ಗಾಂಧಿ ಕುಟುಂಬಕ್ಕೆ ವಿದೇಶ ಪ್ರವಾಸದಲ್ಲೂ ಎಸ್‌ಪಿಜಿ ಭದ್ರತೆ: ಕೇಂದ್ರದ ನೂತನ ನಿಯಮ

Update: 2019-10-08 18:13 GMT

ಹೊಸದಿಲ್ಲಿ, ಅ. 7: ಕಾಂಗ್ರೆಸ್‌ನ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಭದ್ರತೆಗೆ ಕೇಂದ್ರ ಸರಕಾರ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಅನ್ವಯ ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ವಿದೇಶ ಪ್ರವಾಸ ಸೇರಿದಂತೆ ಎಲ್ಲೇ ಪ್ರವಾಸ ಮಾಡಿದರೂ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಎಲ್ಲ ಕಡೆ ಅವರ ಜೊತೆ ಪ್ರಯಾಣಿಸಲಿದೆ. ರಾಹುಲ್ ಗಾಂಧಿ ಈ ರಕ್ಷಣೆ ಸ್ವೀಕರಿಸದೇ ಇದ್ದರೆ, ಅವರ ವಿದೇಶಿ ಭೇಟಿಗೆ ಕೇಂದ್ರ ಸರಕಾರ ಕಡಿವಾಣ ಹಾಕಲು ಮುಂದಾಗಿದೆ ಎಂದು ‘ದಿ ಸಂಡೇ ಗಾರ್ಡಿಯನ್’ ವರದಿ ಮಾಡಿದೆ.

 ಪ್ರಸ್ತುತ ವಿಶೇಷ ಭದ್ರತಾ ಪಡೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಭದ್ರತೆ ನೀಡುತ್ತಿದೆ. ಈ ವರೆಗೆ ಜಾರಿಯಲ್ಲಿದ್ದ ರಕ್ಷಣಾ ಪದ್ಧತಿ ಪ್ರಕಾರ ರಾಹುಲ್ ಗಾಂಧಿ ವಿದೇಶ ಪ್ರವಾಸದ ಸಂದರ್ಭ ಏರ್‌ಪೋರ್ಟ್ ತಲಪುವ ವರೆಗೆ ಮಾತ್ರ ವಿಶೇಷ ಭದ್ರತಾ ಪಡೆ ಸಿಬ್ಬಂದಿ ಅವರಿಗೆ ರಕ್ಷಣೆ ನೀಡುತ್ತಿದ್ದರು. ಉಳಿದಂತೆ ರಾಹುಲ್ ಗಾಂಧಿ ವಿದೇಶದಲ್ಲಿ ಎಲ್ಲೇ ಪ್ರವಾಸ ಮಾಡುವುದಿದ್ದರೂ ತಮ್ಮ ಸ್ವಂತ ಖಾಸಗಿತನಕ್ಕೆ ಆದ್ಯತೆ ನೀಡಿ ಭದ್ರತಾ ಸಿಬ್ಬಂದಿಯನ್ನು ಪಾಪಸ್ ಕಳುಹಿಸುತ್ತಿದ್ದರು. ಆದರೆ, ರಾಹುಲ್ ಗಾಂಧಿ ಅವರು ಇಂತಹ ನಿರ್ಧಾರ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಗಾಂಧಿ ಕುಟುಂಬ ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಮತ್ತು ಈ ಹಿಂದಿನ ಕೆಲವು ಪ್ರವಾಸಗಳ ಮಾಹಿತಿ ನೀಡುವುದನ್ನು ಹೊಸ ಮಾರ್ಗಸೂಚಿ ಕಡ್ಡಾಯಗೊಳಿಸಿದೆ.

ಈ ಮಾರ್ಗಸೂಚಿ ಒಪ್ಪದೇ ಇದ್ದಲ್ಲಿ, ಭದ್ರತೆ ಗಮನದಲ್ಲಿರಿಸಿ ಗಾಂಧಿ ಪರಿವಾರದ ವಿದೇಶ ಪ್ರಯಾಣಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕಬಹುದಾಗಿದೆ ಎಂದು ವರದಿ ತಿಳಿಸಿದೆ.

ವೈಯುಕ್ತಿಕ ಜೀವನ ಗೌರವಿಸುವ ಅಗತ್ಯ ಇದೆ: ಕಾಂಗ್ರೆಸ್

 ಗಾಂಧಿ ಕುಟುಂಬಕ್ಕೆ ನೀಡಿರುವ ವಿಶೇಷ ಭದ್ರತೆ ಬಗ್ಗೆ ನೂತನ ಮಾರ್ಗಸೂಚಿ ಹೊರಡಿಸಿರುವ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಭಾರತ ಒಂದು ಪ್ರಜಾಸತ್ತಾತ್ಮಕ ಸಂಪ್ರದಾಯ ಹೊಂದಿದ್ದು, ವೈಯುಕ್ತಿಕ ಹಾಗೂ ಸಾರ್ವಜನಿಕ ಜೀವನದ ಮಧ್ಯೆ ವ್ಯತ್ಯಾಸ ಹೊಂದಿದೆ. ಅಲ್ಲದೆ, ವೈಯುಕ್ತಿಕ ಸ್ವಾತಂತ್ರವನ್ನು ಎಂದೂ ಗೌರವಿಸಲಾಗುತ್ತದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಪ್ರಣವ್ ಝಾ ತಿಳಿಸಿದ್ದಾರೆ.

ಈ ವಿಷಯದಲ್ಲಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿರುವವರು ಅಥವಾ ಕೆಲವು ನಾಯಕರ ಖಾಸಗಿ ಭೇಟಿಗಳನ್ನು ಸಾರ್ವಜನಿಕಗೊಳಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜನರು ಮೊದಲು ವೈಯುಕ್ತಿಕ ಸ್ವಾತಂತ್ರಕ್ಕೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಝಾ ಹೇಳಿದ್ದಾರೆ.                      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News