×
Ad

ಭೂಸ್ಟಾಧೀನ ಪರಿಹಾರ ಕೇಳಿದ ರೈತರನ್ನು ಬಂಧಿಸಿದ ಉ.ಪ್ರ ದೇಶ ಪೊಲೀಸ್

Update: 2019-09-24 21:17 IST

ಹೊಸದಿಲ್ಲಿ,ಸೆ.24: ಗ್ರೇಟರ್ ನೊಯ್ಡದಲ್ಲಿ ನಿರ್ಮಾಣವಾಗಲಿರುವ ಜೇವರ್ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಜಮೀನಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 47 ರೈತರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.

ಜೇವರ್‌ನಲ್ಲಿ ನಿರ್ಮಿಸಲಾಗುತ್ತಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಸದ್ಯ ನಡೆಯುತ್ತಿದ್ದು, ಇದಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿರುವ ತಮ್ಮ ಜಮೀನಿಗೆ ಸರಕಾರ ಸದ್ಯ ನೀಡುತ್ತಿರುವ ಪರಿಹಾರಕ್ಕಿಂತ ಹೆಚ್ಚು ನೀಡಬೇಕೆಂದು ಆಗ್ರಹಿಸಿ ರೈತರು ಜೇವರ್ ಟೋಲ್ ಪ್ಲಾಝಾದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಈ ರೈತರನ್ನು ಪೊಲೀಸರು ಭಾರತೀಯ ದಂಡ ಸಂಹಿತೆಯ 151ನೇ ವಿಧಿ (ವಾಪಸ್ ತೆರಳಲು ಆದೇಶ ನೀಡಿದ ನಂತರವೂ ಸಂಪೂರ್ಣ ಅರಿವಿನೊಂದಿಗೆ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೊತೆ ಸೇರುವುದು) ಯಡಿ ಬಂಧಿಸಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶ ಸರಕಾರ ತಮ್ಮ ಜಮೀನುಗಳಿಗೆ ಪರಿಹಾರ ಮೊತ್ತ ಘೋಷಿಸಿದ ದಿನದಿಂದಲೂ ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ. ಮಾರುಕಟ್ಟೆಯ ಕನಿಷ್ಟ ದರಕ್ಕಿಂತ ಎರಡು ಪಟ್ಟು ಹೆಚ್ಚಿನ ಪರಿಹಾರವನ್ನು ಸರಕಾರ ಘೋಷಿಸಿದೆ. ಆದರೆ ನಮಗೆ ಈ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸದ್ಯ ಸರಕಾರ ಜಮೀನು ಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿದ್ದು ವಿಮಾನ ನಿಲ್ದಾಣಕ್ಕಾಗಿ ಮೊದಲ ಹಂತದಲ್ಲಿ 707 ಹೆಕ್ಟೇರ್ ಕೃಷಿ ಭೂಮಿ ಮತ್ತು 532 ಹೆಕ್ಟೇರ್ ನಗರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News