ಪಾರ್ಕಿಂಗ್ ಮಾಫಿಯಾ ಕೊನೆಗೊಳಿಸಿದ ಬ್ರಿಗೇಡ್ ರಸ್ತೆ ಮಾದರಿ: ದೇಶದ ಗಮನ ಸೆಳೆದ ಸುಹೈಲ್ ಯೂಸುಫ್ ಪರಿಚಯಿಸಿದ ಯಂತ್ರ

Update: 2019-09-23 17:21 GMT

ಬೆಂಗಳೂರು, ಸೆ.23: ರಾಜಧಾನಿಯಲ್ಲಿ ವಾಹನಗಳ ನಿಲುಗಡೆಗೆ ಸಂಗ್ರಹಿಸಲಾಗುತ್ತಿರುವ ದುಬಾರಿ ಶುಲ್ಕದ ಮಾಫಿಯಾವನ್ನು ಅಂತ್ಯಗೊಳಿಸಲು ಬ್ರಿಗೇಡ್ ರಸ್ತೆಯ ಅಂಗಡಿ ಮಾಲಕರ ಸಂಘದ ಕಾರ್ಯದರ್ಶಿ ಸುಹೈಲ್ ಯೂಸುಫ್ ಪರಿಚಯಿಸಿರುವ ಆಟೋಮೇಟೆಡ್ ಪಾರ್ಕಿಂಗ್ ವೆಂಡಿಂಗ್ ವ್ಯವಸ್ಥೆ ಇಡೀ ದೇಶದ ಗಮನ ಸೆಳೆದಿದೆ.

ವಾಹನ ಚಾಲಕರು, ಅಂಗಡಿ ಮಾಲಕರ ಅನುಕೂಲದ ಜೊತೆಗೆ ಪ್ರತಿ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಖಜಾನೆಗೆ ಸೇರದೆ ಮಾಫಿಯಾಗಳ ಕೈ ಪಾಲಾಗುತ್ತಿದ್ದ ಲಕ್ಷಾಂತರ ರೂ. ಆದಾಯವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿರುವ ಸುಹೇಲ್ ಯೂಸುಫ್ ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ದೇಶದ ಗಮನ ಸೆಳೆದ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವ ಆಲೋಚನೆ ಬಂದದ್ದು ಹೇಗೆ?

ನಾನು ವಿಶ್ವದ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಂಚಾರ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಯೂರೋಪ್, ದುಬೈಯಲ್ಲಿ ಈ ರೀತಿಯ ಪಾರ್ಕಿಂಗ್ ವ್ಯವಸ್ಥೆಯಿದೆ. ಆದರೆ ನಮ್ಮಲ್ಲಿ ಇರಲಿಲ್ಲ. 2004ರಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಾನು ಈ ಪದ್ಧತಿಯನ್ನು ಪರಿಚಯಿಸಿದೆ. ನಿಗದಿತ ಅವಧಿಯ ಪಾರ್ಕಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರಿಗೂ ಹೆಚ್ಚಿನ ಅನುಕೂಲವಾಗುತ್ತದೆ.

ಹೊಸ ವ್ಯವಸ್ಥೆ ಪರಿಚಯಿಸುವಾಗ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲವೇ?
ಸಾಕಷ್ಟು ಸಮಸ್ಯೆಗಳನ್ನು ಆಡಳಿತ ಯಂತ್ರದಿಂದ ಎದುರಿಸಬೇಕಾಯಿತು. ಅಂತಿಮವಾಗಿ ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಮೂಲಕ ನನಗೆ ಅನುಮತಿ ಸಿಕ್ಕಿತ್ತು. ಆನಂತರವೂ ಎರಡು ಗಂಟೆಗಿಂತ ಹೆಚ್ಚಿನ ಅವಧಿಗೆ ನಿಲುಗಡೆ ಮಾಡುವ ವಾಹನಗಳನ್ನು ಸಂಚಾರ ಪೊಲೀಸರು ತೆಗೆದುಕೊಂಡು ಹೋಗುವ ಸಂಬಂಧ ಅಧಿಸೂಚನೆ ಹೊರಡಿಸುವ ವಿಚಾರದಲ್ಲಿ ಸಾಕಷ್ಟು ವಾದ- ವಿವಾದ ನಡೆದು ನಮ್ಮ ವಾದಕ್ಕೆ ಗೆಲುವಾಯಿತು.

