ಗಾಂಧೀಜಿ ಬಿಡಿ ಚಿತ್ರಗಳು

Update: 2019-10-01 16:36 GMT

ಹರಿಜನರಿಗಿಲ್ಲದ ದೇವಸ್ಥಾನ ನಮಗೂ ಬೇಡ

ಒಮ್ಮೆ ಗಾಂಧೀಜಿ ಪುರಿಗೆ ಹೋಗಿದ್ದರು. ಅಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಬಾಗಿಲಲ್ಲಿ, ‘ಹಿಂದೂಗಳ ಹೊರತು ಮತ್ಯಾರಿಗೂ ಪ್ರವೇಶ ಇಲ್ಲ’ ಎಂದು ಬೋರ್ಡ್ ಹಾಕಿದ್ದನ್ನು ಕಂಡು, ಆ ಬೋರ್ಡ್ ತೆಗೆಯಬೇಕು ಹಾಗೂ ಮಂದಿರಕ್ಕೆ ಹರಿಜನರಿಗೆ ಪ್ರವೇಶ ನೀಡಬೇಕೆಂದು ಗಾಂಧಿ ಆಗ್ರಹಿಸಿದರು. ಆದರೆ ದೇವಸ್ಥಾನದವರು ಹರಿಜನರಿರಲಿ, ಗಾಂಧೀಜಿಯನ್ನೂ ಒಳಗೆ ಬಿಡದೆ ತಡೆದರು. ಅಷ್ಟೇ ಅಲ್ಲ ಅವರ ಮೇಲೆ ಹಲ್ಲೆಯನ್ನೂ ಮಾಡಿದರು.

ಇದಾದ ಮೇಲೆ ಗಾಂಧಿ ಪುರಿ ಸಮ್ಮೇಳನದ ಅಂಗವಾಗಿ ಮತ್ತೊಂದು ಬಾರಿ ಪುರಿಗೆ ಹೋಗಿದ್ದರು. ಗ್ರಾಮೋದ್ಯೋಗ ಮತ್ತು ಅಭಿವೃದ್ಧಿಯ ಪ್ರದರ್ಶನವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ, ‘‘ಎಲ್ಲಿಯತನಕ ಪುರಿ ಜಗನ್ನಾಥ ದೇವಸ್ಥಾನಕ್ಕೆ ಹರಿಜನರನ್ನು ಬಿಡುವುದಿಲ್ಲವೋ ಅಲ್ಲಿಯತನಕ ಅದನ್ನು ಜಗನ್ನಾಥನ ದೇವಸ್ಥಾನ ಎಂದು ಕರೆಯಲಾಗದು. ಅದನ್ನು ಅಲ್ಲಿರುವ ಪೂಜಾರಿಗಳ ಒಡೆತನದ ದೇವಸ್ಥಾನ ಎಂದಷ್ಟೇ ಕರೆಯಬಹುದು’’ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು.

ಇದಾಗಿ ಎಷ್ಟೋ ದಿನಗಳ ನಂತರ ಕಸ್ತೂರ್ಬಾ ಪುರಿಗೆ ಹೋಗಬೇಕಾಗಿ ಬಂತು. ಅವರೊಂದಿಗೆ ಮಹದೇವ ದೇಸಾಯಿ, ಮತ್ತವರ ಪತ್ನಿ ಕೂಡ ಇದ್ದರು. ಪುರಿಗೆ ಬಂದಿರುವುದರಿಂದ ಜಗನ್ನಾಥ ಮಂದಿರಕ್ಕೆ ಹೋಗುವ ಇಚ್ಛೆಯನ್ನು ಕಸ್ತೂರ್ಬಾ ವ್ಯಕ್ತಪಡಿಸಿದರು. ಮಹದೇವ ದೇಸಾಯಿಯವರ ಪತ್ನಿ ಮತ್ತು ಬಾ ಇಬ್ಬರೂ ಮಂದಿರಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದರು. ಅವರ ಮುಖದಲ್ಲಿ ಸಂಪೂರ್ಣ ತೃಪ್ತಿ ತುಂಬಿತ್ತು.

