60 ವರ್ಷ ಹಳೆಯ ಪರಂಬಿಕುಲಂ-ಅಲಿಯಾರ್ ಜಲ ಒಪ್ಪಂದ ಪುನರ್ ಪರಿಶೀಲಿಸಲು ಕೇರಳ, ತಮಿಳುನಾಡು ನಿರ್ಧಾರ

Update: 2019-09-26 17:43 GMT

ತಿರುವನಂತಪುರ, ಸೆ. 26: ಅರುವತ್ತು ವರ್ಷಗಳ ಹಳೆಯ ಪರಂಬಿಕುಲಂ-ಅಲಿಯಾರ್ ಜಲ ಒಪ್ಪಂದವನ್ನು ಪುನರ್‌ಪರಿಶೀಲಿಸಲು ನಿರ್ಧರಿಸುವ ಮೂಲಕ ಕೇರಳ ಹಾಗೂ ತಮಿಳುನಾಡು ಚಾರಿತ್ರಿಕ ಹೆಜ್ಜೆ ಇರಿಸಿದೆ.

 ತಿರುವನಂತಪುರದಲ್ಲಿ ಬುಧವಾರ ತಮಿಳುನಾಡಿನ ಮುಖ್ಯಮಂತ್ರಿ ಇ. ಎಡಪ್ಪಳ್ಳಿ ಪಳನಿಸ್ವಾಮಿ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವೆ ನಡೆದ ಸಭೆಯಲ್ಲಿ ಈ ಮಹತ್ವಪೂರ್ಣ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು, ‘‘ಪರಂಬಿಕುಲಂ-ಅಲಿಯಾರ್ ಒಪ್ಪಂದ 60 ವರ್ಷ ಹಳೆಯದು. ನಾವು ಈ ಒಪ್ಪಂದ ಮರು ಪರಿಶೀಲಿಸಲು ನಿರ್ಧರಿಸಿದ್ದೇವೆ. ಪ್ರತಿ ರಾಜ್ಯದ ಐವರು ಸದಸ್ಯರನ್ನು ಒಳಗೊಂಡ ಕಾರ್ಯದರ್ಶಿ ಮಟ್ಟದ ಸಮಿತಿಯನ್ನು ರೂಪಿಸಲಿದ್ದೇವೆ. ಈ ಸಮಿತಿಗೆ ತಾಂತ್ರಿಕ ತಜ್ಞರನ್ನು ಕೂಡ ಒದಗಿಸಲಾಗುವುದು’’ ಎಂದರು.

ಪಳನಿಸ್ವಾಮಿ ಅವರೊಂದಿಗೆ ನಗರಾಡಳಿತ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಎಸ್.ಪಿ. ವೇಲುಮಣಿ, ಉಪ ಸ್ಪೀಕರ್ ವಿ. ಜಯರಾಮ್, ಮುಖ್ಯ ಕಾರ್ಯದರ್ಶಿ ಕೆ. ಶಣ್ಮುಗಂ ಹಾಗೂ ಹಿರಿಯ ಅಧಿಕಾರಿಗಳು ಇದ್ದರು. ಒಪ್ಪಂದದ ಪ್ರಕಾರ ಸಮಿತಿ ಸದಸ್ಯರು ಹಾಗೂ ಸಭೆ ನಡೆಯುವ ಸ್ಥಳ ವಾರದೊಳಗೆ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಪರಂಬಿಕುಲಂ-ಅಲಿಯಾರ್ ಯೋಜನೆ ತಮಿಳುನಾಡಿನ ತಿರುಪುರ್ ಹಾಗೂ ಈರೋಡ್ ಜಿಲ್ಲೆಗಳಿಗೆ ಹಾಗೂ ಕೇರಳದ ಪಾಲಕ್ಕಾಡ್‌ಗೆ ಕುಡಿಯುವ ನೀರು ಒದಗಿಸುತ್ತದೆ. ಈ ಒಪ್ಪಂದ ಅನಮಲೈಯಾರ್ ಹಾಗೂ ನಿರಾರ್-ನಲ್ಲಾರ್ ನದಿಗಳ ತಿರುವು ಹಾಗೂ ಜೋಡಣೆ ಬಗ್ಗೆ ಕೂಡ ಪರಿಶೀಲನೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News