ರೋಹಿತ್ ಶತಕ, ದ. ಆಫ್ರಿಕಾ ಗೆಲುವಿಗೆ 395 ರನ್ ಗುರಿ

Update: 2019-10-05 17:59 GMT

ವಿಶಾಖಪಟ್ಟಣ, ಅ.5: ಟೆಸ್ಟ್ ಆರಂಭಿಕನಾಗಿ ಆಡಿದ ಚೊಚ್ಚಲ ಪಂದ್ಯದಲ್ಲಿ ಸತತ ಎರಡನೇ ಶತಕ ಸಿಡಿಸಿದ ರೋಹಿತ್ ಶರ್ಮಾ ಸಾಹಸದಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಗೆಲುವಿಗೆ 395 ರನ್ ಸವಾಲು ವಿಧಿಸಿದೆ.

ಆತಿಥೇಯರು ನಾಲ್ಕನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್‌ನ್ನು 4 ವಿಕೆಟ್ ನಷ್ಟಕ್ಕೆ 323 ರನ್‌ಗೆ ಡಿಕ್ಲೇರ್ ಮಾಡಿದರು. ಮೊದಲ ಇನಿಂಗ್ಸ್ ನಲ್ಲಿ 71 ರನ್ ಮುನ್ನಡೆ ಪಡೆದಿದ್ದ ವಿರಾಟ್ ಕೊಹ್ಲಿ ಬಳಗ ಪ್ಲೆಸಿಸ್ ಪಡೆಗೆ ಕಠಿಣ ಗುರಿ ನಿಗದಿಪಡಿಸಿತು.

ದಕ್ಷಿಣ ಆಫ್ರಿಕಾ 4 ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದ್ದು, ಏಡೆನ್ ಮರ್ಕರಮ್(3)ಹಾಗೂ ಥೆನಿಸ್ ಡಿ ಬ್ರೂನ್(5)ಕ್ರೀಸ್ ಕಾಯ್ದುಕೊಂಡಿದ್ದಾರೆ. ಐದನೇ ಹಾಗೂ ಕೊನೆಯ ದಿನವಾದ ರವಿವಾರ ದಕ್ಷಿಣ ಆಫ್ರಿಕಾ ಉಳಿದ 9 ವಿಕೆಟ್‌ಗಳ ನೆರವಿನಿಂದ ಇನ್ನೂ 384 ರನ್ ಗಳಿಸಬೇಕಾಗಿದೆ.

ದಕ್ಷಿಣ ಆಫ್ರಿಕಾದ 2ನೇ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಮೊದಲ ಇನಿಂಗ್ಸ್‌ನ ಶತಕವೀರ ಡಿಯನ್ ಎಲ್ಗರ್(2)ವಿಕೆಟ್ ಉರುಳಿಸಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಆರಂಭಿಕ ಆಘಾತ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 160 ರನ್ ಗಳಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಎಲ್ಗರ್ ವಿರುದ್ಧ ಆನ್‌ಫೀಲ್ಡ್ ಅಂಪೈರ್ ಮೊದಲಿಗೆ ನಾಟೌಟ್ ತೀರ್ಪು ನೀಡಿದ್ದರು. ಟಿವಿ ಪರಾಮರ್ಶೆಯ ಬಳಿಕ ಅಂಪೈರ್ ತನ್ನ ತೀರ್ಪನ್ನು ಬದಲಿಸಿದರು.

ಮರ್ಕರಮ್ ಹಾಗೂ ಬ್ರೂನ್ ಉಳಿದ ಓವರ್‌ಗಳಲ್ಲಿ ಸ್ಪಿನ್ನರ್‌ಗಳಾದ ಅಶ್ವಿನ್ ಹಾಗೂ ಜಡೇಜ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು.ಮಂದ ಬೆಳಕಿನಿಂದಾಗಿ 4ನೇ ದಿನದಾಟ ಬೇಗನೆ ಕೊನೆಗೊಂಡಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್(7) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 215 ರನ್ ಗಳಿಸಿದ್ದ ಅಗರ್ವಾಲ್ ಭೋಜನ ವಿರಾಮಕ್ಕೆ ಮೊದಲು ಕೇಶವ ಮಹಾರಾಜ್‌ಗೆ ಔಟಾದರು.