ಈ ಯೋಜನೆಯಲ್ಲಿ ಸರಕಾರದ ಪಾಲು ಏನು?
ಖಾಸಗಿ ಸಹಭಾಗಿತ್ವದ ಯೋಜನೆ ಇದಾಗಿದ್ದರೂ ಆದಾಯ ಹೋಗುವುದು ಸರಕಾರಕ್ಕೆ. ನಾವು ಯಾವುದೇ ಲಾಭದ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿಲ್ಲ. ಪ್ರತಿ ತಿಂಗಳು 2.25 ಲಕ್ಷ ರೂ. ಗಳಂತೆ ಒಂದು ವರ್ಷಕ್ಕೆ ಸರಾಸರಿ 27 ಲಕ್ಷ ರೂ. ಬಿಬಿಎಂಪಿಗೆ ಡಿಡಿ ಮೂಲಕ ಪಾವತಿಸುತ್ತಿದ್ದೇವೆ.

ಈ ಯಂತ್ರಗಳ ಬೆಲೆ, ನಿರ್ವಹಣೆ ವೆಚ್ಚ ಎಷ್ಟಾಗುತ್ತದೆ?
ಫ್ರಾನ್ಸ್‌ನಿಂದ ಈ ಎಂಟು ಯಂತ್ರಗಳನ್ನು ತಲಾ 6 ಲಕ್ಷ ರೂ. ವೆಚ್ಚದಲ್ಲಿ 48 ಲಕ್ಷ ರೂ. ಗಳನ್ನು ಪಾವತಿಸಿ ತರಿಸಲಾಯಿತು. ತಾಂತ್ರಿಕ ಸಮಸ್ಯೆಗಳು ಎದುರಾಗದಂತೆ ಕಾಲಕಾಲಕ್ಕೆ ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. 4-5 ಲಕ್ಷ ರೂ. ನಿರ್ವಹಣೆಗೆ ಖರ್ಚಾಗುತ್ತದೆ. ಇಲ್ಲಿ 85 ಕಾರುಗಳ ನಿಲುಗಡೆಗೆ ಅವಕಾಶವಿದೆ. ಅದರಲ್ಲಿ ಮಹಿಳೆಯರು ಚಲಾಯಿಸಿಕೊಂಡು ಬರುವ ವಾಹನಗಳ ನಿಲುಗಡೆಗೆ ಮೀಸಲು ಸ್ಥಳ ನಿಗದಿ ಮಾಡಲಾಗಿದೆ.

ನಗರದ ಬೇರೆ ರಸ್ತೆಗಳಲ್ಲೂ ಈ ಯಂತ್ರ ಅಳವಡಿಸುವ ಆಲೋಚನೆ ಇದೆಯೇ?
ನಾನು ಇಡೀ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಬಯಸಿದ್ದೆ. ಅದಕ್ಕೆ ಅಗತ್ಯವಿರುವ ಎಲ್ಲ ಮಾಹಿತಿ, ಮಾರ್ಗದರ್ಶನವನ್ನು ಉಚಿತವಾಗಿ ನೀಡುವುದಾಗಿ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದ್ದೆ. ಇಲ್ಲಿಯೂ ಯಾವುದೇ ಲಾಭದ ನಿರೀಕ್ಷೆಯಿಂದ ನಾವು ಈ ವ್ಯವಸ್ಥೆಯನ್ನು ಜಾರಿಗೆ ತಂದಿಲ್ಲ. ನಗರದ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಆದರೆ ಆಡಳಿತ ನಡೆಸುವವರಿಗೆ ಅದರ ಅಗತ್ಯವಿಲ್ಲದಂತೆ ಕಾಣುತ್ತಿದೆ.

ಪಾರ್ಕಿಂಗ್‌ನಿಂದ ಸಂಗ್ರಹವಾಗುವ ಹಣಕಾಸಿನ ವ್ಯವಹಾರವನ್ನು ಹೇಗೆ ನಿಭಾಯಿಸಲಾಗುತ್ತಿದೆ?
ಈ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದ್ದು ಯಾವುದೇ ರೀತಿಯಲ್ಲಿ ಹಣಕಾಸಿನ ಅವ್ಯವಹಾರವಾಗಲು ಸಾಧ್ಯವೇ ಇಲ್ಲ. ಒಂದು ಗಂಟೆಗೆ 10 ರೂ., ಎರಡು ಗಂಟೆಗೆ 20 ರೂ. ಪಾವತಿಸಬೇಕು. ಎರಡು ಗಂಟೆಗಿಂತ ಹೆಚ್ಚಿನ ಅವಧಿಗೆ ನಿಲುಗಡೆಗೆ ಅವಕಾಶವಿಲ್ಲ. ನಿಗದಿತ ಅವಧಿ ಇರುತ್ತದೆ. ಆನಂತರ ವಾಹನ ತೆಗೆಯಬೇಕು. ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ಹಣವನ್ನು ತೆಗೆಯಲಾಗುತ್ತದೆ. ಹಣ ತೆಗೆದ ಬಳಿಕ ಯಂತ್ರದಲ್ಲಿ ಲೆಕ್ಕಪರಿಶೋಧನ ವರದಿ ತಾನಾಗಿಯೇ ಮುದ್ರಿತವಾಗಿ ಹೊರ ಬರುತ್ತದೆ. ಅದರಲ್ಲಿ ನಿನ್ನೆ ಎಷ್ಟು ಮೊತ್ತ ತೆಗೆಯಲಾಗಿದೆ. ಇವತ್ತು ಎಷ್ಟು ಮೊತ್ತ ತೆಗೆಯಲಾಗಿದೆ ಎಂಬುದರ ಕುರಿತು ವರದಿಯಲ್ಲಿ ದಿನಾಂಕ ಹಾಗೂ ಸಮಯದ ಜೊತೆಗೆ ಮುದ್ರಿತವಾಗಿ ಹೊರ ಬರುತ್ತದೆ.

