ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ: ನಾಗಪುರದಿಂದ ಸಿಎಂ ದೇವೇಂದ್ರ ಫಡ್ನವೀಸ್ ಸ್ಪರ್ಧೆ

Update: 2019-10-01 16:03 GMT

ಹೊಸದಿಲ್ಲಿ, ಅ. 1: ಮಹಾರಾಷ್ಟ್ರದ 125 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗಪುರ ನೈಋತ್ಯ ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಧಿಸಲಿದ್ದಾರೆ.

ಮಹಾರಾಷ್ಟ್ರ ವಿಧಾನ ಸಭೆಯಲ್ಲಿ 288 ಸ್ಥಾನಗಳಿವೆ. ಈ ತಿಂಗಳು ನಡೆಯುವ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಜೊತೆಯಾಗಿ ಸ್ಪರ್ಧಿಸಲಿವೆ. ಮಹಾರಾಷ್ಟ್ರದ ಬಿಜೆಪಿ ವರಿಷ್ಠ ಚಂದ್ರಕಾಂತ್ ಪಾಟೀಲ್ ಕೋಥ್ರುಡ್‌ನಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಪಟ್ಟಿ 12 ಮಂದಿ ಮಹಿಳಾ ಅಭ್ಯರ್ಥಿಯನ್ನು ಕೂಡ ಒಳಗೊಂಡಿದೆ. ಸತಾರ ವಿಧಾನ ಸಭೆ ಕ್ಷೇತ್ರದಲ್ಲಿ ಉದಯನ್‌ರಾಜೆ ಭೋಸಾಲೆಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ. ಇವರು ಛತ್ರಪತಿ ಶಿವಾಜಿ ವಂಶಸ್ಥರು. ಉಪ ಚುನಾವಣೆಯಲ್ಲಿ ಸತಾರ ಕ್ಷೇತ್ರದಲ್ಲಿ ಎನ್‌ಸಿಪಿಯಿಂದ ಸ್ಪರ್ಧಿಸಿದ್ದ ಉದಯನ್‌ರಾಜೆ ಭೋಸಾಲೆ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ಅನಂತರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಜೊತೆಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹಾಗೂ ಶಿವಸೇನೆ ಸೋಮವಾರ ಘೋಷಿಸಿತ್ತು. ಆದರೆ, ತಮ್ಮ ಸ್ಥಾನ ಹಂಚಿಕೆಯನ್ನು ಬಹಿರಂಗಪಡಿಸಿರಲಿಲ್ಲ. ಬಿಜೆಪಿ 145ಕ್ಕೂ ಅಧಿಕ ಹಾಗೂ ಶಿವಸೇನೆ 125 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಉಳಿದ ಸ್ಥಾನಗಳಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸಹಿತ ಮಿತ್ರ ಪಕ್ಷಗಳು ಸ್ಪರ್ಧಿಸಲಿವೆ.

ಬಿಜೆಪಿಯ ರಾಜ್ಯ ವರಿಷ್ಠ ಚಂದ್ರಕಾಂತ್ ಪಾಟಿಲ್ ಹಾಗೂ ಶಿವಸೇನೆಯ ಹಿರಿಯ ನಾಯಕ ಸುಭಾಷ್ ದೇಸಾಯಿ ಸಹಿ ಹಾಕಿದ ಈ ಪತ್ರಿಕಾ ಹೇಳಿಕೆಯನ್ನು ಎರಡೂ ಪಕ್ಷಗಳು ಜಂಟಿಯಾಗಿ ಬಿಡುಗಡೆ ಮಾಡಿವೆ. ಬಿಜೆಪಿ, ಶಿವಸೇನೆ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಮಾದೇವ್ ಝಂಕರ್ ನೇತೃತ್ವದ ರಾಷ್ಟ್ರೀಯ ಸಮಾಜ್ ಪಕ್ಷ ಹಾಗೂ ವಿನಾಯಕ ಮಿಟೆ ನೇತೃತ್ವದ ಶಿವ ಸಂಗ್ರಾಮ್ ಪಕ್ಷಗಳು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಸ್ಥಾನ ಹಂಚಿಕೆ ವಿವರಗಳನ್ನು ಅನಂತರ ಘೋಷಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News