ಲೋಕಸಭಾ ಚುನಾವಣೆ: ಸಿಪಿಐ, ಸಿಪಿಎಂ ಪಕ್ಷಗಳಿಗೆ 25 ಕೋಟಿ ರೂ. ದೇಣಿಗೆ ನೀಡಿದ್ದ ಡಿಎಂಕೆ

Update: 2019-09-24 10:34 GMT

ಚೆನ್ನೈ, ಸೆ.24:  ತಮಿಳುನಾಡಿನ ಡಿಎಂಕೆ ಪಕ್ಷವು ಈ ವರ್ಷ ನಡೆದ ಲೋಕಸಭಾ ಚುನಾವಣೆ ವೇಳೆ ಎಡಪಕ್ಷಗಳಿಗೆ 25 ಕೋಟಿ ರೂ. ದೇಣಿಗೆ ನೀಡಿರುವ ವಿಚಾರ ಬಹಿರಂಗಗೊಂಡು ವಿವಾದಕ್ಕೀಡಾಗಿದೆ.

ಡಿಎಂಕೆ ಆಗಸ್ಟ್ 27ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತನ್ನ ಚುನಾವಣಾ ವೆಚ್ಚ ಕುರಿತಾದ ಅಫಿದಾವತ್ತಿನಲ್ಲಿ  ತಾನು ಸಿಪಿಐಗೆ 15 ಕೋಟಿ ರೂ. ಹಾಗೂ ಸಿಪಿಎಂಗೆ  10 ಕೋಟಿ ರೂ. ನೀಡಿರುವುದನ್ನು ಬಹಿರಂಗಪಡಿಸಿದೆ. ಡಿಎಂಕೆ ತನ್ನ ಮಿತ್ರ ಪಕ್ಷ ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿಗೆ ಕೂಡ 15 ಕೋಟಿ ರೂ. ದೇಣಿಗೆ ನೀಡಿದೆ. ಡಿಎಂಕೆ ತಾನು ಚುನಾವಣೆಗೆ ಒಟ್ಟು 79.26 ಕೋಟಿ ವೆಚ್ಚ ರೂ. ಮಾಡಿರುವುದಾಗಿ ಅಫಿದಾವತ್ತಿನಲ್ಲಿ ತಿಳಿಸಿದೆ.

ಆದರೆ ಸಿಪಿಎಂ ಜುಲೈ 10 ಹಾಗೂ ಸೆಪ್ಟೆಂಬರ್ 13ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವತ್ತಿನಲ್ಲಿ ದೇಶಾದ್ಯಂತ ಚುನಾವಣೆಗಾಗಿ ರೂ. 7.2 ಕೋಟಿ ವೆಚ್ಚ ಮಾಡಿದ್ದಾಗಿ ಹೇಳಿದೆ. ಸಿಪಿಐ ಈ ನಿಟ್ಟಿನಲ್ಲಿ ತನ್ನ ಅಫಿದಾವತ್ ಇನ್ನೂ ಸಲ್ಲಿಸಿಲ್ಲ.

ಡಿಎಂಕೆ ಬೆಂಬಲದೊಂದಿಗೆ ಎರಡೂ ಎಡ ಪಕ್ಷಗಳು ತಮಿಳುನಾಡಿನ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಅವುಗಳಲ್ಲಿ ಗೆಲುವು ಸಾಧಿಸಿದ್ದವು.  ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಮಾತನಾಡುತ್ತಾ ರಾಜ್ಯ ಸಮಿತಿ ಚುನಾವಣಾ ವೆಚ್ಚದ ಎಲ್ಲಾ ಮಾಹಿತಿ ಕೇಂದ್ರ ಸಮಿತಿಗೆ ಕಳುಹಿಸಿತ್ತು, ಮುಂದಿನ ಅಫಿದಾವತ್ತಿನಲ್ಲಿ ಡಿಎಂಕೆ ನೀಡಿದ 10 ಕೋಟಿ ರೂ. ಬಗ್ಗೆ ಮಾಹಿತಿಯಿರಬಹುದು, ಅಫಿದಾವತ್ತುಗಳನ್ನು ಹಂತಹಂತವಾಗಿ ಸಲ್ಲಿಸಲಾಗುತ್ತಿದೆ ಎಂದು ನನಗನಿಸುತ್ತದೆ'' ಎಂದಿದ್ದಾರೆ.

“ಮಿತ್ರ ಪಕ್ಷಗಳಿಂದ ಚುನಾವಣೆ ಸಂದರ್ಭ ದೇಣಿಗೆ ಪಡೆಯುವುದು ಸಾಮಾನ್ಯ, ನಾವೇನು ಹಗರಣದ ಹಣ ಪಡೆದಿಲ್ಲ'' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತ್ತರಸನ್ ಹೇಳಿದ್ದಾರೆ.

ತಾವು ಪಡೆದಿರುವ ದೇಣಿಗೆ ವಿಚಾರವನ್ನು ಮುಚ್ಚಿಟ್ಟಿದ್ದಕ್ಕೆ ಬಿಜೆಪಿ ಎಡ ಪಕ್ಷಗಳನ್ನು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News