ಅಸಭ್ಯ ಉಡುಗೆ ಹಾಗೂ ಬಹಿರಂಗ ‘ಪ್ರೇಮ ಪ್ರದರ್ಶನ’ಕ್ಕೆ ಸೌದಿ ಕಡಿವಾಣ

Update: 2019-09-29 17:37 GMT

    ರಿಯಾದ್,ಸೆ.29: ಅಸಭ್ಯ ಉಡುಪು ಧರಿಸುವಿಕೆ ಹಾಗೂ ಪ್ರೇಮವನ್ನು ಬಹಿರಂಗವಾಗಿ ಅಭಿವ್ಯಕ್ತಗೊಳಿಸುವುದು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆಯ ಉಲ್ಲಂಘನೆಗಳಿಗೆ ದಂಡವನ್ನು ವಿಧಿಸುವುದಾಗಿ ಸೌದಿ ಆರೇಬಿಯ ಶನಿವಾರ ತಿಳಿಸಿದೆ. ವಿದೇಶಿ ಪ್ರವಾಸಿಗರಿಗೆ ವೀಸಾವನ್ನು ನೀಡುವುದಾಗಿ ಪ್ರಕಟಿಸಿದ ಮರುದಿನವೇ ಸಂಪ್ರದಾಯವಾದಿ ಸೌದಿ ಆಡಳಿತವು ಈ ನಿರ್ಧಾರವನ್ನು ಘೋಷಿಸಿದೆ.

   ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯತೆಯಿಂದ ವರ್ತನೆಯ 19 ಅಪರಾಧಗಳನ್ನು ಸೌದಿಯ ಆಂತರಿಕ ಸಚಿವಾಲಯ ಗುರುತಿಸಿದೆ. ಸೌದಿ ಆರೇಬಿಯವು ಇದೇ ಮೊದಲ ಬಾರಿಗೆ ಪ್ರವಾಸಿ ವೀಸಾಗಳನ್ನು ನೀಡಲು ಆರಂಭಿಸಿದೆ. ತನ್ನ ತೈಲ ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸುವ ಉದ್ದೇಶದಿಂದ ಅದು ಇದೇ ಮೊದಲ ಬಾರಿಗೆ ಪ್ರವಾಸಿ ವೀಸಾಗಳನ್ನು ನೀಡಲು ಆರಂಭಿಸಿದೆ.

 ನೂತನ ಕಾನೂನು ನಿಯಮಾವಳಿಗಳು, ಪುರುಷರು ಹಾಗೂ ಮಹಿಳೆಯರು ಸಭ್ಯತೆಯ ಉಡುಪುಗಳನ್ನು ಧರಿಸಬೇಕು ಹಾಗೂ ಪ್ರೇಮವನ್ನು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಪಡಿಸುವುದರಿಂದ ದೂರವಿರಬೇಕು. ಮಹಿಳೆಯರು ತಮ್ಮ ಆಯ್ಕೆಯ ಸಭ್ಯ ಉಡುಪುಗಳನ್ನು ಧರಿಸಬಹುದಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ಸೌದಿ ಸಾಮ್ರಾಜ್ಯಕ್ಕೆ ಭೇಟಿ ನೀಡುವ ಸಂದರ್ಶಕರು ಹಾಗೂ ಪ್ರವಾಸಿಗರು ಸಾರ್ವಜನಿಕ ನಡವಳಿಕೆಗೆ ಸಂಬಂಧಿಸಿದ ಕಾನೂನಿನ ಬಗ್ಗೆ ಚೆನ್ನಾಗಿ ತಿಳುವಳಿಕೆ ಹೊಂದಿರುವುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಅದು ತಿಳಿಸಿದೆ.

 ಅಮೆರಿಕ, ಆಸ್ಟ್ರೇಲಿಯ ಹಾಗೂ ಹಲವಾರು ಯುರೋಪ್ ರಾಷ್ಟ್ರಗಳು ಸೇರಿದಂತೆ 49 ದೇಶಗಳ ಪೌರರು ಆನ್‌ಲೈನ್ ಇ-ವೀಸಾಗಳನ್ನು ಅಥವಾ ವೀಸಾ ಆನ್ ಆರೈವಲ್ ಅನ್ನು ಪಡೆಯಲು ಅರ್ಹರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News