ವಿಚಾರಣೆಯ ನ್ಯಾಯಪರತೆ ಪ್ರಶ್ನಿಸಿದ ಸಂಜೀವ್ ಭಟ್ ವಿರುದ್ಧ ಗುಜರಾತ್ ಹೈಕೋರ್ಟ್ ಆಕ್ಷೇಪ

Update: 2019-09-25 10:54 GMT

ಅಹ್ಮದಾಬಾದ್, ಸೆ.25: ಜಾಮ್ನಗರದಲ್ಲಿ 29 ವರ್ಷಗಳ ಹಿಂದೆ ನಡೆದ ಕಸ್ಟಡಿ ಸಾವು ಪ್ರಕರಣದಲ್ಲಿ ತಮಗೆ ನೀಡಲಾದ ಜೈಲುಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿರುವ ಅಪೀಲಿನಲ್ಲಿ ಕೆಳಗಿನ ಹಂತದ ನ್ಯಾಯಾಲಯದ ವಿಚಾರಣೆಯ ಹಾಗೂ ವಿಚಾರಣೆ ನಡೆಸಿದ ಸೆಶನ್ಸ್ ಕೋರ್ಟ್ ನ್ಯಾಯಾಧೀಶರ ನ್ಯಾಯಪರತೆಯನ್ನು ಪ್ರಶ್ನಿಸಿದ ಒಂದು ಭಾಗಕ್ಕೆ ಗುಜರಾತ್ ಹೈಕೋರ್ಟ್ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಭಟ್ ಅವರ ಅಪೀಲನ್ನು ವಿರೋಧಿಸಿ ಮಾತನಾಡಿದ ಸಾರ್ವಜನಿಕ ಅಭಿಯೋಜಕ ಹಾಗೂ ಹಿರಿಯ ವಕೀಲ ಮಿತೇಶ್ ಅಮೀನ್, ಮಂಗಳವಾರ ವಿಚಾರಣೆ ವೇಳೆ ಭಟ್ ಅವರ ವರ್ತನೆಯನ್ನು ಉಲ್ಲೇಖಿಸಿದರಲ್ಲದೆ ಅವರ ಅಪೀಲಿನ ಒಂದು ಭಾಗದಲ್ಲಿ ಅವರು ‘ದೋಷಪೂರಿತ ವಿಚಾರಣೆ’ ಹಾಗೂ ಸೆಶನ್ಸ್ ನ್ಯಾಯಾಧೀಶರು ‘ಪೂರ್ವನಿರ್ಧರಿತ’ರಾಗಿದ್ದರು ಎಂದು ಹೇಳಿರುವುದನ್ನೂ ಉಲ್ಲೇಖಿಸಿದರು.

ಆಗ ಮಾತನಾಡಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಬೇಲಾ ತ್ರಿವೇದಿ, ಸಂಜೀವ್ ಭಟ್ ಅವರ ವಕೀಲರನ್ನುದ್ದೇಶಿಸಿ, “ನೀವು ಈ ರೀತಿ ನ್ಯಾಯಾಲಯದ ವಿರುದ್ಧ ಆರೋಪ ಹೊರಿಸಲು ಸಾಧ್ಯವಿಲ್ಲ. ನಾನಿದನ್ನು ಹೇಳುತ್ತಿಲ್ಲ, ಆದರೆ ಹೀಗೆ ಹೇಳುವ ಸುಪ್ರೀಂ ಕೋರ್ಟ್ ತೀರ್ಪುಗಳಿವೆ. ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿ ಸಾಧ್ಯವಿಲ್ಲ” ಎಂದು ಹೇಳಿದರು.

“ನೀವು ಬೇಷರತ್ ಕ್ಷಮೆ ಯಾಚಿಸದೇ ಇದ್ದರೆ ಕ್ರಮ ಕೈಗೊಳ್ಳಬೇಕಾದೀತು” ಎಂದು ಭಟ್ ಅವರ ವಕೀಲ ಬಿ.ಬಿ. ನಾಯ್ಕ್ ಅವರಿಗೆ ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು. ಭಟ್ ವಕೀಲರು ವಿಷಾದ ವ್ಯಕ್ತಪಡಿಸಿದ ನಂತರ ಅಪೀಲಿನ ಆ ನಿರ್ದಿಷ್ಟ ಭಾಗವನ್ನು ತೆಗೆದು ಹಾಕಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News