×
Ad

ರಾಕೇಶ್ ಅಸ್ಥಾನ ಭ್ರಷ್ಟಾಚಾರ ಪ್ರಕರಣ: ಇಡೀ ತನಿಖಾ ತಂಡವೇ ಖಾಲಿ!

Update: 2019-09-28 19:55 IST

ಹೊಸದಿಲ್ಲಿ,ಸೆ.28: ವಿವಾದಿತ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನ ವಿರುದ್ಧದ ಲಂಚ ಆರೋಪದ ತನಿಖೆಯನ್ನು ಸಂಪೂರ್ಣಗೊಳಿಸಲು ದಿಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ಸೆಪ್ಟಂಬರ್ 30ರ ಗಡುವು ಕೊನೆಯಾಗಲು ಕೆಲವೇ ದಿನಗಳು ಬಾಕಿಯಿರುವಂತೆಯೇ ಕಳಂಕಿತ ಅಧಿಕಾರಿಯನ್ನು ರಕ್ಷಿಸಲು ಕೇಂದ್ರ ಸರಕಾರ ಅಂತಿಮ ಪ್ರಯತ್ನಗಳಲ್ಲಿ ತೊಡಗಿದಂತೆ ಕಾಣುತ್ತಿದೆ ಎಂದು ‘thewire .in’ ವರದಿ ಮಾಡಿವೆ.

ಅಸ್ಥಾನ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಭ್ರಷ್ಟಾಚಾರನಿಗ್ರಹ ವಿಭಾಗದ ಜಂಟಿ ನಿರ್ದೇಶಕ ವಿ. ಮುರುಗೇಶನ್ ಅವರನ್ನು ಅವರ ಮೂಲ ಸೇವಾ ಕ್ಷೇತ್ರ ಉತ್ತರಾಖಂಡಕ್ಕೆ ಮರುವರ್ಗಾವಣೆಗೊಳಿಸಲಾಗಿದೆ. ಕಳೆದ ಆಗಸ್ಟ್ ಮಧ್ಯದಲ್ಲಿ ಮುರುಗೇಶನ್ ಅವರನ್ನು ವರ್ಗಾಯಿಸಲು ಅನುಮತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿತ್ತ. ಈ ಮನವಿಯನ್ನು ನ್ಯಾಯಾಧೀಶ ದೀಪಕ್ ಗುಪ್ತಾ ಅವರು ಶುಕ್ರವಾರ ಪುರಸ್ಕರಿಸಿದ್ದಾರೆ. ಮುರುಗೇಶನ್ ಅವರು ಕಲ್ಲಿದ್ದಲು ಹಗರಣದ ತನಿಖೆಯನ್ನೂ ನಡೆಸುತ್ತಿದ್ದ ಕಾರಣ ಅವರ ವರ್ಗಾವಣೆಗೆ ಶ್ರೇಷ್ಟ ನ್ಯಾಯಾಲಯದ ಅನುಮತಿಯ ಅಗತ್ಯವಿತ್ತು ಎಂದು ವರದಿ ತಿಳಿಸಿದೆ.

ಆಸಕ್ತಿದಾಯಕವೆಂದರೆ, ಅಸ್ಥಾನ ಪ್ರಕರಣದ ತನಿಖಾಧಿಕಾರಿಯಾಗಿದ್ದ ವರಿಷ್ಟಾಧಿಕಾರಿ ಸತೀಶ್ ಡಗರ್ ಕಳೆದ ತಿಂಗಳು ಸಿಬಿಐಯಿಂದ ಸ್ವಯಂನಿವೃತ್ತ ಕೋರಿದ್ದರು. ಅವರ ನಿವೃತ್ತಿ ಮನವಿಯನ್ನು ಸಿಬಿಐ ಕಳೆದ ವಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕಳುಹಿಸಿದೆ. ಅಸ್ಥಾನ ಪ್ರಕರಣದಲ್ಲಿ ಅಸಹಜ ಆತುರತೆ ತೋರಿಸುತ್ತಿರುವ ಸರಕಾರ ಇದಕ್ಕೆ ಸಂಬಂಧಪಟ್ಟ ಎಲ್ಲ ನಾಲ್ವರು ಅಧಿಕಾರಿಗಳನ್ನೂ ಬದಲಾಯಿಸಿದೆ. ಈ ಪೈಕಿ ಹೆಚ್ಚುವರಿ ನಿರ್ದೇಶಕ ಎಂ.ಎನ್ ರಾವ್ ಅವರನ್ನು ಜುಲೈ 5ರಂದು ತೆಗೆಯಲಾಗಿದ್ದರೆ ಜುಲೈ 10ರಂದು ಸಹಾಯಕ ಪೊಲೀಸ್ ಪ್ರಧಾನ ನಿರೀಕ್ಷಕ ತರುಣ್ ಗಾಬಾ ಅವರನ್ನು ಬದಲಾಯಿಸಲಾಗಿತ್ತು.

ಜುಲೈ 16ರಂದು ಡಿಐಜಿ ಗಗನ್‌ದೀಪ್ ಗಂಭೀರ್ ಅವರಿಗೆ ತನಿಖೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು. ಗಂಭೀರ್, ಅಸ್ಥಾನ ರಚಿಸಿದ್ದ ವಿಶೇಷ ತನಿಖಾ ತಂಡದ (ಸಿಟ್) ಸದಸ್ಯೆಯಾಗಿದ್ದರು ಮತ್ತು ಅಸ್ಥಾನ ಆಪ್ತರಾಗಿದ್ದಾರೆ ಎಂದು ನಂಬಲಾಗಿದೆ. ಅವರು ತನಿಖೆಯ ಹೊಣೆಯನ್ನು ಹೊತ್ತ ತಿಂಗಳ ನಂತರ ಡಗರ್ ಸ್ವಯಂನಿವೃತ್ತಿ ಕೋರಿದ್ದರು.

ತಾನು ತನಿಖೆ ನಡೆಸುತ್ತಿದ್ದ ಆರೋಪಿಯನ್ನು ಪ್ರಕರಣದಿಂದ ದೋಷಮುಕ್ತಗೊಳಿಸುವ ಪ್ರತಿಯಾಗಿ ಆರೋಪಿಯಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಅಸ್ಥಾನ ವಿರುದ್ಧ ಸಿಬಿಐ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಈ ಆರೋಪವನ್ನು ಅಸ್ಥಾನ ಬಲವಾಗಿ ನಿರಾಕರಿಸಿದ್ದರು. ಅಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಸಹಾಯಕ ನಿರ್ದೇಶಕ ಅಸ್ಥಾನ ಪರಸ್ಪರರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಕಾರಣ ಅವರಿಬ್ಬರನ್ನೂ ರಜೆಯಲ್ಲಿ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News