“ಕುಸಿದ ಆರ್ಥಿಕತೆ ಸರಿಪಡಿಸಲು ಮೋದಿ ಭಾರತದಲ್ಲೇ ಹೆಚ್ಚು ಸಮಯ ಕಳೆಯಬೇಕು”

Update: 2019-09-24 14:44 GMT

ಹೊಸದಿಲ್ಲಿ, ಸೆ.24: ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಸಮಯ ತಮ್ಮ ದೇಶದಲ್ಲಿ ಕಳೆದು ಅಲ್ಲಿನ ಕುಸಿಯುತ್ತಿರುವ ಆರ್ಥಿಕತೆ ಹಾಗೂ ಜನರ ನಡುವೆ ಹೆಚ್ಚುತ್ತಿರುವ ಕಂದಕಗಳನ್ನು ಸರಿಪಡಿಸಲು ಶ್ರಮಿಸಬೇಕು ಹಾಗೂ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ವಿದೇಶಿಗರಿಗೆ ಹೇಳುತ್ತಾ ವಿದೇಶಗಳಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಬೇಕು ಎಂದು ನ್ಯೂಯಾರ್ಕ್ ನಗರದ ಎಲ್‌ಐಯು ಪೋಸ್ಟ್ ಎಂಬ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪನೋಸ್ ಮೌರ್ಡೌಕೌಟಸ್ 'ಫೋರ್ಬ್ಸ್' ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.

‘‘ಮೋದಿ ರಷ್ಯಾದಿಂದ ಅಮೆರಿಕ ತನಕ ಪ್ರಯಾಣಿಸಿ ಜಗತ್ತಿನ ಪ್ರಬಲ ನಾಯಕರ ಜತೆ ಮಾತನಾಡುತ್ತಿರುವಾಗ ಅತ್ತ ಅವರ ದೇಶದ ಅರ್ಥವ್ಯವಸ್ಥೆ ನಾಟಕೀಯವಾಗಿ ನಿಧಾನಗತಿಯಾಗುತ್ತಿದೆ. ಎರಡು ವರ್ಷಗಳ ಹಿಂದಿನ ಶೇ.8ರಷ್ಟು ಪ್ರಗತಿ ಪ್ರಮಾಣ ಇತ್ತೀಚೆಗೆ ಶೇ.5ಕ್ಕೆ ಇಳಿಕೆಯಾಗಿದೆ ಎಂದು ‘‘ಮೋದಿ ಶುಡ್ ಸ್ಪೆಂಡ್ ಮೋರ್ ಟೈಮ್ ಎಟ್ ಹೋಮ್’’ (ಮೋದಿ ಹೆಚ್ಚು ಸಮಯ ತಮ್ಮ ತವರು ದೇಶದಲ್ಲಿ ಕಳೆಯಬೇಕು) ಎಂಬ ಶೀರ್ಷಿಕೆಯ ತಮ್ಮ ಲೇಖನದಲ್ಲಿ ಅವರು ವಿವರಿಸಿದ್ದಾರೆ.

ದೇಶದಲ್ಲಿನ ನಿರುದ್ಯೋಗ ಪ್ರಮಾಣ 2018ರಲ್ಲಿ ದಾಖಲೆ ಶೇ.46.80ಗೆ ಏರಿಕೆಯಾಗಿರುವುದು, ಉದ್ದಿಮೆ ನಿರೀಕ್ಷೆ ಸೂಚ್ಯಂಕ (ಬಿಸಿನೆಸ್ ಎಕ್ಸ್‌ಪೆಕ್ಟೇಶನ್ಸ್ ಇಂಡೆಕ್ಸ್) ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿದ್ದ 113.5 ಅಂಕಗಳಿಂದ ಎರಡನೇ ತ್ರೈಮಾಸಿಕದಲ್ಲಿ 112.8 ಅಂಕಗಳಿಗೆ ಕುಸಿದಿರುವ ಬಗ್ಗೆಯೂ ಲೇಖನದಲ್ಲಿ ಉಲ್ಲೇಖವಾಗಿದೆ.

ಈ ದಿನಗಳಲ್ಲಿ ಭಾರತದಲ್ಲಿ ಬಹಳಷ್ಟು ವಿಚಾರಗಳು ತಪ್ಪು ತಪ್ಪಾಗಿರಬೇಕು, ಮೋದಿಯ ನೀತಿಗಳು ಜನರನ್ನು ತಲುಪಿಲ್ಲ, ದೇಶದ ಕರೆನ್ಸಿ ವಿಚಾರದಲ್ಲಿ ಮೋದಿ ನಡೆಸಿದ ಪ್ರಯೋಗ, ರಿಸರ್ವ್ ಬ್ಯಾಂಕ್ ಮೇಲೆ ಸರಕಾರ ಸಾಧಿಸಿದ ಹಿಡಿತ ಹಾಗೂ ಜನರನ್ನು ಮುಷ್ಠಿಯಲ್ಲಿಟ್ಟು ಆಡಳಿತ ನಡೆಸುವ ಶೈಲಿ ದೇಶವನ್ನು ಧರ್ಮ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪ್ರತ್ಯೇಕಿಸುತ್ತಿದೆ ಎಂದೂ ಲೇಖನದಲ್ಲಿ ಬರೆಯಲಾಗಿದೆ.

ಜಗತ್ತಿಗೆ ಭಾರತದ ಬಗ್ಗೆ ಹೇಳುವುದರಿಂದ ಭಾರತ ಬದಲಾಗುವುದಿಲ್ಲ. ಜಗತ್ತಿನಿಂದ, ಮುಖ್ಯವಾಗಿ ಅಮೆರಿಕದಿಂದ ಕಲಿತು, ತವರು ದೇಶದಲ್ಲಿ ಕೆಲಸದಲ್ಲಿ ತೊಡಗಿದರೆ ಅದು ಸಾಧ್ಯ ಎಂದೂ ಪನೋಸ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಪನೋಸ್ ಮೌರ್ಡೌಕೌಟಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News