×
Ad

4x100 ಮಿಕ್ಸೆಡ್ ರಿಲೇ: ಭಾರತಕ್ಕೆ ಏಳನೇ ಸ್ಥಾನ

Update: 2019-09-30 23:15 IST

ದೋಹಾ, ಸೆ.30: ವರ್ಲ್ಡ್ ಚಾಂಪಿಯನ್‌ಶಿಪ್‌ನ 4x400 ಮೀ. ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಭಾರತದ ತಂಡ ಫೈನಲ್‌ನಲ್ಲಿ ಏಳನೇ ಸ್ಥಾನದೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿದೆ.

ಮುಹಮ್ಮದ್ ಅನಸ್, ವಿ.ಕೆ. ವಿಸ್ಮಯಾ, ಜಿಸ್ನಾ ಮ್ಯಾಥ್ಯೂ ಮತ್ತು ಟಾಮ್ ನಿರ್ಮಲ್ ನೋಹ್ ಅವರನ್ನೊಳಗೊಂಡ ಭಾರತದ ರಿಲೇ ತಂಡ 3 ನಿಮಿಷ ಮತ್ತು 15.77 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಳನೇ ಸ್ಥಾನ ಪಡೆಯಿತು. ಫೈನಲ್‌ನಲ್ಲಿ 8 ತಂಡಗಳು ಪದಕದ ಬೇಟೆ ನಡೆಸಿದ್ದವು.

ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ 3 ನಿಮಿಷ ಮತ್ತು 15.71 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದ್ದ ಭಾರತದ ತಂಡ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಹಿನ್ನಡೆ ಅನುಭವಿಸಿತು.

ಮೊದಲ ಬಾರಿ ಸ್ಪರ್ಧಿಸಿದ್ದ ಅಮೆರಿಕದ ತಂಡ ವಿಶ್ವ ದಾಖಲೆಯೊಂದಿಗೆ (3:09.34)ಚಿನ್ನ, ಜಮೈಕಾ (3:11.78) ಬೆಳ್ಳಿ ಮತ್ತು ಬಹರೈನ್(3.11.82) ಕಂಚು ಪಡೆಯಿತು. ಹೀಟ್‌ನಲ್ಲಿ 3ನೇ ಸ್ಥಾನ ಗಳಿಸಿ ಫೈನಲ್ ತಲುಪಿದ್ದ ಭಾರತದ ರಿಲೇ ತಂಡ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವಕಾಶ ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News