ಆಧಾರ್ ನೋಂದಣಿ, ತಿದ್ದುಪಡಿಯಲ್ಲಿ ಭಾರೀ ಲೋಪ: ಆರೋಪ

Update: 2019-09-28 05:32 GMT

ಬಂಟ್ವಾಳ, ಸೆ.27: ಬಿ.ಸಿ.ರೋಡ್‌ನಲ್ಲಿರುವ ತಾಲೂಕಿನ ಮಿನಿ ವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಆಧಾರ್ ನೋಂದಣಿ, ತಿದ್ದುಪಡಿ ವ್ಯವಸ್ಥೆಯಲ್ಲಿ ಭಾರೀ ಲೋಪಗಳು ಸಂಭವಿಸುತ್ತಿವೆ. ಇದನ್ನು ಸರಿಪಡಿಸಿ ಗ್ರಾಹಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಧಾರ್ ತಿದ್ದುಪಡಿ ಸಂದರ್ಭ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ 50 ರೂ., ಕೆಳಗಿನವರಿಗೆ ನಿಶುಲ್ಕವಾಗಿ ಸೇವೆ ನೀಡಬೇಕೆಂದು ನಿಯಮ ಸೂಚಿಯಲ್ಲಿದೆ. ಆದರೆ ಇಲ್ಲಿನ ಆಧಾರ್ ಕೇಂದ್ರದಲ್ಲಿ 15 ವರ್ಷಕ್ಕಿಂತ ಕೆಳಗಿನವರಿಂದಲೂ ‘ಶುಲ್ಕ ವಸೂಲು’ ಮಾಡ ಲಾಗುತ್ತದೆ. ಅದಲ್ಲದೆ, ಈ ‘ಶುಲ್ಕ’ಕ್ಕೆ ಯಾವುದೇ ರಶೀದಿ ನೀಡುತ್ತಿಲ್ಲ ಅರ್ಜಿದಾರರು ದೂರಿಕೊಂಡಿದ್ದಾರೆ.

ಆಧಾರ್ ತಿದ್ದುಪಡಿಗಾಗಿ ಅರ್ಜಿದಾರರಿಂದ ಸಂಗ್ರಹಿಸುವ ಶುಲ್ಕ ಸರಕಾರದ ಖಾತೆಗೆ ಪಾವತಿಯಾಗುತ್ತಿಲ್ಲ ಎಂಬ ಸಂಶಯವನ್ನು ಇಲ್ಲಿಗೆ ಬರುವ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶುಲ್ಕದ ಬಗ್ಗೆ ಆಧಾರ್ ನೋಂದಣಿ ಕೇಂದ್ರದ ಬಳಿ ಸಾರ್ವಜನಿಕರಿಗೆ ಕಾಣುವಂತೆ ಸೂಚನಾ ಫಲಕ ಹಾಕಬೇಕೆನ್ನುವ ಆದೇಶವನ್ನು ಕಡೆಗಣಿಸಲಾಗಿದೆ ಎನ್ನುವ ದೂರುಗಳು ಸಾರ್ವಜನಿಕ ವಲಯಗಳಿಂದ ಕೇಳಿಬರುತ್ತಿವೆ.

ಸುತ್ತೋಲೆಯಲ್ಲೇನಿದೆ?

2019ರ ಜನವರಿ 1ರಂದು ಸರಕಾರ ಹೊರಡಿಸಿದ ಸುತ್ತೋಲೆ ಪ್ರಕಾರ, ಆಧಾರ್ ನೋಂದಣಿ ಮತ್ತು ಬಯೋಮೆಟ್ರಿಕ್ ತಿದ್ದುಪಡಿ ಸೇವೆಗೆ 5ರಿಂದ 15 ವರ್ಷದೊಳಗಿನ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ತಿದ್ದುಪಡಿಗೆ ಯಾವುದೇ ಸೇವಾ ಶುಲ್ಕವನ್ನು ಪಡೆದುಕೊಳ್ಳದಿರುವಂತೆ ಸೂಚಿಸಲಾಗಿದೆ. ಹೊಸ ಆಧಾರ್ ನೋಂದಣಿಗೂ ಈ ನಿಯಮ ಅನ್ವಯವಾಗುತ್ತದೆ. ಆಧಾರ್ ಸೇವಾ ಶುಲ್ಕಕ್ಕೆ ಸಂಬಂಧಿಸಿದಂತೆ ಪೋಸ್ಟರನ್ನು ಎಲ್ಲ ನಾಡಕಚೇರಿಗಳ ಮುಂದೆ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರಕಟಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ.

-ರಾಜೇಶ್ ನಾಯ್ಕ ಶಾಸಕರು, ಬಂಟ್ವಾಳ

ಈ ವಿಚಾರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಮಿನಿವಿಧಾನ ಸೌಧದಲ್ಲಿ ಆಧಾರ್ ಕೇಂದ್ರಕ್ಕೆ ಬರುವ ಗ್ರಾಹಕರಿಗೆ ಕಾಣುವಂತೆ ಸೂಚನಾ ಫಲಕ ಅಳವಡಿಸಲಾಗುವುದು.

-ರಶ್ಮಿ ಎಸ್.ಆರ್., ತಹಶೀಲ್ದಾರ್, ಬಂಟ್ವಾಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News