×
Ad

ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಭಾರತದ ಟೆನಿಸ್ ಪಟು ಸುಮಿತ್ ನಗಾಲ್

Update: 2019-09-30 23:22 IST

ಹೊಸದಿಲ್ಲಿ, ಸೆ.30: ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸುಮಿತ್ ನಗಾಲ್ ಅವರು ಪ್ರಜ್ಞೇಶ್ ಗುಣೇಶ್ವರನ್ ಬಳಿಕ ಭಾರತದ 2ನೇ ರ್ಯಾಂಕಿನ ಸಿಂಗಲ್ಸ್ ಟೆನಿಸ್ ಆಟಗಾರನಾಗಿದ್ದಾರೆ. ಅಮೆರಿಕ ಓಪನ್‌ನಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್‌ರನ್ನು ಎದುರಿಸಿದ್ದ ನಗಾಲ್ ಬಂಜಾ ಲುಕಾದಲ್ಲಿ ಎಟಿಪಿ ಚಾಲೆಂಜರ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಬ್ಯುನಸ್‌ಐರಿಸ್‌ನಲ್ಲಿ ಎಟಿಪಿ ಚಾಲೆಂಜರ್ ಪ್ರಶಸ್ತಿ ಜಯಿಸಿದ್ದರು. ಬ್ಯುನಸ್‌ಐರಿಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದರೂ ಅವರ ಕೋಚ್ ಹಾಗೂ ಫಿಸಿಯೋ ಹಣದ ಸಮಸ್ಯೆ ಎದುರಿಸಿದ್ದರು.

 ‘‘ನಾನಿಲ್ಲಿ ಏಕಾಂಗಿಯಾಗಿದ್ದೇನೆ. ನನಗೆ ಯಾರೂ ನೆರವು ನೀಡುವವರಿಲ್ಲ. ನಾನು ಉತ್ತಮ ಟೆನಿಸ್ ಆಡುತ್ತೇನೆಂಬ ತೃಪ್ತಿಯಿದೆ. ಟೆನಿಸ್ ಆಡುವುದು ಸುಲಭವಲ್ಲ. ನನಗೆ ತುಂಬಾ ಬೇಸರವಾಗಿದೆ. ಯುಎಸ್ ಓಪನ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ನನ್ನ ದಾರಿ ಒಂದೇ ಯಾಗಿದೆ. 22ರ ವಯಸ್ಸಿನಲ್ಲಿ ಯು.ಎಸ್ ಓಪನ್‌ಗೆ ಅರ್ಹತೆ ಪಡೆದು ರೋಜರ್ ಫೆಡರರ್ ವಿರುದ್ಧ ಆಡಿದ್ದೇನೆ. ಆದರೆ, ಇದು ಯಾರ ಮೇಲೂ ಪರಿಣಾಮಬೀರಿಲ್ಲ. ಟೆನಿಸ್‌ಗೆ ಯಾರೂ ಮುಂದೆ ಬಂದು ಹೂಡಿಕೆ ಮಾಡದಿರುವುದು ತುಂಬಾ ಬೇಸರ ಉಂಟು ಮಾಡಿದೆ’’ ಎಂದು ಬ್ಯುನಸ್‌ಐರಿಸ್‌ನಿಂದ ಸುದ್ದಿಸಂಸ್ಥೆ ಪಿಟಿಐಗೆ ನಗಾಲ್ ತಿಳಿಸಿದ್ದಾರೆ.

ನಗಾಲ್, ಟಾರ್ಗೆಟ್ ಪೋಡಿಯಂ ಸ್ಕೀಮ್(ಟಾಪ್ಸ್)ನಿಂದ ಆರ್ಥಿಕ ಸಹಾಯ ಪಡೆಯುತ್ತಿದ್ದರು. ಆದರೆ, ಬಳಿಕ ಅವರನ್ನು ಈ ಯೋಜನೆಯಿಂದ ಕೈಬಿಡಲಾಯಿತು. ಟಾಪ್ಸ್ ಯೋಜನೆಯಿಂದ ಪ್ರತಿ ತಿಂಗಳು 50,000 ರೂ. ಆರ್ಥಿಕ ಸಹಾಯ ಸಿಗುತ್ತಿತ್ತು. ಒಲಿಂಪಿಕ್ಸ್ ನಲ್ಲಿ ಪದಕದ ಭರವಸೆ ಮೂಡಿಸಿರುವ ಅಥ್ಲೀಟ್‌ಗಳಿಗೆ ಮಾತ್ರ ಟಾಪ್ ಯೋಜನೆಯ ಲಾಭ ಸಿಗುತ್ತಿದೆ. ಈಗ ಡಬಲ್ಸ್ ಸ್ಪೆಷಲಿಸ್ಟ್ ಗಳಾದ ರೋಹನ್ ಬೋಪಣ್ಣ ಹಾಗೂ ಡಿವಿಜ್ ಶರಣ್ ಟಾಪ್ಸ್ ಯೋಜನೆಯ ಫಲಾನುಭವಿಗಳು. ಭಾರತದ ಯಾವುದೇ ಸಿಂಗಲ್ಸ್ ಆಟಗಾರರು ಈ ಯೋಜನೆಯಲ್ಲಿಲ್ಲ.

