ಜೈಪುರದ ಹೋಟೆಲ್‌ನಲ್ಲಿ ಅಂತರ್ ಧರ್ಮೀಯ ಜೋಡಿಗೆ ಕೋಣೆ ನಿರಾಕರಣೆ

Update: 2019-10-08 16:14 GMT

ಹೊಸದಿಲ್ಲಿ,ಅ.8: ಓಯೊ ಆ್ಯಪ್ ಮೂಲಕ ರೂಮ್ ಬುಕ್ ಮಾಡಿದ್ದ ಅಂತರ್ ಧರ್ಮೀಯ ಜೋಡಿಗೆ ಜೈಪುರದ ಹೋಟೆಲ್‌ವೊಂದು ತಂಗಲು ಅವಕಾಶವನ್ನು ನಿರಾಕರಿಸಿದ ಘಟನೆ ಕಳೆದ ವಾರ ನಡೆದಿದೆ.

ಈ ಹೋಟೆಲ್ ಸೇರಿದಂತೆ ಸರಣಿ ಹೋಟೆಲ್‌ಗಳನ್ನು ನಿರ್ವಹಿಸುತ್ತಿರುವ ಓಯೋ ಈ ಬಗ್ಗೆ ತನಿಖೆಯನ್ನು ಆರಂಭಿಸಿದೆ. ಅಂತರ್ ಧರ್ಮೀಯ ಜೋಡಿಗಳಿಗೆ ರೂಮ್ ನೀಡದಂತೆ ಪೊಲೀಸರು ತಮಗೆ ನಿರ್ದೇಶ ನೀಡಿರುವುದಾಗಿ ಹೋಟೆಲ್ ಸಿಬ್ಬಂದಿ ಜೋಡಿಗೆ ತಿಳಿಸಿದ್ದರೆ,ಇಂತಹ ಯಾವುದೇ ನಿರ್ದೇಶವನ್ನು ತಾವು ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಉದಯಪುರದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ 31ರ ಹರೆಯದ ವ್ಯಕ್ತಿ ಆನ್‌ಲೈನ್‌ನಲ್ಲಿ ರೂಮ್ ಬುಕ್ ಮಾಡಿದ್ದು,ಶನಿವಾರ ಬೆಳಿಗ್ಗೆ ಹೋಟೆಲ್ ತಲುಪಿದ್ದರು. ತನ್ನ ಸ್ನೇಹಿತೆ ನಂತರ ಬರುತ್ತಾರೆ ಎಂದು ಅವರು ರಿಸೆಪ್ಶನಿಸ್ಟ್‌ಗೆ ತಿಳಿಸಿದ್ದರು. ಆದರೆ ಸ್ನೇಹಿತೆ ಮತ್ತೊಂದು ಧರ್ಮದವರು ಎನ್ನುವುದು ಗೊತ್ತಾದಾಗ ಆತ ರೂಮ್ ನೀಡಲು ನಿರಾಕರಿಸಿದ್ದ.

ಬುಕಿಂಗ್ ಆ್ಯಪ್‌ನಲ್ಲಿ ಅಥವಾ ಹೋಟೆಲ್ ವೆಬ್‌ಸೈಟ್‌ನಲ್ಲಿ ವಿಭಿನ್ನ ಧರ್ಮಗಳ ಜೋಡಿಗೆ ರೂಮ್ ನೀಡಲಾಗುವುದಿಲ್ಲ ಎಂಬ ನಿಯಮವನ್ನು ಉಲ್ಲೇಖಿಸಿಲ್ಲ,ಅಲ್ಲದೆ ಇದು ಸಂವಿಧಾನದಲ್ಲಿಯ ಸಮಾನತೆೆಯ ಭರವಸೆಗೂ ವಿರುದ್ಧವಾಗಿದೆ ಎಂದು ಸಹಾಯಕ ಪ್ರೊಫೆಸರ್ ಹೇಳಿದರೂ ಹೋಟೆಲ್ ಸಿಬ್ಬಂದಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

ಬುಕಿಂಗ್ ಆ್ಯಪ್ ಬಳಿಕ ತನ್ನ ಬುಕಿಂಗ್ ಹಣವನ್ನು ವಾಪಸ್ ಮಾಡಲು ಒಪ್ಪಿಕೊಂಡಿತ್ತು ಮತ್ತು ಬೇರೊಂದು ಹೋಟೆಲ್‌ನಲ್ಲಿ ತನಗಾಗಿ ಉಚಿತ ರೂಮ್‌ನ್ನೂ ಬುಕ್ ಮಾಡಿತ್ತು ಎಂದು ಸಹಾಯ ಪ್ರೊಫೆಸರ್ ತಿಳಿಸಿದರು.

ಇದೊಂದು ಆಘಾತಕಾರಿ ಘಟನೆ ಎಂದು ಬಣ್ಣಿಸಿದ ಅವರ ಸ್ನೇಹಿತೆ,‘ ಸಿಖ್ ಮತ್ತು ಹಿಂದು ಜೋಡಿ ಬಂದಿದ್ದರೆ ಹೋಟೆಲ್ ಅವರಿಗೆ ಕೋಣೆ ನೀಡುತ್ತಿತ್ತು, ಆದರೆ ತಮ್ಮದು ಹಿಂದು-ಮುಸ್ಲಿಂ ಜೋಡಿಯಾಗಿದ್ದು ಅವರಿಗೆ ಸಮಸ್ಯೆಯಾಗಿತ್ತು. ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ,ಆದರೆ ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಈ ಪದ್ಧತಿ ಈಗಲೂ ಏಕಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ’ಎಂದರು.

ತಮ್ಮ ಹೋಟೆಲ್‌ನಲ್ಲಿ ವಿಭಿನ್ನ ಧರ್ಮಗಳ ಜೋಡಿಗೆ ಅವಕಾಶವಿಲ್ಲ. ಇದು ಹೋಟೆಲ್‌ನ ನೀತಿಯಾಗಿದೆ ಮತ್ತು ಸ್ಥಳೀಯ ಪೊಲೀಸರ ನಿರ್ದೇಶವೂ ಆಗಿದೆ ಎಂದು ಮ್ಯಾನೇಜರ್ ಗೋವರ್ಧನ ಸಿಂಗ್ ಹೇಳಿದರೆ, ಮೌಖಿಕವಾಗಿ ಅಥವಾ ಲಿಖಿತವಾಗಿ ಇಂತಹ ಯಾವುದೇ ನಿರ್ದೇಶವನ್ನು ಹೊರಡಿಸಲಾಗಿಲ್ಲ. ಅವರು ಪೊಲೀಸರ ಹೆಸರನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಪೊಲೀಸ್ ಆಯುಕ್ತ ಆನಂದ ಶ್ರೀವಾಸ್ತವ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News