ಕಾಶ್ಮೀರ: ಭಾರತದ ಕ್ರಮ ವಿರೋಧಿಸಿದ ಅಮೆರಿಕ ಸೆನೆಟ್ ಸಮಿತಿ

Update: 2019-10-05 03:58 GMT

ವಾಷಿಂಗ್ಟನ್, ಅ.5: ಜಮ್ಮು-ಕಾಶ್ಮೀರ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ಕ್ರಮವನ್ನು ಇದೇ ಮೊದಲ ಬಾರಿಗೆ ಅಮೆರಿಕದ ವಿದೇಶಿ ಸಂಬಂಧಗಳ ಸೆನೆಟ್ ಸಮಿತಿ ವಿರೋಧಿಸಿದೆ.

ವಾರ್ಷಿಕ ವಿದೇಶಿ ವಿನಿಯೋಗಗಳ ಕಾಯ್ದೆಗೆ ಮುನ್ನ ಸಲ್ಲಿಸಿದ ವರದಿಯಲ್ಲಿ ಕಾಶ್ಮೀರದ "ಮಾನವೀಯ ಸಂಘರ್ಷ" ಅಂತ್ಯಗೊಳಿಸುವಂತೆ ಕರೆ ನೀಡಿದ್ದು, ಇದು ಅಮೆರಿಕದ ಜನಪ್ರತಿನಿಧಿಗಳು ಭಾರತದ ವಿರುದ್ಧ ಶಾಸನಾತ್ಮಕ ಕ್ರಮ ಕೈಗೊಳ್ಳುವ ಮೊದಲ ಹೆಜ್ಜೆ ಎನಿಸಿದೆ.

ಕಳೆದ ವಾರ ಅಮೆರಿಕ ಕಾಂಗ್ರೆಸ್ ನಿಯೋಗದ ಸದಸ್ಯರಾಗಿ ಹೊಸದಿಲ್ಲಿಗೆ ಭೇಟಿ ನೀಡಿ ಕಾಶ್ಮೀರ ಪರಿಸ್ಥಿತಿ ಹಾಗೂ ಅಮೆರಿಕ- ಭಾರತ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ಒಪ್ಪಂದ ಮತ್ತು ರಕ್ಷಣಾ ಖರೀದಿ ವಿಚಾರಗಳ ಬಗ್ಗೆ ಪ್ರಮುಖ ಅಧಿಕಾರಿಗಳ ಜತೆ ಚರ್ಚಿಸಿದ್ದ ಅಮೆರಿಕ ಸೆನೆಟ್ ಸದಸ್ಯ ಕ್ರಿಸ್ ವಾನ್ ಹೊಲೆನ್ ಈ ತಿದ್ದುಪಡಿ ಪ್ರಸ್ತಾವಿಸಿದ್ದಾರೆ.

ಹಿರಿಯ ಸೆನೆಟರ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಆತ್ಮೀಯವಾಗಿ ಗುರುತಿಸಿಕೊಂಡಿರುವ ರಿಪಬ್ಲಿಕನ್ ನಾಯಕಿ ಲಿಂಡ್ಸೆ ಗ್ರಹಾಂ ಸೆನೆಟ್‌ಗೆ ಸಲ್ಲಿಸಿರುವ ಈ ವರದಿಯ ಪ್ರಕಾರ, "ಕಾಶ್ಮೀರದಲ್ಲಿ ಸದ್ಯ ಉದ್ಭವಿಸಿರುವ ಮಾನವೀಯ ಸಂಘರ್ಷ ಆತಂಕದ ವಿಚಾರವಾಗಿದ್ದು, ಭಾರತ ಸರ್ಕಾರ ತಕ್ಷಣವೇ ದೂರ ಸಂಪರ್ಕ ಹಾಗೂ ಇಂಟರ್‌ನೆಟ್ ಸೇವೆಯನ್ನು ಪುನಾರಂಭಗೊಳಿಸಬೇಕು ಎಂದು ಕರೆ ನೀಡುತ್ತಿದ್ದೇವೆ. ಬಂದ್ ಹಾಗೂ ಕರ್ಫ್ಯೂ ಸಡಿಸಬೇಕು; ಭಾರತ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಸರ್ಕಾರದ ನಿರ್ಧಾರದ ಬಳಿಕ ಬಂಧಿಸಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಬೇಕು" ಎಂದು ಆಗ್ರಹಿಸಲಾಗಿದೆ.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಟ್ರಂಪ್ ಹಾಗೂ ನರೇಂದ್ರ ಮೋದಿ ಜತೆಯಾಗಿ ಭಾಗವಹಿಸಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ನಿಕಟವಾಗಿದೆ ಎಂದು ಘೋಷಿಸಿದ ಬೆನ್ನಲ್ಲೇ ಈ ವರದಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.

ಕಾಶ್ಮೀರ ಸ್ಥಿತಿಗತಿ ಬಗ್ಗೆ ವರದಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಾನವಹಕ್ಕು ಸ್ಥಿತಿಯನ್ನು ನಾವು ನಿಕಟವಾಗಿ ಪರಿಶೀಲಿಸುತ್ತಿದ್ದು, ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News