ವಿಶೇಷ ಜೆಟ್‌ನಲ್ಲಿ ತಾಂತ್ರಿಕ ವೈಫಲ್ಯ: ವಾಣಿಜ್ಯ ವಿಮಾನದಲ್ಲಿ ಪಾಕ್‌ಗೆ ನಿರ್ಗಮಿಸಿದ ಇಮ್ರಾನ್
ನ್ಯೂಯಾರ್ಕ್,ಸೆ.29: ಸೌದಿ ಅರೇಬಿಯ ಸರಕಾರವು ತನ್ನ ಅಮೆರಿಕ ಪ್ರವಾಸಕ್ಕೆ ನೀಡಿದ್ದ ವಿಶೇಷ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ವಾಣಿಜ್ಯ ವಿಮಾನವೊಂದರಲ್ಲಿ ತಾಯ್ನಾಡಿಗೆ ನಿರ್ಗಮಿಸಿದರು.
ಇಮ್ರಾನ್ ಖಾನ್ ಅವರಿದ್ದ ವಿಶೇಷ ಜೆಟ್ ವಿಮಾನದಲ್ಲಿ ನ್ಯೂಯಾರ್ಕ್‌ನ ಜಾನ್ ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹಾರಾಟ ಆರಂಭಿಸಿ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಶನಿವಾರ ಇಮ್ರಾನ್ ಖಾನ್ ಹಾಗೂ ಅವರ ಸಹಾಯಕರು, ಪರಿಚಾರಕರ ತಂಡವು ನ್ಯೂಯಾರ್ಕ್‌ನಿಂದ ಸ್ಥಳೀಯ ಕಾಲಮಾನ ಶನಿವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಸೌದಿ ಏರ್‌ಲೈನ್ಸ್ ವಿಮಾನದ ಮೂಲಕ ಜಿದ್ದಾಗೆ ನಿರ್ಗಮಿಸಿತು. ರವಿವಾರ ಬೆಳಗ್ಗೆ 8:40ರ ವೇಳೆಗೆ ಅದು ಜಿದ್ದಾ ವಿಮಾನನಿಲ್ದಾಣದಲ್ಲಿ ಇಳಿಯಲಿದೆಯೆಂದು ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಿದ್ದಾದಲ್ಲಿ ಕೆಲವು ತಾಸುಗಳ ಕಾಲ ತಂಗಿದ ಬಳಿಕ ಇಮ್ರಾನ್ ಅವರು ರವಿವಾರ ರಾತ್ರಿಯ ವೇಳೆಗೆ ಪಾಕಿಸ್ತಾನಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.
ಶನಿವಾರ ಸಂಜೆ,, ಇಮ್ರಾನ್ ಖಾನ್ ಹಾಗೂ ಅವರ ನಿಯೋಗವು ನ್ಯೂಯಾರ್ಕ್ ವಿಮಾನನಿಲ್ದಾಣದಿಂದ ನಿರ್ಗಮಿಸಿತು. ಆದಾಗ್ಯೂ, ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನವು ತಕ್ಷಣವೇ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ವಿಮಾನದ ತಾಂತ್ರಿಕ ದೋಷಗಳನ್ನು ಶನಿವಾರ ಬೆಳಗ್ಗಿನ ಒಳಗೆ ಸರಿಪಡಿಸದೆ ಇದ್ದಲ್ಲಿ ಇಮ್ರಾನ್ ಖಾನ್ ಅವರು ವಾಣಿಜ್ಯ ವಿಮಾನದ ಮೂಲಕ ಪಾಕಿಸ್ತಾನಕ್ಕೆ ನಿರ್ಗಮಿಸಲಿದ್ದಾರೆಂದು ಪಾಕ್ ಅಧಿಕಾರಿಗಳು ಈ ಮೊದಲು ತಿಳಿಸಿದ್ದರು.