‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಗಾಂಧಿಗೆ ಪ್ರಧಾನಿ ನಮನ

Update: 2019-10-02 19:09 GMT

ಹೊಸದಿಲ್ಲಿ, ಅ. 2: ಮಹಾತ್ಮಾ ಗಾಂಧಿ ಪರಿಕಲ್ಪಿತ ಭಾರತೀಯ ರಾಷ್ಟ್ರೀಯವಾದ ಎಂದಿಗೂ ಸಂಕುಚಿತ ಹಾಗೂ ಹೊರಗಿಡುವ ನಿಲುವನ್ನು ಹೊಂದಿರಲಿಲ್ಲ. ಅದು ಮಾನವತೆಗೆ ಸೇವೆ ಸಲ್ಲಿಸುವ ದೃಷ್ಟಿಕೋನ ಹೊಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬರೆದ ಲೇಖನದಲ್ಲಿ ಅಭಿಪ್ರಾಯಿಸಿದ್ದಾರೆ.

ಅಲ್ಬರ್ಟ್ ಐನ್‌ಸ್ಟೈನ್ ಅವರನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ ಅವರ ಚಿಂತನೆಗಳನ್ನು ಮುಂದಿನ ತಲೆಮಾರು ನೆನಪಿಸಿಕೊಳ್ಳಲು ‘ಐನ್‌ಸ್ಟೈನ್ ಚಾಲೆಂಜ್’ ಅನ್ನು ಶಿಫಾರಸು ಮಾಡಿದರು.

ಗಾಂಧೀಜಿ ಅವರಿಗೆ ಗೌರವ ಸಲ್ಲಿಸುವ ದಿಶೆಯಲ್ಲಿ ನಾನು ‘ಐನ್‌ಸ್ಟೈನ್ ಚಾಲೆಂಜ್ ಎಂದು ಏನು ಹೇಳಿದ್ದೇನೋ ಅದನ್ನು ಶಿಫಾರಸು ಮಾಡುತ್ತೇನೇ. ಸಂಶೋಧನೆ ಮೂಲಕ ಗಾಂಧೀಜಿ ಚಿಂತನೆಗಳನ್ನು ಹರಡಲು ಮುಂದೆ ಬರುವಂತೆ ನಾನು ಚಿಂತಕರು, ಉದ್ಯಮಿಗಳು ಹಾಗೂ ತಂತ್ರಜ್ಞಾನಿಗಳನ್ನು ಆಹ್ವಾನಿಸುತ್ತೇನೆ’ ಎಂದು ‘‘ವೈ ಇಂಡಿಯಾ ಆ್ಯಂಡ್ ದಿ ವರ್ಲ್ಡ್ ನೀಡ್ ಗಾಂಧಿ’’ ಎಂಬ 931 ಪದಗಳ ಲೇಖನದಲ್ಲಿ ಪ್ರಧಾನಿ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಅವರ ದಂಡಿ ಮಾರ್ಚ್ ಅನ್ನು ಉಲ್ಲೇಖಿಸಿದ ಪ್ರಧಾನಿ, ‘‘ಒಂದು ಚಿಟಿಕೆ ಉಪ್ಪಿನ ಮೂಲಕ ಸಾಮೂಹಿಕ ಚಳವಳಿಯನ್ನು ಸೃಷ್ಟಿಸಲು ಯಾರಿಗೆ ಸಾಧ್ಯ ?’’ ಎಂದು ಅವರು ಬರೆದಿದ್ದಾರೆ.

ಮಾನವ ಸಮಾಜದಲ್ಲಿರುವ ಕೆಲವು ವಿರೋಧಾಬಾಸಗಳ ನಡುವೆ ಸೇತುವೆ ನಿರ್ಮಿಸುವ ಅನನ್ಯ ಸಾಮರ್ಥ್ಯ ಗಾಂಧೀಜಿ ಅವರಿಗೆ ಇತ್ತು ಎಂದು ಪ್ರಧಾನಿ ಅವರು ಲೇಖನದಲ್ಲಿ ಹೇಳಿದ್ದಾರೆ.

ಪ್ರತಿ ಸಮಸ್ಯೆಗೂ ಗಾಂಧಿ ಅವರಲ್ಲಿ ಪರಿಹಾರ ಇತ್ತು. ಗಾಂಧಿ ಅವರಲ್ಲಿ ನಾವು ಅತ್ಯುತ್ತಮ ಶಿಕ್ಷಕರನ್ನು ಕಾಣಬಹುದು ಎಂದು ಅವರು ಹೇಳಿದರು. ಈ ಗಾಂಧಿ ಜಯಂತಿಯಂದು ಸರಕಾರದ ಅತಿ ದೊಡ್ಡ ಸ್ವಚ್ಛತಾ ಕ್ರಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.

‘‘ಐನ್‌ಸ್ಟೈನ್ ಚಾಲೆಂಜ್’’

ಗಾಂಧೀಜಿ ಅವರ ಬಗ್ಗೆ ಖ್ಯಾತ ವಿಜ್ಞಾನಿ ಐಲ್ಬರ್ಟ್ ಐನ್‌ಸ್ಟೈನ್, ‘‘ಈ ಭೂಮಿಯಲ್ಲಿ ರಕ್ತ ಹಾಗೂ ಮಾಂಸದ ಇಂತಹ ಒಬ್ಬರು ವ್ಯಕ್ತಿ ಜೀವಿಸಿದ್ದರು ಎಂದು ಮುಂದಿನ ತಲೆಮಾರು ಊಹಿಸಲು ಕೂಡ ಸಾಧ್ಯವಿಲ್ಲ’’ ಎಂದಿದ್ದರು. ಅದನ್ನು ಹುಸಿಯಾಗಿಸಲು ಸಂಶೋಧನೆ ಮೂಲಕ ಗಾಂಧೀಜಿ ಚಿಂತನೆಗಳನ್ನು ಹರಡಲು ಮುಂದೆ ಬರುವಂತೆ ನಾನು ಚಿಂತಕರು, ಉದ್ಯಮಿಗಳು ಹಾಗೂ ತಂತ್ರಜ್ಞಾನಿಗಳನ್ನು ಆಹ್ವಾನಿಸುತ್ತೇನೆ.

ನರೇಂದ್ರ ಮೋದಿ, ಪ್ರಧಾನ ಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News