‘‘ಶ್ರೀಮತಿ ಗಾಂಧಿ ದೇವಸ್ಥಾನದೊಳಗೆ ಹೋಗಿ ಬಂದರಂತೆ’’ ಎಂಬ ಗುಸುಗುಸು ಪುರಿ ಪಟ್ಟಣದ ತುಂಬ ಹರಡಿತು. ಇದು ಹೇಗೋ ಬಾಪು ಕಿವಿಗೂ ತಲುಪಿತು. ಬಾ ಪುರಿಗೆ ಹೋದರೂ ದೇವಸ್ಥಾನಕ್ಕೆ ಹೋಗಲಾರರು ಮತ್ತು ಸಮುದ್ರ ಸ್ನಾನ ಮಾಡಿ ಬರುತ್ತಾರೆಂದು ನಂಬಿದ್ದ ಗಾಂಧಿಗೆ ಇದು ಸಹಿಸಲಸಾಧ್ಯ ನೋವನ್ನುಂಟುಮಾಡಿತು. ತೀವ್ರ ಆಘಾತಕ್ಕೊಳಗಾದರು. ಮಹದೇವರನ್ನು ಕರೆದು ಬಾಪು, ‘‘ನೀನು ದೊಡ್ಡ ತಪ್ಪುಮಾಡಿದೆ. ಇವರೆಲ್ಲರಿಗೆ ಹಿಂದೆ ನಡೆದದ್ದನ್ನು ತಿಳಿಸಿ ಹೇಳುವುದು ನಿನ್ನ ಕರ್ತವ್ಯವಾಗಿತ್ತು. ಪುರಿಯಲ್ಲಿ ನನ್ನ ಮೇಲಾದ ಹಲ್ಲೆಯ ಬಗ್ಗೆ ತಿಳಿಸಬೇಕಿತ್ತು. ವಿಷಯವನ್ನು ಅರ್ಥ ಮಾಡಿಸುವ ಹೊಣೆ ನಿನ್ನದಾಗಿತ್ತು. ಇಂದು ಹರಿಜನರು ನಾವು ಮೋಸಗಾರರು ಎಂದುಕೊಂಡರೆ ಅದರಲ್ಲಿ ತಪ್ಪಿಲ್ಲ. ಅವರೇಕೆ ಹಾಗೆ ಅಂದುಕೊಳ್ಳಬಾರದು. ಅವರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ನಾವು ಹೋಗ್ತೀವಿ ಎಂದಾದರೆ, ಅವರು ನಮ್ಮನ್ನು ತಮ್ಮವರು ಎಂದು ಹೇಗೆ ನಂಬಿಯಾರು?’’ ಎಂದು ವೇದನೆಯಿಂದಲೇ ಹೇಳಿದರು.

ಅಷ್ಟೇ ಅಲ್ಲ, ಸೇವಾ ಸಂಘದ ಸದಸ್ಯರನ್ನು ಕರೆದ ಬಾಪು, ‘‘ಬಾ ದೇವಸ್ಥಾನಕ್ಕೆ ಹೋಗದೆ ಬಂದಿದ್ದರೆ ಚೆನ್ನಾಗಿತ್ತು. ನಾನೀಗ ಹಳ್ಳದಲ್ಲಿ ಬಿದ್ದಿದ್ದೇನೆ. ನನ್ನ ಕೆಲಸದಲ್ಲಿನ ಆಧಾರವೇ ಕುಸಿದು ಬಿದ್ದಂತಾಗಿದೆ. ತಾವೇನು ಮಾಡುತ್ತಿದ್ದೀವಿ ಎಂಬುದರ ಅರಿವು ಇವರಿಗೆ ಇರಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರಿಗೆ ತಿಳಿವಳಿಕೆ ಹೇಳದೇ ಇದ್ದ ತಪ್ಪುನಮ್ಮದೇ’’ ಎಂದು ಅರಿಕೆ ಮಾಡಿಕೊಂಡು ತಮ್ಮ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು.

