ಇತರ ಭಾರತೀಯರಿಗಿರುವ ಹಕ್ಕುಗಳನ್ನು ಜಮ್ಮು ಕಾಶ್ಮೀರದ ಜನರಿಗೂ ನೀಡಿ: ಅಮೆರಿಕಾದ ಸದನ ಸಮಿತಿ

Update: 2019-10-08 08:45 GMT

ವಾಷಿಂಗ್ಟನ್, ಅ.8: ಜಮ್ಮು ಕಾಶ್ಮೀರದಲ್ಲಿ ಸಂವಹನ ಮಾಧ್ಯಮ ಸ್ಥಗಿತ ಅಲ್ಲಿನ ಜನರ ದೈನಂದಿನ ಜೀವನದ ಮೇಲೆ  ವಿನಾಶಕಾರಿ ಪರಿಣಾಮ ಬೀರುತ್ತಿದೆ ಎಂದು ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿ ಹೇಳಿದೆ. "ರಾಜ್ಯದಲ್ಲಿನ ನಿರ್ಬಂಧಗಳನ್ನು ತೆರವುಗೊಳಿಸಿ ಅಲ್ಲಿನ ಜನರಿಗೆ ಭಾರತದ ಇತರೆಡೆಗಳ ನಾಗರಿಕರಿಗಿರುವ ಅದೇ ಹಕ್ಕುಗಳು ಹಾಗೂ ಸವಲತ್ತುಗಳನ್ನು ಒದಗಿಸುವ ಸಮಯವಿದು" ಎಂದು ಸಮಿತಿ ಟ್ವೀಟ್ ಮಾಡಿದೆ.

ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಸಮಿತಿ ಮತ್ತೆ ಅಕ್ಟೋಬರ್ 22ರಂದು ಸಭೆ ಸೇರಲಿದೆ.

ಸದನ ಸಮಿತಿಯು 'ದಕ್ಷಿಣ ಏಷ್ಯಾದ ಮಾನವ ಹಕ್ಕುಗಳ' ಕುರಿತಂತೆ ಚರ್ಚಿಸಲು ಅಕ್ಟೋಬರ್ 22ರಂದು ಸಭೆ ಸೇರಲಿದೆ ಎಂದು ಅಮೆರಿಕಾದ ಕಾಂಗ್ರೆಸ್ಸಿಗ ಬ್ರ್ಯಾಡ್ ಶೇರ್ಮನ್ ಹೇಳಿದ್ದರು. ಈ ಸಭೆ ಕಾಶ್ಮೀರ ಕಣಿವೆಯ ಪರಿಸ್ಥಿತಿ ಮೇಲೆ ಗಮನ ಕೇಂದ್ರೀಕರಿಸಲಿದೆ ಹಾಗೂ ಅಲ್ಲಿನ ಜನರು ಅಗತ್ಯ ಆಹಾರ, ವೈದ್ಯಕೀಯ ಸವಲತ್ತುಗಳು ಮತ್ತಿತರ ಅಗತ್ಯ ವಸ್ತುಗಳು ಲಭ್ಯವಾಗುತ್ತಿವೆಯೇ ಎಂದು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

ಅಗಸ್ಟ್ ನಲ್ಲಿ ಅವರು ಕಾಶ್ಮೀರ ಮೂಲದ ಅಮೆರಿಕನ್ ನಾಗರಿಕರನ್ನು ಸ್ಯಾನ್ ಫೆರ್ನಾಂಡೋ ವ್ಯಾಲಿಯಲ್ಲಿ ಭೇಟಿಯಾಗಿದ್ದರು ಹಾಗೂ ತಮ್ಮ ಪ್ರೀತಿಪಾತ್ರರು ರಾಜ್ಯದಲ್ಲಿ ಹೇಗಿದ್ದಾರೆಂದು ಈ ಜನರು ಕಳವಳ ವ್ಯಕ್ತಪಡಿಸಿದ್ದರೆಂದು ಹೇಳಿದ್ದರು. ಅಂದಿನಿಂದ ಅವರು ಕಾಶ್ಮೀರಿ ಅಮೆರಿಕನ್ನರ ಜತೆ ಹಲವು ಸಭೆಗಳನ್ನು ನಡೆಸಿದ್ದಾರೆ.

ಅಕ್ಟೋಬರ್ 22ರ ಸಭೆ ಅಸ್ಸಾಂನ ಮುಸ್ಲಿಮರು, ಶ್ರೀಲಂಕಾದ ತಮಿಳರ ಪರಿಸ್ಥಿತಿ ಹಾಗೂ ಪಾಕಿಸ್ತಾನದಲ್ಲಿನ ಮಾನವ ಹಕ್ಕು ಪರಿಸ್ಥಿತಿಯನ್ನು ಅವಲೋಕಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News