ಉಪ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಅನರ್ಹ ಶಾಸಕರ ಪರ ವಕೀಲರಿಂದ ಸುಪ್ರೀಂನಲ್ಲಿ ಮನವಿ

Update: 2019-09-25 07:23 GMT

ಹೊಸದಿಲ್ಲಿ, ಸೆ.25: ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ಬೆಳಗ್ಗೆ   ನ್ಯಾಯಮೂರ್ತಿ ಎನ್ ವಿ ರಮಣ್, ಕೃಷ್ಣ ಮುರಾರಿ, ಸಂಜಯ್ ಖನ್ನಾ ನೇತೃತ್ವದ  ತ್ರಿಸದಸ್ಯ ಪೀಠದಲ್ಲಿ  ನಡೆಯಿತು.

ವಿಚಾರಣೆ ವೇಳೆ  ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ  ಹಾಗೂ ವಿ.ಗಿರಿ ವಾದ ಮಂಡಿಸಿದರು.

ಸ್ವೀಕರ್ ದುರುದ್ದೇಶದಿಂದ ಶಾಸಕರ  ರಾಜೀನಾಮೆಯನ್ನು  ಅಂಗೀಕಾರ ಮಾಡುವಲ್ಲಿ ವಿಳಂಬ ಮಾಡಿದ್ದಾರೆ. ರಾಜೀನಾಮೆ ಕ್ರಮಬದ್ಧವಾಗಿದ್ದರೆ ಅಂಗೀಕರಿಸಬೇಕಿತ್ತು. ಆದರೆ ಶಾಸಕರನ್ನು ಅನರ್ಹಗೊಳಿಸಲು ಅವಕಾಶವೇ ಇಲ್ಲ.ಎಂದು ಮುಕುಲ್ ರೋಹ್ಟಗಿ ಹೇಳಿದರು.

ಸಾಕ್ಷ್ಯಗಳೇ ಇಲ್ಲದೆ ಅನರ್ಹತೆ ಮಾಡಲಾಗಿದೆ. ಸ್ಪೀಕರ್ ತೀರ್ಪು ಸರಿ ಇಲ್ಲ. ಇದನ್ನು ನಾವು ಪ್ರಶ್ನೆ ಮಾಡುತ್ತಿದ್ದೇವೆ .ನಾಮಪತ್ರ ಸಲ್ಲಿಸಲು ಇನ್ನು ಐದು ದಿನಗಳು ಮಾತ್ರ ಬಾಕಿ ಇದೆ ಆದರೆ  ಅನರ್ಹರ ಪ್ರಕರಣ ಇತ್ಯರ್ಥವಾಗದೆ ಚುನಾವಣೆ ಬೇಡ. ಚುನಾವಣೆಗೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು,ಉಪ ಚುನಾವಣೆಯನ್ನು 2ರಿಂದ 3 ತಿಂಗಳು ಮುಂದೂಡಬೇಕು  ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಚುನಾವಣಾ ಅಧಿಸೂಚನೆಯನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿದ್ದೇವೆ. ರಾಜೀನಾಮೆ ಅಂಗೀಕರಿಸುವ ಬಗ್ಗೆ ಸ್ಪೀಕರ್ ನಿರ್ಧರಿಸಬೇಕಿತ್ತು. ಆದರೆ ಅವರ ಕಾರ್ಯವೈಖರಿ ಸರಿ ಇರಲಿಲ್ಲ ಎಂದು ರೋಹ್ಟಗಿ ಹೇಳಿದರು.

ರಾಜೀನಾಮೆ ನೀಡಿದ್ದು ತಪ್ಪು ಎನ್ನಲು ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ   -ಮುಕುಲ್ ರೋಹ್ಟಗಿ 

ಡಾ.ಸುಧಾಕರ್ ಪಕ್ಷ ವಿರೋಧಿ ಚಟುವಟಿಕೆ  ಮಾಡಿಲ್ಲ: ವಕೀಲ ಸುಂದರಂ

ಡಾ.ಸುಧಾಕರ್ ಪಕ್ಷ ವಿರೋಧಿ ಚಟುವಟಿಕೆ  ಮಾಡಿಲ್ಲ, ಪಕ್ಷಕ್ಕೆ ಮೋಸ ಮಾಡಿಲ್ಲ.   ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಸರಕಾರದ ಮೇಲೆ ವಿಶ್ವಾಸ ಇರಲಿಲ್ಲ. ಸರಕಾರ ಸರಿ ಇಲ್ಲ ಅಂದ್ರೆ ಹೊರಬರುವ ಅವಕಾಶ ಇದೆ. ಪ್ರಜಾಪ್ರಭುತ್ವ , ಸಂವಿಧಾನದ ಹಾದಿಯಲ್ಲೇ ಮುನ್ನಡೆದಿದ್ದಾರೆ  ಪಕ್ಷವನ್ನು ತ್ಯಜಿಸುವುದು ಯಾವುದೇ ಪಾಪ ಅಲ್ಲ. ಸುಧಾಕರ್ ಯಾವುದೇ ಪಕ್ಷವನ್ನು ಸೇರಿಲ್ಲ ಡಾ.ಸುಧಾಕರ್ ಪರ ವಕೀಲ ಸುಂದರಂ  ವಾದಿಸಿದರು.

ರಾಜೀನಾಮೆ ನೀಡಿದ ಬಳಿಕ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಸ್ವತಂತ್ರವಾಗಿ ಸ್ಪರ್ಧಿಸಬಹುದು ಎಂದು ವಕೀಲ ಸುಂದರಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News