ಆಳವಾದ ಧರ್ಮ-ವಿವೇಕದ ಪ್ರಜ್ಞೆಯುಳ್ಳ ಮತ್ತು ಐವತ್ತು ವರ್ಷಕ್ಕೂ ಮೀರಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದ ಗಾಂಧೀಜಿಯವರ ನಡೆ-ನುಡಿ ಒಂದೇ ಆಗಿತ್ತು ಎಂಬುದನ್ನು ಇದು ತೋರುತ್ತದೆ.

ಬಾಪುವಿನ ಪ್ರಯೋಗಶಾಲೆ

ನೂರಾರು ವರ್ಷಗಳ ಬಡತನದ ಬೇಗೆಯಲ್ಲಿ ಬೆಂದು ಅದರ ಪರಿಣಾಮವಾಗಿ ಅಜ್ಞಾನದ ಮುಸುಕಿನಲ್ಲಿದ್ದ, ಭಾರತದ ಗ್ರಾಮೀಣ ಜನರ ಸಾಮಾಜಿಕ ಜೀವನಕ್ಕೆ ಒಂದು ತೆರನಾದ ಲಕ್ವ ಹೊಡೆದಿತ್ತು. ಯಾವುದೇ ಘಟನೆಯೂ ಅವರ ಚೈತನ್ಯವನ್ನು ಬಡಿದೆಬ್ಬಿಸುತ್ತಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿತ್ತು. ಈ ಸಮಯದಲ್ಲಿ ಬಾಪು ಹಳ್ಳಿಗಳತ್ತ ತಮ್ಮ ಗಮನ ಹರಿಸಿದರು. ಇದು ನಾನಾ ತರಹದ ಕಷ್ಟ, ಸಂಕಟಗಳಿಂದ ಕೂಡಿದ, ದೀರ್ಘ ಹಾದಿಯಾಗಿತ್ತು.

ಬಡತನದಿಂದ ತಮ್ಮ ತಲೆ ಎತ್ತಿ ನಿಲ್ಲುವ ಶಕ್ತಿಯನ್ನೂ ಹಳ್ಳಿಯ ಜನ ಕಳೆದುಕೊಂಡಿದ್ದರು. ಎಲ್ಲೆಲ್ಲಿಯೂ ಹೊಲಸು, ಕಾಯಿಲೆಗಳು ತುಂಬಿ ತುಳುಕುತ್ತಿದ್ದವು. ವರ್ಧಾದ ಮಗನ್‌ವಾಡಿಯಲ್ಲಿ ಇರುವಾಗಲೇ ಬಾಪು ಪಕ್ಕದ ಸಿಂಧಿ ಹಳ್ಳಿಯಲ್ಲಿ ಸ್ವಚ್ಛತೆಯ ಕೆಲಸ ಮಾಡಲು ಆರಂಭಿಸಿದ್ದರು. ಆ ಹಳ್ಳಿಯ ಜನರು ಗಾಂಧೀಜಿ, ಮಹಾದೇವ ದೇಸಾಯಿ ಮತ್ತು ಅವರ ಜೊತೆಗಾರರನ್ನು ಹಳ್ಳಿಯನ್ನು ಸ್ವಚ್ಛ ಮಾಡಲು ಬರುವ ತೋಟಿಗಳಂತೆಯೇ ಕಾಣುತ್ತಿದ್ದರು. ಒಂದು ಸಾರಿ ಒಬ್ಬ ಮಲ ವಿಸರ್ಜನೆ ಮುಗಿಸಿ ಬರುತ್ತಿದ್ದವ, ಮಹಾದೇವರನ್ನು ನೋಡಿ, ‘‘ಅಲ್ಲಿ ಅತ್ತ ಕಡೆ ಇನ್ನೂ ಬಹಳ ಹೊಲಸು ಇದೆ, ಅಲ್ಲಿ ಹೋಗಿ ಸ್ವಚ್ಛ ಮಾಡು’’ ಎಂದು ಬೊಟ್ಟು ಮಾಡಿ ತೋರಿಸಿದ.

