ಪಾನ್ ಸಿಂಗ್ ತೋಮರ್ ಆಗುವ ಬೆದರಿಕೆಯೊಡ್ಡಿದ ಸಿಆರ್‌ಪಿಎಫ್ ಯೋಧ

Update: 2019-10-09 01:38 GMT

ರಾಯ್ಪುರ,ಅ.8: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ತನ್ನ ಜಮೀನಿನ ವಿವಾದದ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಸಿಆರ್‌ಪಿಎಫ್ ಯೋಧ ಪ್ರಮೋದ್ ಕುಮಾರ್, ಸೈನಿಕನಾಗಿದ್ದು ನಂತರ ಬಂಡುಕೋರನಾದ ಪಾನ್ ಸಿಂಗ್ ತೋಮರ್‌ನ ಹಾದಿಯನ್ನು ಹಿಡಿಯುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಕುರಿತು ವೀಡಿಯೊ ಮೂಲಕ ಘೋಷಿಸಿರುವ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ 74ನೆ ಬಟಾಲಿಯನ್‌ನ ಪೇದೆ ಪ್ರಮೋದ್ ಕುಮಾರ್ ಸದ್ಯ ಚತ್ತೀಸ್‌ಗಡದಲ್ಲಿ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದಾರೆ. ತನ್ನ ಹುಟ್ಟೂರಿನಲ್ಲಿರುವ ಜಮೀನನ್ನು ತನ್ನ ಚಿಕ್ಕಪ್ಪನವರು ಸ್ವಾಧೀನಪಡಿಸಿಕೊಂಡಿದ್ದು ತನ್ನ ಕುಟುಂಬಸ್ಥರನ್ನು ಹತ್ಯೆಗೈಯುವ ಬೆದರಿಕೆಯೊಡ್ಡಿದ್ದಾರೆ ಎಂದು ಕುಮಾರ್ ವೀಡಿಯೊದಲ್ಲಿ ತಿಳಿಸಿದ್ದಾರೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ಸೋಮವಾರ ಚತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಗೆಲ್ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸುಕ್ಮಾ ಜಿಲ್ಲಾ ಆಯುಕ್ತರಿಗೆ ಸೂಚಿಸಿದ್ದಾರೆ. “ನನ್ನ ಮೂವರು ಚಿಕ್ಕಪ್ಪನವರು ನನಗೆ ಸೇರಿದ ಕೃಷಿಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನ ಪತ್ನಿ ಮತ್ತು ಸಹೋದರ ದೂರು ನೀಡಿದರೂ ಯಾವುದೇ ಫಲ ನೀಡಲಿಲ್ಲ. ಈ ಬಗ್ಗೆ ಮೂರು ಬಾರಿ ದೂರು ದಾಖಲಿಸಿದರೂ ಅವರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಮೋದ್ ಕುಮಾರ್ ತನ್ನ 3.39 ನಿಮಿಷಗಳ ವೀಡಿಯೊದಲ್ಲಿ ಆರೋಪಿಸಿದ್ದಾರೆ. ನಾನು ದೇಶ ಕಾಯುವ ಸೈನಿಕ, ಯಾವುದೇ ತಪ್ಪು ಹೆಜ್ಜೆಯನ್ನಿಡಲು ನಾನು ಬಯಸುವುದಿಲ್ಲ. ಆದರೆ ನನ್ನ ದೇಶಕ್ಕಾಗಿ ನಾನು ಜೀವ ಕೊಡಲೂ ಸಿದ್ಧವಿರುವಾಗ ನನ್ನ ಸಹೋದರರಿಗೆ ಪಾನ್ ಸಿಂಗ್ ತೋಮರ್ ಆಗಲೂ ಸಿದ್ಧನಿದ್ದೇನೆ” ಎಂದು ಹೇಳುವ ಸಿಆರ್‌ಪಿಎಫ್ ಯೋಧ ಜೈಹಿಂದ್ ಹೇಳುವ ಮೂಲಕ ತನ್ನ ವೀಡಿಯೊ ಮುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News