ಕಾಯಕಜೀವಿಗಳ ಸಂಘಟನೆ

Update: 2019-10-03 18:35 GMT

ಬಸವಣ್ಣನವರು ಜನಿಸಿದ್ದು ಅಗ್ರಹಾರಗಳ ಅಗ್ರಹಾರವಾಗಿದ್ದ ಬಾಗೇವಾಡಿಯ ಪುರವರಾಧೀಶ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ. ಉನ್ನತಕುಲ ಎಂದು ಕರೆಯಿಸಿಕೊಳ್ಳುವ ಬ್ರಾಹ್ಮಣ ಕುಲದಲ್ಲಿ, ಧಾರ್ಮಿಕ ಅಧಿಕಾರ, ವೇದಾಗಮಗಳ ಜ್ಞಾನ ಮತ್ತು ಸಂಪತ್ತು ತುಂಬಿದ್ದ ಮನೆತನದಲ್ಲಿ! ಆದರೆ ಬಸವಣ್ಣನವರಿಗೆ ಇದಾವುದರ ಪರಿವೆ ಇರಲಿಲ್ಲ. ಶೂದ್ರರ ಮತ್ತು ಪಂಚಮರ ಸಾಮಾಜಿಕ ನ್ಯಾಯದ ಪ್ರಶ್ನೆ ಮಾತ್ರ ಅವರನ್ನು ಬಾಧಿಸುತ್ತಿತ್ತು. ಅದಕ್ಕೆ ಅವರು ಉತ್ತರ ಕಂಡುಕೊಳ್ಳಲೇ ಬೇಕಾಗಿತ್ತು. ಅದಕ್ಕಾಗಿ ಅವರು ಬ್ರಾಹ್ಮಣ್ಯವನ್ನು, ಸಂಪತ್ತನ್ನು ಮತ್ತು ನಂತರ ಕಲ್ಯಾಣದ ಪ್ರಧಾನಿ ಪದವಿಯನ್ನೂ ಬಿಟ್ಟುಕೊಡಬೇಕಾಯಿತು.

ಶೋಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ, ಶೂದ್ರರು ಮತ್ತು ಪಂಚಮರು ಎಂದೆಂದಿಗೂ ಆರ್ಥಿಕವಾಗಿ ದುರ್ಬಲರಾಗಿಯೇ ಉಳಿಯುವಂತಹ ಸ್ಥಿತಿಯನ್ನು ನಿರ್ಮಿಸಿದ ವರ್ಣವ್ಯವಸ್ಥೆಯನ್ನು ಗಟ್ಟಿ ಮಾಡಿದ ಮನುಸ್ಮತಿಯ ಕೌರ್ಯದ ವಿರುದ್ಧ ಹೋರಾಡುತ್ತ, ದಯಾಸಂಸ್ಕೃತಿಯನ್ನು ಸಾಮಾಜೀಕರಣಗೊಳಿಸಿ ಬದುಕಿನ ಎಲ್ಲ ಸ್ತರಗಳಲ್ಲಿನ ಶೋಷಣೆಯನ್ನು ನಿರ್ನಾಮಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು.

