ಇಂಗ್ಲೆಂಡ್‌ನ ಶ್ರೇಷ್ಠ ವಿಕೆಟ್‌ಕೀಪರ್ ಸಾರಾ ಟೇಲರ್ ಕ್ರಿಕೆಟ್ಗೆ ವಿದಾಯ

Update: 2019-09-27 17:42 GMT

ಲಂಡನ್, ಸೆ.27: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಓರ್ವ ಶ್ರೇಷ್ಠ ವಿಕೆಟ್‌ಕೀಪರ್ ಸಾರಾ ಟೇಲರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಟೇಲರ್ ಮೂರು ಬಾರಿ(2009, 2017 ಏಕದಿನಹಾಗೂ 2009ರ ಟ್ವೆಂಟಿ-20)ವಿಶ್ವ ಚಾಂಪಿಯನ್ ಪ್ರಶಸ್ತಿ ಎತ್ತಿ ಹಿಡಿದಿದ್ದು, 2018ರ ಜುಲೈನಲ್ಲಿ ಕೊನೆಯ ಪಂದ್ಯ ಆಡಿದ್ದರು. ಮಾನಸಿಕ ಆರೋಗ್ಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ತಂಡದಲ್ಲಿ ಇತ್ತೀಚೆಗೆ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದರು.

     ‘‘ಇದೊಂದು ಕಠಿಣ ನಿರ್ಧಾರ. ಆದರೆ ನನ್ನ ಆರೋಗ್ಯದ ದೃಷ್ಟಿಯಿಂದ ನಿವೃತ್ತಿಗೆ ಇದು ಸರಿಯಾದ ಸಮಯ. ಇಂಗ್ಲೆಂಡ್‌ನ ಪರ ಕ್ರಿಕೆಟ್ ಜರ್ಸಿ ಧರಿಸಿ ದೀರ್ಘಕಾಲ ಆಡುವ ನನ್ನ ಕನಸು ಈಡೇರಿದೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಸ್ಮರಣೀಯ ಕ್ಷಣ ಕಂಡಿದ್ದೇನೆ. 2006ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ ಆ್ಯಶಸ್ ಗೆಲುವು, ಲಾರ್ಡ್ಸ್‌ನಲ್ಲಿ ಆಡಿದ್ದ ವಿಶ್ವಕಪ್ ಫೈನಲ್ ಸಹಿತ ಹಲವು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ವಿಶ್ವದೆಲ್ಲೆಡೆ ಪ್ರಯಾಣಿಸಿ ಹಲವು ಸ್ನೇಹಿತರನ್ನು ಸಂಪಾದಿಸಿದ್ದೇನೆ’’ ಎಂದು ಇಸಿಬಿಯ ಅಧಿಕೃತ ವೆಬ್‌ಸೈಟ್‌ಗೆ ಟೇಲರ್ ತಿಳಿಸಿದರು. ಲಂಡನ್ ಮೂಲದ 30ರ ಹರೆಯದ ಟೇಲರ್ 2006ರಲ್ಲಿ ಇಂಗ್ಲೆಂಡ್ ತಂಡದಲ್ಲಿ ಪಾದಾರ್ಪಣೆ ಮಾಡಿದ್ದರು. ಒಟ್ಟು 226 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 6,333 ರನ್ ಗಳಿಸಿದ್ದಾರೆ. 126 ಏಕದಿನ ಪಂದ್ಯಗಳಲ್ಲಿ 4,056 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕ ಹಾಗೂ 7 ಶತಕಗಳಿವೆ. ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಪರ 3ನೇ ಗರಿಷ್ಠ ಸ್ಕೋರರ್ ಆಗಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಪರ 2ನೇ ಗರಿಷ್ಠ ರನ್ ಸ್ಕೋರರ್ ಆಗಿರುವ ಟೇಲರ್ 90 ಪಂದ್ಯಗಳಲ್ಲಿ 16 ಅರ್ಧಶತಕಗಳ ಸಹಿತ 2,177 ರನ್ ಗಳಿಸಿದ್ದಾರೆ. 10 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್‌ನ್ನು ಪ್ರತಿನಿಧಿಸಿರುವ ಅವರು 300 ರನ್ ಗಳಿಸಿದ್ದಾರೆ. ವಿಕೆಟ್‌ಕೀಪರ್ ಆಗಿ 232 ಆಟಗಾರ್ತಿಯರನ್ನು ಔಟ್ ಮಾಡಿದ್ದರು. ಇದು ಮಹಿಳಾ ಕ್ರಿಕೆಟರ್‌ನ ಉತ್ತಮ ಸಾಧನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News