ಖಿನ್ನತೆಗೆ ಗುರಿಯಾಗುವ ಅಪಾಯದ ಸಂಕೇತಗಳು

Update: 2019-10-06 15:53 GMT

ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಅವರು ತಮ್ಮೊಳಗಿನ ಅಂತ್ಯವಿಲ್ಲದ ನೋವಿನಿಂದ ಬಿಡುಗಡೆಗೊಳ್ಳಲು ಬಯಸುತ್ತಿರುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಅಧ್ಯಯನವೊಂದರಂತೆ ಪ್ರತಿ ಐವರು ಭಾರತೀಯರಲ್ಲಿ ಓರ್ವ ತಮ್ಮ ಜೀವಮಾನದಲ್ಲಿ ಖಿನ್ನತೆಗೆ ಗುರಿಯಾಗಿರುತ್ತಾರೆ. ಅಸಂತೋಷ ಮತ್ತು ಖಿನ್ನತೆ ಎರಡೂ ಬೇರೆಬೇರೆಯಾಗಿವೆ. ಅಸಂತೋಷ ಕ್ರಮೇಣ ಮರೆಯಾಗುವ ಭಾವನೆಯಾಗಿದ್ದರೆ ಖಿನ್ನತೆಯು ರೋಗವಾಗಿದೆ. ಇದು ಸಾಮಾಜಿಕ ಅಥವಾ ವೈಯಕ್ತಿಕ ಒತ್ತಡಗಳಂತಹ ಬಾಹ್ಯ ಕಾರಣಗಳು ಉಂಟು ಮಾಡುವ ಮನಸ್ಸಿನ ಅಸ್ಥಿರ ಸ್ಥಿತಿಯಾಗಿದ್ದು,ಈ ಒತ್ತಡಗಳನ್ನು ನಿಭಾಯಿಸುವಲ್ಲಿ ಅಸಾಮರ್ಥ್ಯದಿಂದಾಗಿ ಇನ್ನಷ್ಟು ಹದಗೆಡುತ್ತದೆ.

 ಖಿನ್ನತೆಗೆ ಗುರಿಯಾಗಿರುವ ವ್ಯಕ್ತಿಗೆ ಮಾನಸಿಕ ಅಸ್ವಸ್ಥತೆಯೊಂದಿಗೆ ಗುರುತಿಸಿಕೊಂಡಿರುವ ಸಾಮಾಜಿಕ ಕಳಂಕವನ್ನು ದೂರವಿರಿಸುವ ಸೂಕ್ತ ಚಿಕಿತ್ಸೆಯು ಅಗತ್ಯವಾಗುತ್ತದೆ. ಮಾನಸಿಕ ಅಸ್ವಸ್ಥತೆಯ ಕುರಿತು ದೃಷ್ಟಿಕೋನದಲ್ಲಿ ಬದಲಾವಣೆಯು ಮುಖ್ಯವಾಗಿದೆ. ಅದು ಇತರ ರೋಗಗಳಂತೆಯೇ ಒಂದು ಕಾಯಿಲೆಯಾಗಿದ್ದು ಔಷಧಿಗಳು,ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ಅದನ್ನು ಗುಣಪಡಿಸುವ ಅಗತ್ಯವಿದೆ.

 ಖಿನ್ನತೆಯು ಯಾವುದೇ ಗುರುತಿಸಬಲ್ಲ ಲಕ್ಷಣಗಳನ್ನು ಹೊಂದಿಲ್ಲ. ಹೀಗಾಗಿ ಜನರು ಖಿನ್ನತೆಯ ಬಗ್ಗೆ ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಖಿನ್ನತೆಗೆ ಗುರಿಯಾಗಿರುವವರ ನೆರವಿಗಾಗಿ ಕೂಗು ಹಲವಾರು ವಿಧಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ.

► ನಿದ್ರೆಯ ಕೊರತೆ

ನಿದ್ರೆಯ ಕೊರತೆ ಖಿನ್ನತೆಯ ಪ್ರಮುಖ ಸಂಕೇತಗಳಲ್ಲೊಂದಾಗಿದೆ. ಅತಿಯಾಗಿ ನಿದ್ರಿಸುವ ಸ್ಥಿತಿಯನ್ನು ಹೈಪರ್‌ಸೋಮ್ನಿಯಾ ಮತ್ತು ಅತಿ ಕಡಿಮೆ ನಿದ್ರೆಯ ಸ್ಥಿತಿಯನ್ನು ಇನ್‌ಸೋಮ್ನಿಯಾ ಎಂದು ಕರೆಯಲಾಗುತ್ತದೆ. ಈ ಲಕ್ಷಣವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ದಣಿವಿನ ಸಾಮಾನ್ಯ ಭಾವನೆಯನ್ನು ಖಿನ್ನತೆ ಎಂದು ತಪ್ಪಾಗಿ ಗ್ರಹಿಸಬಾರದು. ನಿದ್ರೆಯ ಸ್ವರೂಪದಲ್ಲಿ ವ್ಯತ್ಯಯಗಳು ಹೆಚ್ಚಿನ ಸಲ ನಿರಾಸಕ್ತಿ,ಜಡತ್ವ ಮತ್ತು ಪ್ರೇರಣೆಯ ಕೊರತೆಯ ಜೊತೆಗೂಡಿರುತ್ತವೆ. ಇವು ಹಸಿವಿನ ಮೇಲೆ ಗಣನೀಯ ಪರಿಣಾಮಗಳನ್ನುಂಟು ಮಾಡುತ್ತವೆ ಮತ್ತು ಖಿನ್ನತೆಗೊಳಗಾದ ವ್ಯಕ್ತಿಗಳು ಆಹಾರ ಸೇವನೆಯಲ್ಲಿ ಹಿತವನ್ನು ಕಂಡುಕೊಳ್ಳಬಹುದು ಅಥವಾ ಆಹಾರದಲ್ಲಿ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಳ್ಳಬಹುದು.

