ಹಾಕಿ: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2019-10-04 04:42 GMT

ಆಂಟ್ವರ್ಪ್, ಅ.3: ಭಾರತದ ಪುರುಷರ ಹಾಕಿ ತಂಡ ಗುರುವಾರ ಆಕ್ರಮಣಕಾರಿ ಪ್ರದರ್ಶನ ನೀಡುವುದರೊಂದಿಗೆ ಹಾಲಿ ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 5-1 ಅಂತರದಿಂದ ಸೋಲಿಸಿತು.

ಈ ಗೆಲುವಿನ ಮೂಲಕ ಬೆಲ್ಜಿಯಂ ಪ್ರವಾಸದಲ್ಲಿ ಭಾರತ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ವಿಶ್ವದ ನಂ.5ನೇ ತಂಡ ಭಾರತ ಈ ತನಕ ಆಡಿರುವ ಎಲ್ಲ 5 ಪಂದ್ಯಗಳನ್ನು ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಬೆಲ್ಜಿಯಂನ್ನು 2-1 ಅಂತರದಿಂದ ಮಣಿಸಿದ ಭಾರತ ಮುಂದಿನ ಎರಡು ಪಂದ್ಯಗಳಲ್ಲಿ ಸ್ಪೇನ್ ತಂಡವನ್ನು 6-1 ಹಾಗೂ 5-1 ಅಂತರದಿಂದ ಸೋಲಿಸಿತು. ಉಳಿದೆರಡು ಪಂದ್ಯಗಳನ್ನು 2-1 ಹಾಗೂ 5-1 ಅಂತರದಿಂದ ಜಯಿಸಿ ಬೆಲ್ಜಿಯಂ ಪ್ರವಾಸ ಕೊನೆಗೊಳಿಸಿದೆ.

ಗುರುವಾರ ನಡೆದ 5ನೇ ಪಂದ್ಯದಲ್ಲಿ ಸಿಮ್ರಾಜೀತ್ ಸಿಂಗ್(7ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ(35ನೇ ನಿ.),ವಿವೇಕ್ ಸಾಗರ್ ಪ್ರಸಾದ್(36ನೇ ನಿ.), ಹರ್ಮನ್‌ಪ್ರೀತ್ ಸಿಂಗ್(42ನೇ ನಿ.) ಹಾಗೂ ರಮಣ್‌ದೀಪ್ ಸಿಂಗ್(43ನೇ ನಿ.)ತಲಾ ಒಂದು ಗೋಲು ಗಳಿಸಿ ಭಾರತಕ್ಕೆ ಭರ್ಜರಿ ಜಯ ತಂದರು. ಬೆಲ್ಜಿಯಂ 9ನೇ ನಿಮಿಷದಲ್ಲಿ ತಿರುಗೇಟು ನೀಡಲು ಯತ್ನಿಸಿತು. ಗೋಲ್‌ಕೀಪರ್ ಕೃಷ್ಣ ಪಾಠಕ್ ಇದಕ್ಕೆ ಅವಕಾಶ ನೀಡಲಿಲ್ಲ. 16ನೇ ನಿಮಿಷದಲ್ಲಿ ಬೆಲ್ಜಿಯಂ ಸತತ 2 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಪಾಠಕ್ ಬೆಲ್ಜಿಯಂಗೆ ಮುನ್ನಡೆ ನಿರಾಕರಿಸಿದರು. 39ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಬೆಲ್ಜಿಯಂ ಪರ ಏಕೈಕ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News