ತಿಂಗಳ ಕೊನೆಯ ವೇಳೆಗೆ ವಿಶ್ವಸಂಸ್ಥೆಯ ಹಣ ಖಾಲಿ: ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಎಚ್ಚರಿಕೆ

Update: 2019-10-08 18:26 GMT

ವಾಶಿಂಗ್ಟನ್, ಅ. 8: ವಿಶ್ವಸಂಸ್ಥೆಯು 230 ಮಿಲಿಯ ಡಾಲರ್ (ಸುಮಾರು 1,636 ಕೋಟಿ ರೂಪಾಯಿ) ಕೊರತೆಯನ್ನು ಎದುರಿಸುತ್ತಿದೆ ಹಾಗೂ ಅಕ್ಟೋಬರ್ ಕೊನೆಯ ವೇಳೆಗೆ ಅದು ಹೊಂದಿರುವ ಎಲ್ಲ ಹಣ ಖಾಲಿಯಾಗಲಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೋಮವಾರ ಹೇಳಿದ್ದಾರೆ.

ವೇತನ ಮತ್ತು ಇತರ ಭತ್ತೆಗಳನ್ನು ನೀಡುವುದಕ್ಕಾಗಿ ಅನಿರ್ದಿಷ್ಟ ‘ಹೆಚ್ಚುವರಿ ತಾತ್ಕಾಲಿಕ ಕ್ರಮ’ಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 37,000 ಉದ್ಯೋಗಿಗಳನ್ನು ಉದ್ದೇಶಿಸಿ ಬರೆದ ಪತ್ರವೊಂದರಲ್ಲಿ ಗುಟೆರಸ್ ಹೇಳಿದ್ದಾರೆ.

‘‘ನಮ್ಮ 2019ರ ನಿಯಮಿತ ಬಜೆಟ್ ಚಟುವಟಿಕೆಗಳಿಗೆ ಅಗತ್ಯವಾದ ಒಟ್ಟು ಮೊತ್ತದ ಪೈಕಿ ಕೇವಲ 70 ಶೇಕಡವನ್ನು ಸದಸ್ಯ ದೇಶಗಳು ನೀಡಿವೆ. ಇದರಿಂದಾಗಿ ಸೆಪ್ಟಂಬರ್ ಕೊನೆಯ ವೇಳೆಗೆ 230 ಮಿಲಿಯ ಡಾಲರ್ ಕೊರತೆ ಉಂಟಾಗಿತ್ತು. ಈ ತಿಂಗಳ ಕೊನೆಯ ವೇಳೆಗೆ ನಮ್ಮ ಮೀಸಲು ನಿಧಿಯೂ ಖಾಲಿಯಾಗುವ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ’’ ಎಂದು ಗುಟೆರಸ್ ಬರೆದಿದ್ದಾರೆ.

ಖರ್ಚು ಕಡಿಮೆ ಮಾಡುವುದಕ್ಕಾಗಿ, ಸಮ್ಮೇಳನಗಳನ್ನು ಮತ್ತು ಸಭೆಗಳನ್ನು ಮುಂದೂಡುವುದು ಹಾಗೂ ಸೇವೆಗಳನ್ನು ಕಡಿತಗೊಳಿಸುವುದು ಮುಂತಾದ ಪ್ರಸ್ತಾಪಗಳನ್ನು ಅವರು ಮುಂದಿಟ್ಟಿದ್ದಾರೆ. ಅಧಿಕೃತ ಪ್ರವಾಸಗಳು ಅತ್ಯಂತ ಅಗತ್ಯವಾದರೆ ಮಾತ್ರ ಪ್ರವಾಸ ಕೈಗೊಳ್ಳಬೇಕು ಹಾಗೂ ಇಂಧನ ಉಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

2018-19ರ ವರ್ಷಕ್ಕೆ ವಿಶ್ವಸಂಸ್ಥೆಯ ಚಟುವಟಿಕೆಗಳಿಗೆ ನಿಗದಿಪಡಿಸಲಾದ ಬಜೆಟ್ ಸುಮಾರು 5.4 ಬಿಲಿಯ ಡಾಲರ್ (38,427 ಕೋಟಿ ರೂಪಾಯಿ). ಈ ಪೈಕಿ 22 ಶೇಕಡ ಮೊತ್ತವನ್ನು ಅಮೆರಿಕ ಒದಗಿಸಿದೆ. ಇದರಲ್ಲಿ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ನೀಡಬೇಕಾದ ಹಣ ಸೇರಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News