ಇದನ್ನೆಲ್ಲ ಗಮನಿಸುತ್ತಿದ್ದ ಹುಡುಗ ನಾರಾಯಣ ದೇಸಾಯಿಯವರು ಒಂದು ರವಿವಾರ ಬಾಪುಗೇ ನೇರವಾಗಿ ಕೇಳಿಯೇಬಿಟ್ಟರು. ‘‘ಬಾಪು ಇಂತಹ ಕೆಲಸ ಮಾಡುವುದರಿಂದ ಏನು ಲಾಭ? ಆ ಹಳ್ಳಿಯ ಜನರ ಮೇಲೆ ಏನೂ ಪರಿಣಾಮ ಆದಂತೆ ಕಾಣುವುದಿಲ್ಲ. ಅಷ್ಟೇ ಏಕೆ ಇನ್ನೂ ಎಲ್ಲೆಲ್ಲಿ ಹೊಲಸು ಇದೆಯೋ ಅಲ್ಲೆಲ್ಲ ಹೋಗಿ ಶುಚಿ ಮಾುವಂತೆ ನಮಗೇ ಹೇಳುತ್ತಾರೆ.’’

ಶುಚಿ ಕೆಲಸವನ್ನು ಒಂದು ಕಲೆ ಎಂದು ತಿಳಿದಿದ್ದ ಬಾಪು, ‘‘ಇಷ್ಟಕ್ಕೇ ಸುಸ್ತಾಗಿಬಿಟ್ಟೆಯಾ ನೀನು? ನಿನ್ನ ತಂದೆಯನ್ನು ಕೇಳು. ಎಷ್ಟು ದಿನದಿಂದ ಅವರು ಸ್ವಚ್ಛತೆಯ ಕೆಲಸ ಮಾಡುತ್ತಿದ್ದಾರೆ. ಅವರಂತೆ ನೀನೂ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಅಸ್ಪಶ್ಯತೆಯ ಕಳಂಕವನ್ನು ತೊಡೆದು ಹಾಕುವುದು. ಅದು ಅಷ್ಟು ಸುಲಭವಲ್ಲ. ಅದನ್ನು ತೊಡೆದು ಹಾಕಬೇಕಾದರೆ ನಾವು ಭಾರೀ ತಪಸ್ಸನ್ನೇ ಕೈಗೊಳ್ಳಬೇಕು’’ ಎಂದು ಸಮಾಧಾನ ಹೇಳಿದರು.

ಸ್ವಚ್ಛತೆಯ ಕೆಲಸ ಕೈಗೊಳ್ಳುವುದರಲ್ಲಿ ಎರಡು ಉದ್ದೇಶಗಳಿದ್ದವು. ಒಂದು ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು; ಮತ್ತು ಎರಡನೆಯದಾಗಿ ಸವರ್ಣೀಯರೂ ಈ ಕೆಲಸವನ್ನು ಮಾಡಬೇಕು. ಆ ಮೂಲಕ ಮಲ ಎತ್ತುವ ಕೆಲಸ ಅಸ್ಪಶ್ಯರು (ಹರಿಜನರು) ಮಾತ್ರ ಮಾಡುವಂತಹದು ಎಂಬ ತುಚ್ಛ, ಕೀಳು ಭಾವನೆಯನ್ನು ಹೋಗಲಾಡಿಸುವುದು.

ಸ್ನೇಹಿತರ ಸಮಾಗಮ

ಭಾರತ-ಪಾಕಿಸ್ತಾನ ವಿಭಜನೆ ಕುರಿತು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಮಾತುಕತೆ ನಡೆಯುತ್ತಿದ್ದ ಸಂದರ್ಭವದು. ಗಾಂಧೀಜಿ ಮತ್ತು ಜಿನ್ನಾ ಒಂದೆಡೆ ಸೇರಿ ಮಾತನಾಡುತ್ತಿದ್ದರು. ಒಂದು ವರ್ಷದವರೆಗೆ ನಡೆಯಿತು ಈ ಪ್ರಯತ್ನ. ಭೇಟಿ, ಮಾತುಕತೆ, ವಿಚಾರ-ವಿನಿಮಯ ನಡೆದುದು ಹಲವಾರು ಬಾರಿ. ಆದರೆ ಒಮ್ಮತಕ್ಕೆ ಬರಲಾಗಲಿಲ್ಲ.

