ಇರಾಕ್‌ನಿಂದ ಸರಣಿ ಸುಧಾರಣಾ ಕ್ರಮಗಳ ಘೋಷಣೆ

Update: 2019-10-06 17:30 GMT

ಬಾಗ್ದಾದ್, ಅ.6: ನಿರುದ್ಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಶನಿವಾರ ನಡೆದ ಸರಕಾರಿ ವಿರೋಧಿ ರ್ಯಾಲಿಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಮಂದಿ ಮೃತಟ್ಟ ಬಳಿಕ ಎಚ್ಚೆತ್ತು ಕೊಂಡಿರುವ ಇರಾಕ್ ಪ್ರಧಾನಿ ಅದೆಲ್ ಅಬ್ದೆಲ್ ನೇತೃತ್ವದ ಸಂಪುಟವು ತುರ್ತು ಅಧಿವೇಶನವನ್ನು ನಡೆಸಿದ ಬಳಿಕ ರವಿವಾರ ಸರಣಿ ಸುಧಾರಣಾ ಕ್ರಮಗಳನ್ನು ಪ್ರಕಟಿಸಿತು.

ಮಂಗಳವಾರದಿಂದೀಚೆಗೆ ಸಾವಿರಾರು ಇರಾಕಿ ನಾಗರಿಕರು ಬಾಗ್ದಾದ್ ಹಾಗೂ ದಕ್ಷಿಣ ಇರಾಕ್‌ನ ಹಲವೆಡೆ ಸಭೆ ಸೇರಿ, ಭ್ರಷ್ಟಾಚಾರ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ವ್ಯಾಪಕವಾದ ಸರಕಾರಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಪ್ರತಿಭಟನಕಾರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಅಬ್ದುಲ್ ಮಾಹ್ದಿ ಅವರು ಕೇವಲ ಒಂದು ವರ್ಷದ ಹಿಂದೆ ಇರಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ಭ್ರಷ್ಟಾಚಾರ ಹಾಗೂ ನಿರುದ್ಯೋಗವನ್ನು ನಿಯಂತ್ರಿಸುವುದಾಗಿ ಭರವಸೆ ನೀಡಿದ್ದರು.

ಶನಿವಾರ ರಾತ್ರಿಯಿಡೀ ತುರ್ತು ಅಧಿವೇಶನ ನಡೆಸಿದ ಅಬ್ದೆಲ್ ನೇತೃತ್ವದ ಸಂಪುಟವು, ರವಿವಾರ ಮುಂಜಾನೆ ಭೂಹಕ್ಕು ವಿತರಣೆ, ಸೇನಾ ನೇಮಕಾತಿ ಹಾಗೂ ಅರ್ಹ ಫಲಾನುಭವಿಗಳಿಗಾಗಿ ಕಲ್ಯಾಣ ಸ್ಟೈಪೆಂಡ್ ಹೆಚ್ಚಳ ಸೇರಿದಂತೆ 12ಕ್ಕೂ ಅಧಿಕ ಯೋಜಿತ ಸುಧಾರಣಾ ಯೋಜನೆಗಳನ್ನು ಜಾರಿಗೊಳಿಸಿತು.

ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ ಇರಾಕ್‌ನಲ್ಲಿ ಯುವಜನತೆಯ ನಿರುದ್ಯೋಗ ಪ್ರಮಾಣದಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಯುವಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ತಾನು ಬೃಹತ್ ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸುವುದಾಗಿ ಸರಕಾರವು ತಿಳಿಸಿದೆ.

ಇರಾಕ್‌ನ ದಕ್ಷಿಣದ ನಗರವಾದ ಕುಟ್‌ನಲ್ಲಿ ಕಳೆದ ತಿಂಗಳು, ಪೌರಾಡಳಿತದ ಅಧಿಕಾರಿಗಳು ತನ್ನ ಸಂಚಾರಿ ಅಂಗಡಿಯೊಂದನ್ನು ವಶಪಡಿಸಿಕೊಂಡಿದ್ದರಿಂದ ಹತಾಶಗೊಂಡ ಯುವಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. 4 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಇರಾಕ್‌ನಲ್ಲಿ ಸಾರ್ವಜನಿಕರಂಗವು ಈಗಲೂ ದೇಶದ ಅತಿ ದೊಡ್ಡ ಉದ್ಯೋಗದಾತ ವಲಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಗಳಿಂದ ಪದವಿ ಪಡೆದು ಹೊರಬರುತ್ತಿರುವ ಯುವಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News