವರೂ ನಾಯಕರು ಆರ್ಥಿಕತೆಯ ಸ್ಥಿತಿಯ ಕುರಿತು ಸುದೀರ್ಘ ಚರ್ಚೆಗಳನ್ನು ನಡೆಸಿದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News