ಬೇಸತ್ತ ಗಾಂಧೀಜಿ, ‘‘ಮಿಸ್ಟರ್ ಜಿನ್ನಾ, ನಿಮ್ಮ ಭಾಷಣಗಳಲ್ಲಿ ಹಿಂದಿನ ರಾಷ್ಟ್ರೀಯತೆ ಇದ್ದಂತೆ ಕಾಣಿಸುವುದಿಲ್ಲ. 1915ರಲ್ಲಿ ನಾನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದಾಗ, ಎಲ್ಲರೂ ನಿಮ್ಮನ್ನು ಹೊಗಳುತ್ತಿದ್ದರು. ಕಟ್ಟಾ ರಾಷ್ಟ್ರೀಯವಾದಿಗಳೆಂದು ಹೆಸರಿತ್ತು ನಿಮಗೆ. ಹಿಂದೂ ಮತ್ತು ಮುಸ್ಲಿಮರ ಆಶಾವಾದಿಗಳಾಗಿದ್ದಿರಿ ನೀವು. ಈಗಲೂ ನೀವು ಹಾಗಿದ್ದೀರಾ? ಕೆಲವು ಸಲಹೆಗಳೊಡನೆ ಬನ್ನಿ ಎಂದು ತಿಳಿಸಿದ್ದೀರಿ. ನನ್ನ ಯಾವ ಸಲಹೆಗಳು ನಿಮ್ಮನ್ನೊಪ್ಪಿಸಬಲ್ಲವು? ಎರಡು ಕೋಮುಗಳನ್ನು ಒಂದುಗೂಡಿಸುವ ಸಲಹೆ ನಿಮ್ಮಿಂದಲೇ ಏಕೆ ಬರಬಾರದು? ಇದು ಗೆಳೆಯನ ಕಳಕಳಿಯೆ ಹೊರತು ವೈರಿಯದ್ದಲ್ಲ...’’ ಎಂದು ಬರೆದಿದ್ದರು.

ಅದಕ್ಕೆ ಜಿನ್ನಾ, ‘‘1915ರಲ್ಲಿ ನನ್ನನ್ನು ಕುರಿತು ಜನ ಹೇಳುತ್ತಿದ್ದರು; ಈಗ ನನ್ನ ವಿಷಯದಲ್ಲಿ ಅವರೇನು ಅಭಿಪ್ರಾಯಪಡುತ್ತಾರೆ; ಇದಲ್ಲ ನನಗೆ ಬೇಕಾಗಿರುವುದು. ರಾಷ್ಟ್ರೀಯತೆ ಯಾರ ವ್ಯಕ್ತಿಗತ ಗುತ್ತಿಗೆಯೂ ಅಲ್ಲ. ಅದನ್ನು ಬಿಡಿಸಿ ಹೇಳುವುದು ಈಗ ಕಷ್ಟ. ಬರೀ ಪತ್ರ ವ್ಯವಹಾರಗಳಿಂದ ಎರಡು ಕೋಮುಗಳನ್ನು ಬೆಸೆಯಲು ಸಾಧ್ಯವೇ? ಇರುವ ಮೂಲಭೂತ ಭೇದ ನಿಮಗೆ ತಿಳಿಯದಂಥದ್ದೇನೂ ಅಲ್ಲ. ನೀವೇ ಅದಕ್ಕೆ ಪರಿಹಾರ ಸೂಚಿಸಿ’’ ಎಂದು ಬರೆದರು.

ಹೀಗೆ ಇಬ್ಬರಲ್ಲೂ ಪತ್ರ ವ್ಯವಹಾರ ಬೆಳೆಯುತ್ತಾ ಹೋಯಿತು. ಕೊನೆಗೆ ಜಿನ್ನಾ ಅವರ ಭೇಟಿಗಾಗಿ ಗಾಂಧೀಜಿ ಒಂದು ದಿನ ನಿಗದಿಪಡಿಸಿಕೊಂಡರು. ಇದು ಅನೇಕರಿಗೆ ಸರಿ ಎನಿಸಲಿಲ್ಲ. ಜಿನ್ನಾ ಅವರ ಮನೆ ಬಾಗಿಲಿಗೆ ಬಾಪೂ ಹೋಗುವುದೇ? ಅವರೆ ಖುದ್ದಾಗಿ ಬಂದು ಏಕೆ ಭೇಟಿಯಾಗಬಾರದು? ಇದು ಪ್ರತಿಷ್ಠೆಯ ಪ್ರಶ್ನೆ ಎಂದು ಗೊಣಗಾಡಿದರು.