► ವ್ಯವಸ್ಥೆಯ ವೈಫಲ್ಯ ಎಂದ ಭೂಪತಿ

ನಗಾಲ್‌ಗೆ ಸಾಕಷ್ಟು ಆರ್ಥಿಕ ಬೆಂಬಲ ಸಿಗದಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಗ್ರಾನ್‌ಸ್ಲಾಮ್ ಚಾಂಪಿಯನ್ ಮಹೇಶ್ ಭೂಪತಿ ಅಭಿಪ್ರಾಯಪಟ್ಟಿದ್ದಾರೆ.

‘‘ಸುಮಿತ್ ಖಂಡಿತ ವಾಗಿಯೂ ಓರ್ವ ವಿಶೇಷ ಪ್ರತಿಭೆ. ಕಳೆದ ಆರು ತಿಂಗಳುಗಳಲ್ಲಿ ತಾನೇನು ಎಂದು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಮುಂಬರುವ ಒಲಿಂಪಿಕ್ಸ್ ನ್ನು ದೃಷ್ಟಿಯಲ್ಲಿಟ್ಟು ಕೊಂಡು ಸುಮಿತ್‌ರನ್ನು ಪೋಷಿಸ ಲಾಗುತ್ತಿಲ್ಲ, ಬೆಂಬಲವನ್ನು ನೀಡಲಾಗುತ್ತಿಲ್ಲ. ಇದನ್ನು ನಾನು ವ್ಯವಸ್ಥೆಯ ವೈಫಲ್ಯ ಎಂದು ಪರಿಗಣಿಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಏಕೆ ಚಾಂಪಿಯನ್ ತಂಡವನ್ನು ಸೃಷ್ಟಿಸುತ್ತಿಲ್ಲ ಎಂದು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ’’ ಎಂದು ಭೂಪತಿ ಹೇಳಿದರು.

ನಗಾಲ್‌ಗೆ ವಿರಾಟ್ ಕೊಹ್ಲಿ ಪ್ರತಿಷ್ಠಾನದಿಂದ ಆರ್ಥಿಕ ನೆರವು ಲಭಿಸುತ್ತಿದೆ. ಆದರೆ,ಇದು ಅವರಿಗೆ ಸಾಕಾಗುತ್ತಿಲ್ಲ. ನಗಾಲ್‌ಗೆ ವರ್ಷಕ್ಕೆ ಸುಮಾರು 1.5 ಕೋ.ರೂ. ವಾರ್ಷಿಕ ಆಯ-ವ್ಯಯದ ಅಗತ್ಯವಿದೆ. ನಗಾಲ್ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ-100ರ ಸಮೀಪವಿದ್ದರೂ ಅವರಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ.

‘‘ನಾನು 2018ರಲ್ಲಿ 350ನೇ ರ್ಯಾಂಕಿನಲ್ಲಿದ್ದಾಗ ಎಷ್ಟು ಬಜೆಟ್ ನನ್ನಲ್ಲಿತ್ತೋ, ಅಷ್ಟೇ ಬಜೆಟ್ ಈಗ ಕೂಡಾ ಇದೆ. ನನಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಆದರೆ, ಜನರು ಬೆನ್ನು ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಕೆಲವರು ಕೇವಲ ಭರವಸೆ ನೀಡುತ್ತಾರೆ. ಸಮಯ ಬಂದಾಗ ಮತ್ತೊಂದು ಕಡೆ ನೋಡುತ್ತಾರೆ. ನಾನು ಸಿಲುಕಿಹಾಕಿಕೊಂಡಿದ್ದೇನೆ. ನನಗೆ ಪ್ರವಾಸದ ವೇಳೆ ನೆರವಾಗುವ ಕೋಚ್‌ನ ಅಗತ್ಯವಿದೆ’’ ಎಂದು ನಗಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News