ಉಪಚುನಾವಣೆ: 54 ವರ್ಷಗಳ ಬಳಿಕ ಕೇರಳದ ಪಾಲಾ ಕ್ಷೇತ್ರದಲ್ಲಿ ಗೆದ್ದ ಎಲ್‌ಡಿಎಫ್

Update: 2019-09-27 13:53 GMT

ತಿರುವನಂತಪುರಂ, ಸೆ.27: ಸೋಮವಾರ ನಡೆದ ಉಪಚುನಾವಣೆಯಲ್ಲಿ ಕೇರಳದ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್(ಎಂ)ನ 54 ವರ್ಷಗಳ ಪಾರಮ್ಯಕ್ಕೆ ಅಂತ್ಯಹಾಡಿದ ಆಡಳಿತಾರೂಢ ಎಲ್‌ಡಿಎಫ್ ಅಭ್ಯರ್ಥಿ ಮಣಿ ಸಿ ಕಪ್ಪನ್ 2000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕೇರಳ ಕಾಂಗ್ರೆಸ್‌ನ ಕೆಎಂ ಮಣಿ ಅವರು ಪಾಲಾ ಕ್ಷೇತ್ರದಲ್ಲಿ 1965ರ ಬಳಿಕ 13 ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದರು. ಕಳೆದ ಎಪ್ರಿಲ್‌ನಲ್ಲಿ ಕೆಎಂ ಮಣಿ( 86 ವರ್ಷ) ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ಎಲ್‌ಡಿಎಫ್ ಅಭ್ಯರ್ಥಿ ಮಣಿ ಸಿ ಕಪ್ಪನ್ ಎದುರಾಳಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಜೋಸ್ ಟಾಮ್‌ರನ್ನು 2,493 ಮತಗಳ ಅಂತರದಿಂದ ಸೋಲಿಸಿದರು. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೇರಳದಲ್ಲಿ ಎಲ್‌ಡಿಎಫ್ ಮೈತ್ರಿಕೂಟದ ಸಹಪಕ್ಷವಾಗಿದ್ದು ಕಪ್ಪನ್ ಎನ್‌ಸಿಪಿ ಮುಖಂಡರಾಗಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಕೇರಳದ 20 ಸ್ಥಾನಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿ ಕಳಪೆ ನಿರ್ವಹಣೆ ತೋರಿದ್ದ ಎಲ್‌ಡಿಎಫ್‌ಗೆ ಉಪಚುನಾವಣೆಯ ಫಲಿತಾಂಶ ಮನೋಬಲ ಹೆಚ್ಚಿಸಿದೆ. ಯುಡಿಎಫ್‌ನ ಸೋಲಿಗೆ ಕೇರಳ ಕಾಂಗ್ರೆಸ್(ಎಂ)ನ ಬಣಗಳ ನಡುವಿನ ಒಳಜಗಳ ಪ್ರಧಾನ ಕಾರಣವಾಗಿದ್ದು , ಪಕ್ಷದ ಬೆಂಬಲ ಪಡೆದಿದ್ದರೂ ಅಭ್ಯರ್ಥಿಯಾಗಿದ್ದ ಜೋಸ್ ಟಾಮ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸದೆ ಪಕ್ಷೇತರನಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಕೊಟ್ಟಾಯಂ ಜಿಲ್ಲಾಧ್ಯಕ್ಷ ಎನ್ ಹರಿ ಅವರೂ ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News