ಆದರೆ ಗಾಂಧೀಜಿ ಯೋಚಿಸಿದ್ದು ಬೇರೆ ರೀತಿ. ಪ್ರತಿಷ್ಠೆ, ಅಂತಸ್ತಿನ ಪ್ರಶ್ನೆ ಅವರ ಮುಂದಿರಲಿಲ್ಲ. ರಾಷ್ಟ್ರದ ಮುಂದೆ ವ್ಯಕ್ತಿ ಗೌಣ. ತನ್ನನ್ನು ಬಲಿ ಕೊಟ್ಟಾದರೂ ರಾಷ್ಟ್ರವನ್ನುಳಿಸಬೇಕು. ಈಗ ಇರುವುದು ಹಿಂದೂ-ಮುಸ್ಲಿಂ ಏಕತೆಯ ಪ್ರಶ್ನೆ. ಇದನ್ನು ಯಾರು ಪ್ರತಿನಿಧಿಸಬೇಕು ಎನ್ನುವುದಲ್ಲ ಮುಖ್ಯ. ನಾವಿಬ್ಬರು ಸ್ನೇಹಿತರು. ಬಹುಕಾಲದಿಂದ ಪರಿಚಿತರು. ಈ ಭೇಟಿಗೆ ಅನವಶ್ಯಕ ಪ್ರಾಮುಖ್ಯತೆಯನ್ನು ಕೊಟ್ಟು ಜಟಿಲಗೊಳಿಸಬಾರದು. ಕೋಮು ಸೌಹಾರ್ದಕ್ಕಾಗಿ ನಮ್ಮೆಲ್ಲರ ಹೃದಯ ತುಡಿಯುವಂತಾಗಬೇಕು. ದಳ್ಳುರಿಯ ಜ್ವಾಲೆ ಆಹುತಿ ತೆಗೆದುಕೊಳ್ಳುವ ಅಸಂಖ್ಯ ಮುಗ್ಧಜೀವಿಗಳನ್ನು ನಾವು ಉಳಿಸಬೇಕು ಎಂದು ತಮ್ಮ ಹೃದಯ ಬಿಚ್ಚಿ ಜನತೆಯಲ್ಲಿ ಪ್ರಾರ್ಥಿಸಿಕೊಂಡರು.

ವಿಭಜನೆಗಾಗಿ ಒತ್ತಾಯಿಸಿದ ಜಿನ್ನಾ, ವಿಭಜನೆಯಾಗ ದಂತೆ ಕೊನೆಯವರೆಗೂ ತಡೆದ ಗಾಂಧಿ- ಇಬ್ಬರ ವ್ಯಕ್ತಿತ್ವಗಳೂ ಭಿನ್ನ. ಆದರೆ ಇಬ್ಬರೂ ಒಳ್ಳೆಯ ಸ್ನೇಹಿತರು. ದೇಶಕ್ಕಾಗಿ, ಜನಕ್ಕಾಗಿ ಹೋರಾಡಿದ ಮಹನೀಯರು. ಹಾಗೆ ನೋಡಿದರೆ, ಜಿನ್ನಾ ಒಬ್ಬರಿಗೇ ಬಾಪೂ ಮುಂದೆ ಕುಡಿಯುವ, ಸಿಗರೇಟು ಸೇದುವ ಸ್ವಾತಂತ್ರ್ಯವಿದ್ದುದು. ಇದನ್ನು ಹೇಳುವುದಕ್ಕಿಂತ ಅವರಿಬ್ಬರೂ ಒಟ್ಟಿಗೆ ಇರುವ ಕೆಲವು ಅಪರೂಪದ ಚಿತ್ರಗಳನ್ನು ನೋಡಿದರೆ, ನಿಮಗೇ ಅರ್ಥವಾಗಬಹುದು.