ಈ ವ್ಯವಸ್ಥೆಯಿಂದ ಇಲ್ಲಿನ ಅಂಗಡಿ ಮಾಲಕರ ವಾಹನ ನಿಲುಗಡೆಗೆ ಸಮಸ್ಯೆಯಾಗಿಲ್ಲವೇ?
ಅಂಗಡಿ ಮಾಲಕರು ತಮ್ಮ ವಾಹನಗಳನ್ನು ತಂದು ನಿಲ್ಲಿಸಬೇಕಿದ್ದಲ್ಲಿ ಅಂಗಡಿಗಳನ್ನು ಖಾಲಿ ಮಾಡಬೇಕು ಎಂಬ ಆಯ್ಕೆಯನ್ನು ಮುಂದಿಡಲಾಗಿತ್ತು. ಅಂಗಡಿ ಮಾಲಕರಾದ ನಾವೇ ನಮ್ಮ ವಾಹನಗಳನ್ನು ನಿಲ್ಲಿಸಿದರೆ ಗ್ರಾಹಕರಿಗೆ ಹೇಗೆ ಅವಕಾಶ ಕಲ್ಪಿಸಲು ಸಾಧ್ಯ. ವ್ಯಾಪಾರ ವಹಿವಾಟು ನಡೆಯುವುದಾದರೂ ಹೇಗೆ ಎಂಬ ಸಂಗತಿಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟೆವು.

ಪಾರ್ಕಿಂಗ್ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಏನಾದರೂ ಯೋಜನೆ ರೂಪಿಸಿದ್ದೀರಾ?
ಪಾರ್ಕಿಂಗ್ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿತ್ತು. ವಾಹನ ಸವಾರರು ಬ್ರಿಗೇಡ್ ರಸ್ತೆ ಪ್ರವೇಶಿಸುತ್ತಿದ್ದಂತೆ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ಸ್ಥಳ ಹುಡುಕಾಡುತ್ತಾರೆ. ಇದರಿಂದಾಗಿ ಬೇರೆ ವಾಹನ ಚಾಲಕರಿಗೂ ಸಮಸ್ಯೆಯಾಗಿ ಸಂಚಾರ ದಟ್ಟಣೆ ಉಂಟಾಗುತ್ತದೆ. ವಾಹನ ನಿಲುಗಡೆಯಾಗುವ ಸ್ಥಳದಲ್ಲಿ ಸೆನ್ಸಾರ್ ಅಳವಡಿಕೆ ಮಾಡಿ ಸ್ಥಳಾವಕಾಶ ಇದೆಯೇ ಇಲ್ಲವೋ ಎಂಬ ಮಾಹಿತಿಯನ್ನು ಪಾರ್ಕಿಂಗ್ ಮಾಹಿತಿ ಕೇಂದ್ರಕ್ಕೆ ರವಾನಿಸಿ ಅದನ್ನು ರಸ್ತೆಯ ಪ್ರವೇಶ ದ್ವಾರದಲ್ಲೆ ದೊಡ್ಡ ಎಲೆಕ್ಟ್ರಾನಿಕ್ ಪರದೆ ಮೇಲೆ ಬಿಂಬಿಸುವುದು. ಇದರಿಂದ ವಾಹನ ನಿಲುಗಡೆಗೆ ಬರುವ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

