×
Ad

"ಅಪ್ಪ, ನಿಮ್ಮ ಜೊತೆ ಸಂಜೆ ಮಾತನಾಡುತ್ತೇನೆ"

Update: 2019-09-28 16:23 IST
ಮುಖ್ತ್ಯಾರ್ ಸಿಂಗ್ (Photo: ANI)

ಹೊಸದಿಲ್ಲಿ: ಪೂರ್ವ ಭೂತಾನ್ ನಲ್ಲಿ ಶುಕ್ರವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆ. ಕರ್ನಲ್ ರಜನೀಶ್ ಪರ್ಮಾರ್, ಅಂದು ತನ್ನ ಜನ್ಮದಿನವಾಗಿದ್ದರಿಂದ ಸಂಜೆ ತಂದೆಯ ಜತೆ ಮಾತನಾಡುವುದಾಗಿ ಹೇಳಿದ್ದರು. ಆದರೆ ಈ ಮಾತುಗಳೇ ತಮ್ಮ ಪುತ್ರನ ಕೊನೆಯ ಮಾತುಗಳಾದವು ಎಂದು ಅವರ ತಂದೆ ಮುಖ್ತ್ಯಾರ್ ಸಿಂಗ್ ದುಃಖದಿಂದ ಹೇಳುತ್ತಾರೆ.

"ನಿನ್ನೆ ಆತನ ಹುಟ್ಟುಹಬ್ಬ. ನಾವು ಬೆಳಿಗ್ಗೆ ಕರೆ ಮಾಡಿದಾಗ ಆತ  ತನ್ನ ಕೆಲಸದಲ್ಲಿ ನಿರತನಾಗಿದ್ದ ಹಾಗೂ 'ಧನ್ಯವಾದ ಅಪ್ಪ, ಸಂಜೆ ನಿಮ್ಮ ಜತೆ ಮಾತನಾಡುತ್ತೇನೆ' ಎಂದು ಹೇಳಿದ್ದ,'' ಎಂದು ಭಾರತೀಯ ವಾಯು ಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತರಾಗಿರುವ ಸಿಂಗ್ ಹೇಳಿದರು.

ನಲ್ವತ್ತಮೂರು ವರ್ಷದ ರಜನೀಶ್ ಮೂಲತಃ ಹಿಮಾಚಲ ಪ್ರದೇಶದ  ಕಾಂಗ್ರಾ ಜಿಲ್ಲೆಯ  ನಾನಾವೋ ಗ್ರಾಮದವರಾಗಿದ್ದರೂ ಅವರ ಹೆತ್ತವರು ಪಾಲಂಪುರ್ ಸಮೀಪದ ಮರಂಡ ಎಂಬಲ್ಲಿ ವಾಸಿಸುತ್ತಿದ್ದಾರೆ ರಜನೀಶ್ ಅವರು 2000ರಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿ ಸೇರಿದ್ದರು.

ಅವರಿದ್ದ ಸೇನಾ ಹೆಲಿಕಾಪ್ಟರ್ ಭೂತಾನ್ ಸಮೀಪದ ಯೋನ್ಫುಲ್ಲ ಎಂಬಲ್ಲಿ ಅಪರಾಹ್ನ ಒಂದು ಗಂಟೆ ಸುಮಾರಿಗೆ ಪತನಗೊಂಡಿದೆ. ಅರುಣಾಚಲ ಪ್ರದೇಶದ ಖಿರ್ಮು ಎಂಬಲ್ಲಿಂದ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್ ಯೋನ್ಫುಲ್ಲದತ್ತ ಸಾಗುತ್ತಿದ್ದಾಗ  ದುರಂತ ಸಂಭವಿಸಿದೆ.

ಇಬ್ಬರು  ಪೈಲಟ್ ಗಳು ಅದರಲ್ಲಿದ್ದರು. ದುರಂತದಲ್ಲಿ ರಜನೀಶ್ ಜತೆ ಇನ್ನೊಬ್ಬ ರಾಯಲ್ ಭೂತಾನ್ ಸೇನೆಯ ಪೈಲಟ್ ಕೂಡ ಮೃತಪಟ್ಟಿದ್ದಾರೆ.

ರಜನೀಶ್ ತಮ್ಮ ಪತ್ನಿ ರೀನಾ ಪರ್ಮಾರ್ ಹಾಗೂ 12 ವರ್ಷದ ಪುತ್ರನನ್ನು ಅಗಲಿದ್ದಾರೆ. ರಜನೀಶ್ ಕುಟುಂಬ ರಾಜಸ್ಥಾನದ ಬಿಕಾನೇರ್ ನಲ್ಲಿ ವಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News