ಬಾ ಇಲ್ಲದ ಬಾಪೂ

1944ರ ಫೆಬ್ರವರಿ 22ರಂದು ಕಸ್ತೂರ್ಬಾ ಇನ್ನಿಲ್ಲವಾದರು. ಬಾ-ಬಾಪೂ ಅವರ ಅರವತ್ತೆರಡು ವರ್ಷಗಳ ದೀರ್ಘ ಸಂಬಂಧ ಅಂದಿಗೆ ಮುಗಿದಿತ್ತು. ಬಾಪೂರವರ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿದ್ದ ಬಾ, ಅವರಿಗೆ ಆಸರೆಯಾಗಿ ನಿಂತ ಧೀಮಂತ ಚೇತನ. ಅವರ ಪಾತಿವ್ರತ್ಯ ಧರ್ಮ ಗಾಂಧಿ ಶಕ್ತಿಯನ್ನು ಬೆಳಗಿಸಲು, ವೃದ್ಧಿಸಲು ನೆರವಾಯಿತು. ಧರ್ಮ-ಸಂಕಟಗಳ ಏರುಪೇರುಗಳಲ್ಲಿ ಅವರು ತೋರಿಸಿದ ತಾಳ್ಮೆ, ಜಾಣತನ, ನಡೆದುಕೊಂಡ ರೀತಿ ಮಾನವ ಸಂಸ್ಕೃತಿಗೆ ಕಳಶಪ್ರಾಯ. ಗೀತೆ, ಕುರ್‌ಆನ್, ಬೈಬಲ್ ಮುಂತಾದ ಪವಿತ್ರ ಗ್ರಂಥಗಳನ್ನು ಪಠಿಸಿಯಾದ ಮೇಲೆ ಎಲ್ಲರೂ ಬಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಆಗ ಒಬ್ಬರು, ‘‘ಗಂಧದ ತುಂಡುಗಳ ಮೇಲೆ ಬಾ ಅವರ ಶರೀರವನ್ನಿಡಬೇಕಾಗಿತ್ತು. ಅವರು ಮಾಡಿದ ತ್ಯಾಗಕ್ಕೆ ಇಷ್ಟೂ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲವಲ್ಲಾ’’ ಎಂದು ಕಣ್ಣೀರು ಹಾಕಿದರು.

‘‘ಬಾ ಬಡವನ ಕೈ ಹಿಡಿದ ಪತ್ನಿ. ಬಡವನಾದವನು ತನ್ನ ಹೆಂಡತಿಗಾಗಿ ಗಂಧದ ಮರದ ತುಂಡುಗಳನ್ನು ಎಲ್ಲಿಂದ ತರಬಲ್ಲ? ನೀವು ಕೊಡಲು ಸಿದ್ಧರಾಗಬಹುದು. ಆದರೆ ಅದು ನನಗೆ ಒಪ್ಪಿಗೆಯಿಲ್ಲ’’ ಎಂದರು ಬಾಪೂ.

