×
Ad

370ನೆ ವಿಧಿ ರದ್ದತಿ ನಂತರ ಕಾಶ್ಮೀರದಲ್ಲಿ 13,000 ಯುವಕರ ಬಂಧನ: ಸತ್ಯಶೋಧನಾ ತಂಡದ ವರದಿ

Update: 2019-09-25 14:45 IST
Photo: PTI 

ಹೊಸದಿಲ್ಲಿ, ಸೆ.25: ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳ ಹಲವಾರು ಗ್ರಾಮಗಳಿಗೆ ಸೆಪ್ಟೆಂಬರ್ 17ರಿಂದ 21ರ ತನಕ ಭೇಟಿ ನೀಡಿದ ಐದು ಮಂದಿ ಸದಸ್ಯರ ಸತ್ಯಶೋಧನಾ ತಂಡ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಂಡ ನಂತರ ದೌರ್ಜನ್ಯಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ ಎಂದು www.deccanherald.com ವರದಿ ಮಾಡಿದೆ.

ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ (ಎನ್‍ಎಫ್‍ಐಡಬ್ಲ್ಯು), ಪ್ರಗತಿಶೀಲ್ ಮಹಿಳಾ ಸಂಘಟನ್ ದಿಲ್ಲಿ, ಮುಸ್ಲಿಂ ವಿಮೆನ್ಸ್ ಫೋರಂ ಸದಸ್ಯರು ಈ ತಂಡದ ಭಾಗವಾಗಿದ್ದಾರೆ. ಕಾಶ್ಮೀರದಲ್ಲಿ 370ನೇ ವಿಧಿ ಹಾಗೂ 35 ಎ ವಿಧಿಯನ್ನು ಮರು ಸ್ಥಾಪಿಸಬೇಕೆಂದೂ ತಂಡ ಆಗ್ರಹಿಸಿದೆ.

ತಂಡದ ಸತ್ಯಶೋಧನಾ ವರದಿ ‘ವಿಮೆನ್ಸ್ ವಾಯ್ಸ್: ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟ್ ಆನ್ ಕಾಶ್ಮೀರ್' ಅನ್ನು ಎನ್‍ಎಫ್‍ಐಡಬ್ಲ್ಯು ಸಂಸ್ಥೆಯ ಅನ್ನೀ ರಾಜಾ ಮಂಗಳವಾರ ಬಿಡುಗಡೆಗೊಳಿಸಿದ್ದಾರೆ. “ದೌರ್ಜನ್ಯಗಳಲ್ಲಿ ಸೇನೆಯ ಪಾತ್ರ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಅದು ಪವಿತ್ರ ದನವಾಗಿರಲು ಸಾಧ್ಯವಿಲ್ಲ. ಯುವಕರನ್ನು ಅವರ ಮನೆಗಳಿಂದ ರಾತ್ರೋರಾತ್ರಿ ಕರೆದೊಯ್ಯಲಾಗುತ್ತಿದೆ. ಅವರೆಲ್ಲಿದ್ದಾರೆಂದು ಅವರ ಕುಟುಂಬಗಳಿಗೆ ತಿಳಿದಿಲ್ಲ” ಎಂದು ಅನ್ನೀ ರಾಜಾ ಹೇಳಿದ್ದಾರೆ.

ತಂಡದ ಭಾಗವಾಗಿದ್ದ ಸಯೀದಾ ಹಮೀದ್ ಮಾತನಾಡಿ “ರಾಜ್ಯದ 13,000 ಯುವಕರನ್ನು ಆಗಸ್ಟ್ 5ರ ನಂತರ ಬಂಧಿಸಲಾಗಿದೆ'' ಎಂದು ಹೇಳಿದರು. ತಂಡದಲ್ಲಿ ಇವರಿಬ್ಬರ ಹೊರತಾಗಿ ಕವಲ್ಜೀತ್ ಕೌರ್, ಪಂಖೂರಿ ಝಹೀರ್ ಹಾಗೂ ಪೂನಂ ಕೌಶಿಕ್ ಇದ್ದರು.

ಪ್ರತಿ ದಿನ ಕಾಶ್ಮೀರದಲ್ಲಿ ರಾತ್ರಿ ಎಂಟು ಗಂಟೆಗೆ ದೀಪಗಳನ್ನು ಆರಿಸಬೇಕು. ಒಂದು ಪ್ರಕರಣದಲ್ಲಿ ದೀಪದ ಬೆಳಕಿನಲ್ಲಿ ಬಾಲಕಿಯೊಬ್ಬಳು ಬಂಡಿಪೊರದ ತನ್ನ ನಿವಾಸದಲ್ಲಿ ಓದುತ್ತಿರುವಾಗ ಅಲ್ಲಿಗೆ ನುಗ್ಗಿದ ಸೇನಾ ಸಿಬ್ಬಂದಿ ಆಕೆಯ ತಂದೆ ಹಾಗೂ ಸೋದರನನ್ನು ಕರೆದೊಯ್ದಿದ್ದಾರೆ ಎಂದು ವರದಿ ಆರೋಪಿಸಿದೆ. ಬಂಧಿತರಾದವರನ್ನೆಲ್ಲಾ ಎಲ್ಲಿರಿಸಲಾಗಿದೆ ಎಂದು ತಿಳಿದಿಲ್ಲ ಸೆಂಟ್ರಲ್ ಜೈಲಿಗೆ ಹೋಗಿ ಅಲ್ಲಿರುವ ಪಟ್ಟಿಯನ್ನು ನೋಡುವಂತೆ ಜನರಿಗೆ ಹೇಳಲಾಗುತ್ತಿದೆ ಎಂದು ಸತ್ಯ ಶೋಧನಾ ವರದಿ ತಿಳಿಸಿದೆ.

“ರಾತ್ರಿ ಮಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಲು ಮೊಬೈಲ್ ಫೋನಿನ ಬೆಳಕನ್ನು ಕೂಡ ಬಳಸುವ ಹಾಗಿಲ್ಲ. ಈ ಬೆಳಕು ದೂರದಿಂದಲೂ ಕಾಣುವುದರಿಂದ ಈ ತಪ್ಪಿಗೆ ನಮ್ಮ ಮನೆಯ ಪುರುಷರು ಬಲಿಯಾಗುತ್ತಾರೆ'' ಎಂದು ಮಹಿಳೆಯೊಬ್ಬರು ಆರೋಪಿಸಿರುವುದು ವರದಿಯಲ್ಲಿ ಉಲ್ಲೇಖಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News