ಆಗ ರೋಹಿತ್ ಜೊತೆ ಕೈಜೋಡಿಸಿದ ಚೇತೇಶ್ವರ ಪೂಜಾರ 2ನೇ ವಿಕೆಟ್ ಜೊತೆಯಾಟದಲ್ಲಿ 169 ರನ್ ಸೇರಿಸಿದರು. ಪೂಜಾರ 21ನೇ ಅರ್ಧಶತಕ(81, 148 ಎಸೆತ, 13 ಬೌಂಡರಿ, 2 ಸಿಕ್ಸರ್)ಗಳಿಸಿ ಫಿಲ್ಯಾಂಡರ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ರೋಹಿತ್ 50 ರನ್ ಗಳಿಸಿದ್ದಾಗ ಡೇನ್ ಪೀಡ್ತ್ ಬೌಲಿಂಗ್‌ನಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಔಟ್ ಆಗುವುದರಿಂದ ಪಾರಾದರು. ಫೀಲ್ಡರ್ ಮುತ್ತುಸ್ವಾಮಿ ಕ್ಯಾಚ್ ಪಡೆದಿದ್ದರೂ ಅವರ ಕಾಲು ಬೌಂಡರಿ ಗೆರೆಗೆ ಸ್ಪರ್ಶಿಸಿರುವುದು ರಿಪ್ಲೇಯಲ್ಲಿ ಗೋಚರಿಸಿತು. ರೋಹಿತ್(127, 149 ಎಸೆತ, 10 ಬೌಂಡರಿ, 7 ಸಿಕ್ಸರ್)ದೊಡ್ಡ ಹೊಡೆತಕ್ಕೆ ಮುಂದಾಗಿ ಕೊನೆಗೂ ಕೇಶವ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ರವೀಂದ್ರ ಜಡೇಜ ವೇಗದ ಬೌಲರ್ ಕಾಗಿಸೊ ರಬಾಡಗೆ ಕ್ಲೀನ್‌ಬೌಲ್ಡಾಗುವ ಮೊದಲು 32 ಎಸೆತಗಳಲ್ಲಿ 3 ಸಿಕ್ಸರ್‌ಗಳಿರುವ 40 ರನ್ ಗಳಿಸಿದರು.

► ದಕ್ಷಿಣ ಆಫ್ರಿಕಾ 431 ರನ್‌ಗೆ ಆಲೌಟ್, ಭಾರತಕ್ಕೆ 71 ರನ್ ಮುನ್ನಡೆ :

ಇದಕ್ಕೂ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 385 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣಆಫ್ರಿಕಾ ತಂಡ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸ್ಪಿನ್ ಮೋಡಿಗೆ ಸಿಲುಕಿ 431 ರನ್ ಗಳಿಸಿ ಆಲೌಟಾಯಿತು. ಭಾರತಕ್ಕೆ 71 ರನ್ ಮುನ್ನಡೆ ಬಿಟ್ಟುಕೊಟ್ಟಿತು. 3ನೇ ದಿನದಾಟದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ತಮಿಳುನಾಡು ಸ್ಪಿನ್ನರ್ ಆರ್.ಅಶ್ವಿನ್ ಇಂದು ಇನ್ನೂ 2 ವಿಕೆಟ್ ಪಡೆದು 46.2 ಓವರ್‌ಗಳಲ್ಲಿ 145 ರನ್‌ಗೆ ಏಳು ವಿಕೆಟ್‌ಗಳನ್ನು ಕಬಳಿಸಿದರು. ನಾಲ್ಕನೇ ದಿನವಾದ ಶನಿವಾರ ದಕ್ಷಿಣ ಆಫ್ರಿಕಾದ ಪರ ಭಾರತ ಮೂಲದ ಕ್ರಿಕೆಟಿಗ ಮುತ್ತಸ್ವಾಮಿ(ಔಟಾಗದೆ 33, 106 ಎಸೆತ, 4 ಬೌಂಡರಿ)ಒಂದಷ್ಟು ಪ್ರತಿರೋಧ ತೋರಿದರು. ಕಾಗಿಸೊ ರಬಾಡ 15 ಹಾಗೂ ಕೇಶವ ಮಹಾರಾಜ್ 9 ರನ್ ಗಳಿಸಿದರು. ಕೇಶವ್ ಹಾಗೂ ರಬಾಡ ವಿಕೆಟನ್ನು ಉರುಳಿಸಿದ ಆರ್.ಅಶ್ವಿನ್ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ ಗೆ ತೆರೆ ಎಳೆದರು. ಭಾರತ 71 ರನ್ ಮುನ್ನಡೆ ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News