ರೋಹಿತ್ ಶರ್ಮಾ, ರಹಾನೆಗೆ ಟೆಸ್ಟ್, ಏಕದಿನ ತಂಡದಲ್ಲಿ ದೃಢಪಡಿಸಲು ಅವಕಾಶ

Update: 2019-09-27 18:17 GMT

ಮುಂಬೈ, ಸೆ.27:ಮುಂಬೈನ ಇಬ್ಬರು ಬ್ಯಾಟ್ಸ್ ಮನ್‌ಗಳಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅತ್ಯಂತ ಮಹತ್ವದ್ದಾಗಿದೆ. ರೋಹಿತ್ ಶರ್ಮಾರಿಗೆ ಟೆಸ್ಟ್‌ನಲ್ಲಿ, ಅಜಿಂಕ್ಯ ರಹಾನೆಗೆ ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಲು ಅನುಕೂಲವಾಗಲಿದೆ.

 ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವಕಾಶ ದೃಢಪಡಿಸಲು ಎದುರು ನೋಡುತ್ತಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಸ್ಥಾನ ಭದ್ರಪಡಿಸುವ ಕನಸು ಕಾಣುತ್ತಿದ್ದಾರೆ.

ರೋಹಿತ್ ಶರ್ಮಾ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಆನಂತರ ಅವರಿಗೆ ಅವಕಾಶ ಲಭಿಸಿಲ್ಲ. ರಹಾನೆ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರವಾಗಿದ್ದರು. ಫೆಬ್ರವರಿ 2018ರಲ್ಲಿ ಅವರು ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ವಿಶ್ವಕಪ್ ತಂಡದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಇಂಗ್ಲೆಂಡ್‌ಗೆ ಪಯಣ ಬೆಳೆಸಿದ್ದರು.

 ರಹಾನೆ ಕಳೆದ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶತಕ ದಾಖಲಿಸುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿದ್ದರು. ರಹಾನೆ ಮತ್ತು ರೋಹಿತ್ ಭಾರತದ ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದಾರೆ.

‘‘ರೋಹಿತ್ ಇನಿಂಗ್ಸ್ ಆರಂಭಿಸುತ್ತಾರೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅವರಿಗೆ ಇನಿಂಗ್ಸ್ ಆರಂಭಿಸಲು ಅವಕಾಶ ಸಿಕ್ಕಿದರೆ ನನಗೆ ಸಂತಸವಾಗುತ್ತದೆ’’ ಎಂದು ರಹಾನೆ ಹೇಳಿದ್ದಾರೆ.

ರಹಾನೆ ಏಕದಿನ ತಂಡದಿಂದ ದೂರ ಉಳಿದು 18 ತಿಂಗಳು ಕಳೆದಿದೆ. ಸೆಂಚೂರಿಯನ್‌ನಲ್ಲಿ ಫೆ.16, 2018ರಂದು ಆಫ್ರಿಕಾ ವಿರುದ್ಧ ಕೊನೆಯ ಪಂದ್ಯವ ನ್ನಾಡಿದ್ದರು. ‘‘ನಾನು 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಈ ಸರಣಿಯಲ್ಲಿ ಅದಕ್ಕಾಗಿ ಪ್ರಯತ್ನ ನಡೆಸುವೆ’’ಎಂದು ರಹಾನೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News