ಬೇರೆ ರಾಜ್ಯದವರು ನಿಮ್ಮಿಂದ ಈ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆಯೇ?
ಹೈದರಾಬಾದ್ ಹಾಗೂ ಚೆನ್ನೈಯಿಂದ ಕೆಲವರು ಬಂದು ಅಧ್ಯಯನ ನಡೆಸಿ ಅಲ್ಲಿ ಜಾರಿ ಮಾಡಿದ್ದಾರೆ. ಆದರೆ ನಂತರ ಅದನ್ನು ಪಾರ್ಕಿಂಗ್ ಮಾಫಿಯಾ ಕೈಗೆ ಒಪ್ಪಿಸಿ ಬಿಟ್ಟರು. ಅವರು ಈಗ ತಮ್ಮದೇ ಆದ ರೀತಿಯಲ್ಲಿ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಯಂತ್ರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ.

‘ಏನಿದು ಯಂತ್ರ’

ಆಟೋಮೇಟೆಡ್ ಪಾರ್ಕಿಂಗ್ ವೆಂಡಿಂಗ್ ಯಂತ್ರಗಳ ವ್ಯವಸ್ಥೆಯಡಿ ಕಾರನ್ನು ಪಾರ್ಕ್ ಮಾಡಿ ವಾಹನ ಚಾಲಕರೇ ಸ್ವತಃ ಆಟೊಮೇಟೆಡ್ ಯಂತ್ರದ ಬಳಿ ಹೋಗಿ ನಿಗದಿತ ಮೊತ್ತವನ್ನು (5 ರೂ. ನಾಣ್ಯಗಳಲ್ಲಿ ಮಾತ್ರ. ಒಂದು ಗಂಟೆಗೆ 10 ರೂ., ಎರಡು ಗಂಟೆಗೆ 20 ರೂ.) ಪಾವತಿಸಿ ರಶೀದಿ ಪಡೆದು ಕಾರಿನ ಹೊರಗಡೆಯಿಂದ ಸ್ಪಷ್ಟವಾಗಿ ಕಾಣುವಂತೆ ರಶೀದಿಯನ್ನು ಮುಂಭಾಗದಲ್ಲಿ ಇಡಬೇಕು.

‘ರವೀಶ್ ಕುಮಾರ್ ಉತ್ತಮ ವ್ಯಕ್ತಿ’

ತಮ್ಮನ್ನು ಬೆಂಗಳೂರಿನ ಜನತೆ ಮೇಯರ್ ಆಗಿ ಆಯ್ಕೆ ಮಾಡಬೇಕೆಂದು ಆಶಿಸಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕುರಿತು ‘ವಾರ್ತಾಭಾರತಿ’ ಪ್ರತಿನಿಧಿ ಗಮನ ಸೆಳೆದಾಗ, ಅವರು ದೊಡ್ಡವರು ಹಾಗೂ ಉತ್ತಮ ವ್ಯಕ್ತಿ. ಆದುದರಿಂದಲೇ ಉತ್ತಮವಾದ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುಹೇಲ್ ಯೂಸುಫ್ ಹರ್ಷ ವಕ್ತಪಡಿಸಿದರು.

‘ಸುಹೈಲ್ ಯೂಸುಫ್ ಮೇಯರ್ ಆಗಬೇಕು ಎಂದ ರವೀಶ್ ಕುಮಾರ್’
ಬೆಂಗಳೂರಿನ ಬ್ರಿಗೇಡ್ ರೋಡ್ ಅಂಗಡಿ ಮಾಲಕರ ಸಂಘದ ಕಾರ್ಯದರ್ಶಿಯಾಗಿರುವ ಸುಹೈಲ್ ಯೂಸುಫ್ ಎಂಬವರು ಬಿಬಿಎಂಪಿಯ ಮೇಯರ್ ಆಗಬೇಕು. ಆ ಮೂಲಕ ನಿಜವಾದ ಸಮಾಜ ಸೇವಕನಿಗೆ ಸೂಕ್ತ ಸ್ಥಾನ ಲಭಿಸಬೇಕು ಎಂದು ಹಿರಿಯ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಹೇಳಿದ್ದಾರೆ. ನಗರದ ಬಹುಮುಖ್ಯ ಸಮಸ್ಯೆಯಾದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸುಹೈಲ್ ಯೂಸುಫ್‌ರ ಕೆಲಸ ಮಾದರಿ ಎಂದು ರವೀಶ್ ಕುಮಾರ್ ಹೇಳಿದ್ದು ಯಾವುದೇ ಲಾಭ ಪಡೆಯದೆ ಸೇವೆ ಸಲ್ಲಿಸುತ್ತಿರುವ ಅವರನ್ನು ಹಾಡಿಹೊಗಳಿದ್ದಾರೆ.

Similar News