ಪಕ್ಷದ ಆದೇಶ ಧಿಕ್ಕರಿಸಿದ್ದ ಕಾಂಗ್ರೆಸ್ ಶಾಸಕಿಗೆ ವೈ+ ಭದ್ರತೆ !

Update: 2019-10-04 04:21 GMT

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ 36 ಗಂಟೆಗಳ ವಿಶೇಷ ಅಧಿವೇಶನದಿಂದ ಹೊರಗುಳಿಯುವಂತೆ ಪಕ್ಷ ನೀಡಿದ್ದ ಆದೇಶವನ್ನು ಧಿಕ್ಕರಿಸಿ, ಅಧಿವೇಶನದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಆದಿತ್ಯನಾಥ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದ ರಾಯಬರೇಲಿ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರಿಗೆ ರಾಜ್ಯ ಸರ್ಕಾರ ಗುರುವಾರ ವೈ-ಪ್ಲಸ್ ಭದ್ರತೆ ನೀಡಿದೆ.

ಮೇ 14ರಂದು ತಮ್ಮ ವಾಹನದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅದಿತಿ ಸಿಂಗ್, ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಸೂಕ್ತ ಭದ್ರತೆ ಕೋರಿದ್ದರು.

ಜಿಲ್ಲಾ ಪಂಚಾಯತ್ ನಲ್ಲಿ ಬಹುಮತ ಸಾಬೀತುಪಡಿಸುವ ಸಲುವಾಗಿ ಜಿಲ್ಲಾ ಪಂಚಾಯತ್ ಸದಸ್ಯರ ಜತೆ ತೆರಳುತ್ತಿದ್ದಾಗ ಹಾಲಿ ಅಧ್ಯಕ್ಷ ಅವಧೇಶ್ ಸಿಂಗ್ ಅವರು ವಾಹನದ ಮೇಲೆ ದಾಳಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಘಟನೆಯಲ್ಲಿ ಅದಿತಿ ಪ್ರಯಾಣಿಸುತ್ತಿದ್ದ ವಾಹನ ಮಗುಚಿ ಬಿದ್ದು, ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ರಾಯಬರೇಲಿ ಠಾಣೆಯಲ್ಲಿ ಆಗಸ್ಟ್‌ನಲ್ಲಿ ಅವರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅವದೇಶ್ ಸಿಂಗ್ ಅವರ ಸಹಚರರನ್ನು ಬಂಧಿಸಲಾಗಿತ್ತು.

ಇದೀಗ ಅದಿತಿಯವರಿಗೆ ವೈ-ಪ್ಲಸ್ ಭದ್ರತೆ ಒದಗಿಸಲಾಗಿದೆ ಎಂದು ರಾಯಬರೇಲಿ ಎಸ್ಪಿ ಸ್ವಪ್ನಿಲ್ ಮಾಂಗೈನ್ ಹೇಳಿದ್ದಾರೆ. "ಇದುವರೆಗೆ ಅವರಿಗೆ ಭದ್ರತೆ ಒದಗಿಸಲು ಮೂವರು ಗನ್‌ಮನ್‌ಗಳಿದ್ದರು. ಇದೀಗ ಭದ್ರತಾ ವರ್ಗ ಮೇಲ್ದರ್ಜೆಗೇರಿಸಿದ ಬಳಿಕ 10 ಮಂದಿ ಸಶಸ್ತ್ರ ರಕ್ಷಕರು ಅವರ ಭದ್ರತೆಗೆ ಇರುತ್ತಾರೆ. ವೈ ಪ್ಲಸ್ ಭದ್ರತೆಯಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳು, ನಾಲ್ವರು ಸಿಬ್ಬಂದಿ ಇರುವ ಒಂದು ಬೆಂಗಾವಲು ವಾಹನ ಇರುತ್ತದೆ. ಜತೆಗೆ ಅವರ ಮನೆಗೆ ನಾಲ್ವರು ಭದ್ರತಾ ಸಿಬ್ಬಂದಿ ಇರುತ್ತಾರೆ" ಎಂದು ವಿವರಿಸಿದ್ದಾರೆ.

ಅದಿತಿ ಗುರುವಾರ ಲಕ್ನೋದಿಂದ ರಾಯಬರೇಲಿಗೆ ಹೋಗುವ ಅವಧಿಯಲ್ಲೇ ವೈ-ಪ್ಲಸ್ ಭದ್ರತೆ ಒದಗಿಸಲಾಗಿದೆ. ಈ ಮಧ್ಯೆ 36 ಗಂಟೆಗಳ ವಿಧಾನಮಂಡಲ ಅಧಿವೇಶವನ್ನು ಬಹಿಷ್ಕರಿಸಿದ ವಿರೋಧ ಪಕ್ಷಗಳ ಮೇಲೆ ವಿಧಾನ ಪರಿಷತ್‌ನಲ್ಲಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News