ಆದಾಯ, ಉದ್ಯೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಆತಂಕ: ಆರ್‌ಬಿಐ ಸಮೀಕ್ಷೆಯಲ್ಲಿ ಬಯಲು

Update: 2019-10-06 14:32 GMT

ಹೊಸದಿಲ್ಲಿ, ಅ.6: ದೇಶದ ಆರ್ಥಿಕತೆ ಬಗ್ಗೆ ಜನರ ವಿಶ್ವಾಸ ಮತ್ತು ಆರ್ಥಿಕ ನಿಧಾನಗತಿಯಿಂದ ದೇಶದ ಉತ್ಪಾದನಾ ವಲಯದ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆ ಗ್ರಾಹಕರ ಮೂಡಿರುವ ಆತಂಕ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ನೂತನ ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ.

ಆರ್‌ಬಿಐ ನಡೆಸಿರುವ ಮೂರು ಸಮೀಕ್ಷೆಗಳ ಒಟ್ಟು ವರದಿ, ಭಾರತೀಯ ಆರ್ಥಿಕತೆಯ ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುವ ಎರಡು ಬಹುಮುಖ್ಯ ಅಂಶಗಳಾದ ಹೂಡಿಕೆ ಮತ್ತು ಬಳಕೆ ಕಳೆದ ಕೆಲವು ತಿಂಗಳಲ್ಲಿ ಯಾವ ರೀತಿ ಕುಸಿತಗೊಂಡಿದೆ ಎನ್ನುವುದರತ್ತ ಬೆಟ್ಟು ಮಾಡುತ್ತದೆ. ಈ ಸಮೀಕ್ಷೆ, ಪ್ರಸಕ್ತ ಪರಿಸ್ಥಿತಿ ಸೂಚಿ (ಸಿಎಸ್‌ಐ) ಮತ್ತು ಭವಿಷ್ಯದ ನಿರೀಕ್ಷೆಯ ಸೂಚಿ (ಎಫ್‌ಇಐ) ಎಂಬ ಎರಡು ಸೂಚಿಗಳನ್ನು ತಯಾರಿಸಿದೆ. ಈ ಸೂಚಿಗಳು, ಪ್ರಸಕ್ತ ಮತ್ತು ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ, ಆದಾಯ,ವೆಚ್ಚ,ಉದ್ಯೋಗ ಮತ್ತು ದರಗಳ ಮಟ್ಟದ ಬಗ್ಗೆ ಗ್ರಾಹಕರು ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದನ್ನು ದಾಖಲಿಸುತ್ತವೆ.

ಗ್ರಾಹಕರ ವಿಶ್ವಾಸ ಸಮೀಕ್ಷೆಯಲ್ಲಿ ಆರ್‌ಬಿಐ 13 ನಗರಗಳ 5,200 ಕುಟುಂಬಗಳನ್ನು ಸಮೀಕ್ಷೆಗೆ ಬಳಸಿಕೊಂಡಿದೆ. ಈ ಸಮೀಕ್ಷೆಯಲ್ಲಿ, ಮೇ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಆದಾಯ, ಉದ್ಯೋಗ ಮತ್ತು ಹೆಚ್ಚುವರಿ ವೆಚ್ಚದ ಬಗ್ಗೆ ಗ್ರಾಹಕರ ನಿರೀಕ್ಷೆಯಲ್ಲಿ ತೀವ್ರ ಕುಸಿತವಾಗಿರುವುದು ಸಾಬೀತಾಗಿದೆ. ಮೇ 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ 108ರಷ್ಟಿದ್ದ ಸಿಎಸ್‌ಐ 2019 ಜುಲೈಯಲ್ಲಿ 95.7 ದಾಖಲಾಗಿದ್ದರೆ ಸೆಪ್ಟಂಬರ್‌ನಲ್ಲಿ 89.4ಕ್ಕೆ ಕುಸಿದಿದೆ. ಆರ್‌ಬಿಐ ನಡೆಸಿದ ಎರಡನೇ ಸಮೀಕ್ಷೆ ಇಂಡಸ್ಟ್ರಿಯಲ್ ಔಟ್‌ಲುಕ್ ಸರ್ವೇಯಲ್ಲಿ 450 ಉತ್ಪಾದನಾ ಕಂಪೆನಿಗಳನ್ನು ಸಂಪರ್ಕಿಸಿ ಜುಲೈ-ಸೆಪ್ಟಂಬರ್ ಅವಧಿಯ ತ್ರೈಮಾಸಿಕ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಉದ್ಯಮ ವಾತಾವರಣದ ಬಗ್ಗೆ ಈ ಕಂಪೆನಿಗಳ ಅಭಿಪ್ರಾಯವನ್ನು ಕೇಳಲಾಗಿತ್ತು.

