ಇಸ್ತಾಂಬುಲ್‌ನ ಸೌದಿ ಕೌನ್ಸುಲೇಟ್ ಕಚೇರಿ ಹೊರಗೆ ಖಶೋಗಿ ಸ್ಮರಣೆ

Update: 2019-10-03 17:03 GMT

 ಇಸ್ತಾಂಬುಲ್ (ಟರ್ಕಿ), ಅ. 3: ಒಂದು ವರ್ಷದ ಹಿಂದೆ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಾದ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯ ಹೊರಗೆ ಬುಧವಾರ ಮಾನವಹಕ್ಕುಗಳ ಕಾರ್ಯಕರ್ತರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಅಮೆಝಾನ್ ಆನ್‌ಲೈನ್ ಅಂಗಡಿಯ ಸ್ಥಾಪಕ ಹಾಗೂ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಮಾಲೀಕ ಜೆಫ್ ಬೆಝೋಸ್ ಉಪಸ್ಥಿತರಿದ್ದರು.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದ ಜಮಾಲ್ ದೇಶದಿಂದ ಪಲಾಯನಗೈದು ಅಮೆರಿಕದಲ್ಲಿ ವಾಸಿಸುತ್ತಿದ್ದರು ಹಾಗೂ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದರು.

ತನ್ನ ಟರ್ಕಿಯ ಗೆಳತಿ ಹಾತಿಸ್ ಸೆಂಗಿಝ್‌ರನ್ನು ಮದುವೆಯಾಗುವುದಕ್ಕಾಗಿ ಪ್ರಮಾಣಪತ್ರಗಳನ್ನು ತರಲು ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್‌ನ್ನು ಕಳೆದ ವರ್ಷ ಅಕ್ಟೋಬರ್ 2ರಂದು ಪ್ರವೇಶಿಸಿದ್ದ ಅವರನ್ನು ಮತ್ತೆ ಯಾರೂ ನೋಡಿಲ್ಲ. ತನ್ನ ಅಧಿಕಾರಿಗಳು ಅವರನ್ನು ಕೌನ್ಸುಲೇಟ್‌ನಲ್ಲಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ತಿಂಗಳ ಬಳಿಕ ಸೌದಿ ಅರೇಬಿಯ ಒಪ್ಪಿಕೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸೆಂಗಿಝ್, ‘‘ಈಗಲಾದರೂ ನನಗೆ ನ್ಯಾಯ ಬೇಕು. ಅವರ ದೇಹ ಏನಾಗಿದೆ ಎನ್ನುವುದು ನನಗೆ ಗೊತ್ತಾಗಬೇಕು. ಅವರ ಸ್ನೇಹಿತರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ಅಧಿಕಾರದಲ್ಲಿರುವವರ ಕೃತ್ಯಗಳಿಗಾಗಿ ಅವರನ್ನು ಜವಾಬ್ದಾರಿಯಾಗಿಸಬೇಕು’’ ಎಂದು ಹೇಳಿದರು.

ಖಶೋಗಿ ಹತ್ಯೆಯ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಆ್ಯಂಡ್ರೂ ಗಾರ್ಡ್‌ನರ್ ಕರೆ ನೀಡಿದರು ಹಾಗೂ ರಿಯಾದ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ‘ನಾಟಕವು ನ್ಯಾಯದ ಅಣಕವಾಗಿದೆ’ ಎಂದರು.

ಮುಚ್ಚಿನ ಬಾಗಿಲ ಒಳಗೆ 11 ಆರೋಪಿಗಳ ವಿಚಾರಣೆ

ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ ರಿಯಾದ್‌ನಲ್ಲಿ 11 ಆರೋಪಿಗಳ ವಿಚಾರಣೆಯನ್ನು ಸೌದಿ ಅರೇಬಿಯ ನಡೆಸುತ್ತಿದೆ. ಈ ಪೈಕಿ ಐವರು ಮರಣ ದಂಡನೆಯನ್ನು ಎದುರಿಸುತ್ತಿದ್ದಾರೆ.

ಆದರೆ, ವಿಚಾರಣೆಯು ಮುಚ್ಚಿದ ಬಾಗಿಲ ಒಳಗೆ ನಡೆಯುತ್ತಿದೆ ಹಾಗೂ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.

ನೀವು ಒಂಟಿಯಲ್ಲ: ಸೆಂಗಿಝ್‌ಗೆ ಬೆಝೋಸ್ ಭರವಸೆ

ಈ ಸಂದರ್ಭದಲ್ಲಿ ಜಮಾಲ್ ಖಶೋಗಿಯ ಗೆಳತಿ ಹಾತಿಝ್ ಸೆಂಗಿಝ್‌ರನ್ನು ಉದ್ದೇಶಿಸಿ ಜೆಫ್ ಬೆಝೋಸ್ ಕಿರು ಭಾಷಣ ಮಾಡಿದರು.

‘‘ನೀವು ನಮ್ಮ ಹೃದಯಗಳಲ್ಲಿ ಇದ್ದೀರಿ ಎಂದು ನಾನು ಹೇಳಬಯಸುತ್ತೇನೆ. ನಾವು ಇಲ್ಲಿ ನಿಮ್ಮೊಂದಿಗಿದ್ದೇವೆ. ನೀವು ಒಂಟಿಯಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News