► ಹವ್ಯಾಸಗಳು ಮತ್ತು ವರ್ತನೆಯಲ್ಲಿ ಬದಲಾವಣೆ

ವ್ಯಕ್ತಿಯ ಹವ್ಯಾಸಗಳು,ಆಸಕ್ತಿಗಳು ಮತ್ತು ವರ್ತನೆಯಲ್ಲಿ ನಾಟಕೀಯ ಬದಲಾವಣೆ ಖಿನ್ನತೆಯ ಇನ್ನೊಂದು ಸಂಕೇತವಾಗಿದೆ.. ವ್ಯಕ್ತಿ ಹಿಂದೆ ತನಗೆ ಸಂತಸ ನೀಡುತ್ತಿದ್ದ ಸಂಗೀತ,ಮಾತುಕತೆ ಅಥವಾ ಚಿತ್ರರಚನೆ ಇತ್ಯಾದಿ ಚಟುವಟಿಕೆಗಳಿಂದ ದೂರವಾಗಬಹುದು. ಈ ಚಟುವಟಿಕೆಗಳನ್ನು ಹಿಂದಿನಂತೆ ಆನಂದಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ಮನಃಸ್ಥಿತಿಯಲ್ಲಿ ತೀವ್ರ ಬದಲಾವಣೆ ಖಿನ್ನತೆಗೀಡಾಗಿರುವ ವ್ಯಕ್ತಿಗೆ ನೆರವಿನ ಅಗತ್ಯವಿದೆ ಎನ್ನುವುದನ್ನು ಸೂಚಿಸುವ ಇನ್ನೊಂದು ಸಂಕೇತವಾಗಿದೆ. ಆತ ಕೆರಳುವಿಕೆ,ಆಕ್ರಮಣಕಾರಿ ಧೋರಣೆಯಿಂದ ಶಾಂತತೆಯವರೆಗೆ ಹಲವಾರು ರೀತಿಯ ವರ್ತನೆಗಳನ್ನು ಪ್ರದರ್ಶಿಸಬಹುದು. ಇಂತಹ ಬದಲಾವಣೆಗಳಿಗೆ ಸಕಾಲಿಕ ಚಿಕಿತ್ಸೆಯ ಅಗತ್ಯವಿದೆ.

► ಏಕಾಗ್ರತೆಯ ಕೊರತೆ

ಏಕಾಗ್ರತೆಯ ಕೊರತೆ ಖಿನ್ನತೆಯ ಇನ್ನೊಂದು ಖಚಿತ ಸಂಕೇತವಾಗಿದೆ. ಯಾವದೇ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಯ ಮನಸ್ಸು ಸಮಾಜದಿಂದ ದೂರವಾಗಿರುತ್ತದೆ,ದೈನಂದಿನ ಚಟುವಟಿಕೆಗಳಿಗೆ ಆತ ವಿಮುಖನಾಗಿರುತ್ತಾನೆ ಮತ್ತು ಸ್ನೇಹಿತರು,ಕುಟುಂಬದವರು ಹಾಗು ಪ್ರೀತಿಪಾತ್ರರಿಂದಲೂ ದೂರವಿರಲು ಆತನ ಮನಸ್ಸು ಬಯಸುತ್ತದೆ. ಅಂತಹ ವ್ಯಕ್ತಿಯ ಚಿಂತನೆಗಳು ಆಗಾಗ್ಗೆ ಸಹಜ ಸ್ಥಿತಿ ಮತ್ತು ಆತ್ಮಹತ್ಯೆ ಯೋಚನೆಯ ನಡುವೆ ಹೊಯ್ದೆಡುತ್ತಿರುತ್ತವೆ. ಆತನ ಮನಸ್ಸನ್ನು ಆವರಿಸಿಕೊಂಡಿರುವ ನಕಾರಾತ್ಮಕತೆಯು ದೈನಂದಿನ ಚಟುವಟಿಕೆಗಳಲ್ಲಿಯೂ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ.

 ಆಹಾರದಲ್ಲಿ ಕೆಲವು ಪೋಷಕಾಂಶಗಳ ಕೊರತೆಯು ಸಹ ಖಿನ್ನತೆ ಅಥವಾ ಮಾನಸಿಕ ಅಸ್ವಸ್ಥತೆಯನ್ನುಂಟು ಮಾಡುತ್ತದೆ. ನಿರ್ದಿಷ್ಟ ವಿಟಾಮಿನ್‌ಗಳು,ಖನಿಜಗಳು,ಅಮಿನೊ ಆಮ್ಲಗಳು ಮತ್ತು ಒಮೆಗಾ-3ಫ್ಯಾಟಿ ಆ್ಯಸಿಡ್‌ಗಳು ಇಂತಹ ಕೆಲವು ಪೋಷಕಾಂಶಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News