ಈ ಸಮೀಕ್ಷೆಯ ಪ್ರಕಾರ, 2019-20ರ ಎರಡನೇ ತ್ರೈಮಾಸಿಕದಲ್ಲಿ ಉದ್ಯಮ ಮೌಲ್ಯಮಾಪನ ಸೂಚಿ (ಬಿಎಐ) 92.5 ದಾಖಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸೂಚಿ 108.5 ದಾಖಲಾಗಿತ್ತು. ಬೇಡಿಕೆ ಒಳಹರಿವಿನಲ್ಲಿ ಕುಸಿತ ಮತ್ತು ಲಾಭದ ಮಿತಿಯಲ್ಲಿ ನಿರಾಶಾವಾದವೂ ಹೆಚ್ಚಾಗಿರುವುದು ಈ ಸಮೀಕ್ಷೆಯಿಂದ ಬಯಲಾಗಿದೆ. ಮೂರನೇ ಸಮೀಕ್ಷೆಯು, ಎಪ್ರಿಲ್-ಜೂನ್ 2019 ತ್ರೈಮಾಸಿಕದಲ್ಲಿ, ಬೇಡಿಕೆ ಪಟ್ಟಿ, ದಾಸ್ತಾನು ಮತ್ತು ಸಾಮರ್ಥ್ಯ ಬಳಕೆಯ ಮೇಲೆ ಬೆಳಕು ಚೆಲ್ಲಿದ್ದು ಇದಕ್ಕಾಗಿ 800 ಉತ್ಪಾದನಾ ಕಂಪೆನಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಸಮೀಕ್ಷೆಯಲ್ಲಿ ದೇಶದ ಉತ್ಪಾದನಾ ವಲಯದ ವಿವಿಧ ಭಾಗಗಳಲ್ಲಿರುವ ಬೇಡಿಕೆಯ ಸ್ಥಿತಿಯನ್ನು ತಿಳಿಯಲಾಗುತ್ತದೆ. ಸಮೀಕ್ಷೆಯಲ್ಲಿ ತಿಳಿದುಬಂದ ಅಂಶವೆಂದರೆ ಬಹುತೇಕ ಎಲ್ಲ ವರ್ಗಗಳಲ್ಲೂ ಕುಸಿತ ಉಂಟಾಗಿದೆ. 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.76.1 ಇದ್ದ ಸಾಮರ್ಥ್ಯ ಬಳಕೆ 2020ರ ಮೊದಲ ತ್ರೈಮಾಸಿಕದಲ್ಲಿ ಶೇ.73.6 ದಾಖಲಾಗಿದೆ. ಬೇಡಿಕೆ ಪಟ್ಟಿಯಲ್ಲಿ ಸತತ ಮೂರನೇ ತ್ರೈಮಾಸಿಕದಲ್ಲೂ ಕುಸಿತ ಕಂಡಿದ್ದು ಮಾರಾಟಕ್ಕೆ ಹೋಲಿಸಿದರೆ ಕಚ್ಚಾವಸ್ತು ದಾಸ್ತಾನು ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News