​ಮೊದಲ ರಫೇಲ್ ಯುದ್ಧ ವಿಮಾನ ಇಂದು ಹಸ್ತಾಂತರ

Update: 2019-10-08 03:34 GMT

ಹೊಸದಿಲ್ಲಿ: ಭಾರತದ ವಾಯುಪಡೆಯ ವೈಮಾನಿಕ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಸಹಕಾರಿಯಾಗುವ ಮೊಟ್ಟಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಅಧಿಕೃತವಾಗಿ ಫ್ರಾನ್ಸ್‌ನಿಂದ ಸ್ವೀಕರಿಸುವರು.

ವಾಯುಪಡೆ ದಿನಾಚರಣೆ ಸಂದರ್ಭದಲ್ಲಿ ಬೋರ್ಡೆಕ್ಸ್ ಸಮೀಪದ ಮೆರಿನ್ಯಾಕ್ ವಾಯುನೆಲೆಯಲ್ಲಿ ಫ್ರಾನ್ಸ್ ತಂಡದಿಂದ ರಕ್ಷಣಾ ಸಚಿವರು ಈ ಯುದ್ಧವಿಮಾನ ಸ್ವೀಕರಿಸುವರು. ಬೋರ್ಡೆಕ್ಸ್‌ನಲ್ಲಿ ಸಚಿವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಅವರ ಜತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುವರು.

ಈ ಅತ್ಯಾಧುನಿಕ ಯುದ್ಧವಿಮಾನ ಸ್ವೀಕರಿಸುವ ಮುನ್ನ ರಕ್ಷಣಾ ಸಚಿವರು ಸಾಂಪ್ರದಾಯಿಕ ಶಸ್ತ್ರಪೂಜೆ ನೆರವೇರಿಸುವರು. ಭಾರತೀಯ ಸಂಪ್ರದಾಯದಲ್ಲಿ ಸಾವಿರಾರು ವರ್ಷಗಳಿಂದ ಶಸ್ತ್ರಪೂಜೆ ಚಾಲ್ತಿಯಲ್ಲಿದ್ದು, ರಜಪೂತ ದೊರೆ ಮಹಾರಾಣಾ ಪ್ರತಾಪ್ ತನ್ನ ವೈರಿಗಳ ವಿರುದ್ಧ ಯುದ್ಧ ಆರಂಭಕ್ಕೆ ಮುನ್ನ ಶಸ್ತ್ರಪೂಜೆ ನೆರವೇರಿಸುತ್ತಿದ್ದ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಇಂದಿಗೂ ದೇಶಾದ್ಯಂತ ಆಯುಧಪೂಜೆ ನಡೆಯುತ್ತಿದೆ.

ಆರ್‌ಬಿ-01 ಸಂಖ್ಯೆಯ ಯುದ್ಧವಿಮಾನವನ್ನು ರಕ್ಷಣಾ ಸಚಿವರು ಪಡೆಯುವರು. ಈ ಸಂಕೇತ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷೆಲ್ ಆರ್‌ಕೆಎಸ್ ಬಡೂರಿಯಾ ಅವರ ಸಂಕ್ಷಿಪ್ತನಾಮವಾಗಿದೆ. ವಾಯುಪಡೆಯ ಹೊಸ ಮುಖ್ಯಸ್ಥರು, 60 ಸಾವಿರ ಕೋಟಿಗೂ ಅಧಿಕ ಮೊತ್ತದ, ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದಕ್ಕೆ ಸಹಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒಪ್ಪಂದದ ಪ್ರಕಾರ ಭಾರತಕ್ಕೆ ಪೂರೈಸಬೇಕಿರುವ 36 ಯುದ್ಧವಿಮಾನಗಳ ಪೈಕಿ ಇದು ಮೊದಲನೆಯದು. ಯುದ್ಧವಿಮಾನದ ಆಕ್ರಮಣ ಸಾಮರ್ಥ್ಯವನ್ನು ಸಚಿವರು ವೀಕ್ಷಿಸಲಿದ್ದಾರೆ. ಯೋಜನೆಯ ಅನ್ವಯ ಫ್ರಾನ್ಸ್ ಪೈಲಟ್ ವಿಮಾನ ಚಲಾಯಿಸಲಿದ್ದು, ಹಿಂಬದಿ ಆಸನದಲ್ಲಿ ರಾಜನಾಥ್ ಸಿಂಗ್ ಆಸೀನರಾಗುವರು.

"ಭಾರತೀಯ ಪೈಲಟ್‌ಗಳು ಇತ್ತೀಚೆಗಷ್ಟೇ ಇದರ ಹಾರಾಟ ತರಬೇತಿ ಪಡೆಯಲು ಆರಂಭಿಸಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಪೈಲಟ್ ವಿಮಾನ ಚಲಾಯಿಸಲಿದ್ದಾರೆ" ಎಂದು ವಾಯುಪಡೆ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News