ಬಸವಣ್ಣನವರು ಅಗ್ರಹಾರದಲ್ಲಿ ಬ್ರಾಹ್ಮಣ ಬಾಲಕನಾಗಿ ವೈದಿಕರ ತರತಮಭಾವವನ್ನು ಅರಿತುಕೊಂಡರು. ವಿಶ್ವಮಾನವರಾಗಿ ಸಮಾಜದ ಮೇಲಿನ ಆ ತರತಮಭಾವ ದುಷ್ಪರಿಣಾಮವನ್ನು ಕಂಡುಕೊಂಡರು. ಈ ಹಿನ್ನಲೆಯಲ್ಲಿ ಜಗತ್ತಿನಲ್ಲಿ ಕಾಯಕಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು. ಅಲ್ಲಿಯ ವರೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕಾಯಕಜೀವಿಗಳ ಸಂಘಟನೆಯಾಗಿರಲಿಲ್ಲ. ‘‘ಜಗತ್ತಿನ ಇತಿಹಾಸವು ವರ್ಗಹೋರಾಟಗಳ ಇತಿಹಾಸವೇ ಆಗಿದೆ’’ ಎಂದು 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದರು. ಕಾಯಕಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತ ಬಂದಿದ್ದಾರೆ ಎಂಬುದನ್ನು 12ನೇ ಶತಮಾನದಲ್ಲೇ ಕಂಡುಕೊಂಡ ಬಸವಣ್ಣನವರು, ಯಾವ ಆರ್ಥಿಕ ಶಕ್ತಿಯೂ ಇಲ್ಲದ ಕಾಯಕಜೀವಿಗಳ ಆತ್ಮಸ್ಥೈರ್ಯದ ಮೇಲೆ ಹೊಸ ಸಮಾನತೆಯ ಸಿದ್ಧಾಂತವನ್ನು ರೂಪಿಸಿದರು. ಅಲ್ಲಿಯವರೆಗೆ ಭಾರತೀಯ ಸಮಾಜೋಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಈ ಕಾಯಕಜೀವಿಗಳಿಗೆ ಯಾವುದೇ ಸ್ಥಾನವಿರಲಿಲ್ಲ. ಆದರೆ ಕಾಯಕಜೀವಿಗಳಿಂದ ಮಾತ್ರ ಈ ಜಗತ್ತನ್ನು ಬದಲಿಸಲು ಸಾಧ್ಯವೆಂಬ ಸತ್ಯವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟವರಲ್ಲಿ ಬಸವಣ್ಣನವರು ಮೊದಲಿಗರಾಗಿದ್ದಾರೆ.

ಸಾಮಾಜಿಕ ಮನೋವಿಜ್ಞಾನಿ ಡಾ. ಬಿ. ಕೃಷ್ಣಮೂರ್ತಿ ಅವರು ಹೇಳುವಂತೆ ‘‘ಸಮಯವಿಲ್ಲ ನನಗೆ ನನ್ನ ಅರಿಯಲು. ಸದಾ ಸ್ವತಂತ್ರ ನಾ ದಣಿಗಳಿಗಾಗಿ ದುಡಿಯಲು’’ ಎಂಬುದು ಬಡವರ ಜೀವನ ವಿಧಾನವಾಗಿತ್ತು. ಆದರೆ ಆಂತರ್ಯದಲ್ಲಿ ಸಂಘರ್ಷದ ಕಿಡಿ ಸಿಡಿಯುತ್ತಲೇ ಇತ್ತು. ನಿರಂತರ ಶೋಷಣೆಯ ವಿರುದ್ಧ ಕಾಯಕಜೀವಿಗಳು ಒಂದಾಗುವುದು ಐತಿಹಾಸಿಕ ಅನಿವಾರ್ಯವಾಗಿತ್ತೆಂಬುದು ಮಹಾನುಭಾವಿ ಬಸವಣ್ಣನವರಿಗೆ ಅರಿವಾಗದೆ ಇರಲಿಲ್ಲ. ಬಸವಣ್ಣನವರು ಈ ಅರಿವನ್ನು ಪಡೆದ ಬಗೆ ಅನುಪಮವಾಗಿದೆ.

‘‘ಇನ್ನು ಜಂಗಮವೇ ಲಿಂಗವೆಂದು ನಂಬಿದೆ’’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಜಂಗಮ ಎಂಬ ಸಕಲಜೀವಾತ್ಮರಿಂದ ಕೂಡಿದ ಲೋಕದ ಹಿತಸಾಧನೆಯೆ ಅವರಿಗೆ ಪೂಜೆಯಾಯಿತು. ಸಕಲಜೀವರು ಈ ಆನಂದ ಮಯವಾಗಿ ಬದುಕುವಂತೆ ಈ ಜಗತ್ತನ್ನು ಕಾಯಕಜೀವಿಗಳ ಶಕ್ತಿಯಿಂದ ವ್ಯವಸ್ಥಿತಗೊಳಿಸುವುದೇ ಬಸವಣ್ಣನವರ ಬಹುದೊಡ್ದ ಕನಸಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News