‘ರಾಮಧುನ್’ ಝೇಂಕರಿಸುತ್ತಿದ್ದಂತೆ ಬಾ ಅವರ ಶರೀರವನ್ನು ಹೊರತರಲಾಯಿತು. ಅದಕ್ಕೆ ಮೊದಲು ಹೆಗಲು ಕೊಟ್ಟವರು ಬಾಪೂ. ನುಡಿಯುತ್ತಿದ್ದ ರಾಮಧುನ್ ನಿಂತಮೇಲೆ ಪುರೋಹಿತರು ಧಾರ್ಮಿಕ ಕ್ರಿಯೆ ನಡೆಸಿದರು. ಶವವನ್ನು ಎತ್ತಿ ಅಗ್ನಿಗೆ ಸಮರ್ಪಿಸಲು ಇಟ್ಟಾಗ ಬಾಪೂ ಹನಿಗಣ್ಣಾದರು. ಅದೊಂದು ಹೃದಯವಿದ್ರಾವಕ ದೃಶ್ಯ. ‘‘ಬಾ, ತನ್ನ ಸ್ವಾತಂತ್ರ್ಯವನ್ನು ಸಾಧಿಸಿಕೊಂಡಳು. ಮಾಡು ಇಲ್ಲ ಮಡಿ ಹೋರಾಟದಲ್ಲಿ ತನ್ನನ್ನು ಸಮರ್ಪಿಸಿಕೊಂಡಳು’’ ಎಂದು ಗಾಂಧೀಜಿ ಕಂಪಿಸುವ ಧ್ವನಿಯಲ್ಲಿ ನುಡಿದರು. ಕೆಲವು ನಿಮಿಷಗಳಲ್ಲಿ ಚಿತೆ ಹತ್ತಿಕೊಂಡು ಉರಿಯತೊಡಗಿತು. ಆಗ ಗಾಂಧೀಜಿ ಹುಣಸೆ ಮರದ ಕೆಳಗೆ ಕುರ್ಚಿಯ ಮೇಲೆ ಕುಳಿತಿದ್ದರು. ಉಂಡೆ ಉಂಡೆಯಾಗಿ ಉಗುಳುತ್ತಿದ್ದ ಜ್ವಾಲೆಯತ್ತ ಅವರ ದೃಷ್ಟಿ ಹೊರಳಿತ್ತು. ಅಲ್ಲಿಗೆ ಬಂದ ಕೆಲವರು ವಿಶ್ರಾಂತಿಗಾಗಿ ತೆರಳುವಂತೆ ಗಾಂಧೀಜಿಗೆ ಆಗ್ರಹಿಸಿದರು. ಆಗ, ‘‘ಇನ್ನೇನು ಕೆಲಸ? ವಿಶ್ರಾಂತಿ ಮಾಡುವುದು ಇದ್ದೇ ಇದೆಯಲ್ಲಾ. ಆದರೆ ಚಿತೆ ಉರಿಯುತ್ತಿದ್ದಂತೆ ನಾನು ಇಲ್ಲಿಂದ ಹೊರಟು ಹೋದರೆ ಬಾ ನನ್ನನ್ನು ಕ್ಷಮಿಸಲಾರಳು. ಇಂತಹ ಸಂದರ್ಭದಲ್ಲಿ ನಾನು ನನ್ನ ದೀರ್ಘ ಕಾಲದ ನೆಚ್ಚಿನ ಸಂಗಾತಿಯನ್ನು ಹೇಗೆ ಬೇರ್ಪಡಿಸಿಕೊಳ್ಳಲಿ?’’ ಎಂದು ಗದ್ಗದಿತರಾಗಿ ನುಡಿದರು.

ಆಮೇಲೆ ಸ್ವಲ್ಪಹೊತ್ತು ಮೌನ. ತಮ್ಮ ಮನೋವ್ಯಥೆಯನ್ನು ಪ್ರಕಟಿಸುತ್ತಾ, ‘‘ಬಾ ಇಲ್ಲದ ಬದುಕನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆಕೆ ನನ್ನಲ್ಲಿ ಬೆರೆತುಹೋಗಿದ್ದಳು. ನನ್ನದೇ ಭಾಗವಾಗಿದ್ದಳು. ಆಕೆಯ ಮರಣದಿಂದ ನನ್ನ ಜೀವನವಿಂದು ಬರಡಾಗಿದೆ. ಅದನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ’’ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸುಮಾರು ನಾಲ್ಕೂವರೆ ಗಂಟೆ ಹೊತ್ತಿಗೆ ಬಾ ಅವರ ದೇಹವನ್ನು ನುಂಗಿದ ಅಗ್ನಿಜ್ವಾಲೆ ಶಾಂತವಾಯಿತು. ಪಂಚಭೂತಗಳಲ್ಲಿ ಬಾ ವಿಲೀನರಾದರು. ಈಗ ಕಣ್ಣಿಗೆ ಕಾಣಿಸುತ್ತಿದ್ದುದು ಬರಿ ಬೂದಿ ಮಾತ್ರ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News