ಮೇರಿಕೋಮ್ ಕ್ವಾರ್ಟರ್ ಫೈನಲ್‌ಗೆ, ಸ್ವೀಟಿ ಬೂರಾ ಸವಾಲು ಅಂತ್ಯ

Update: 2019-10-09 01:43 GMT

ಮಾಸ್ಕೊ, ಅ.8: ಆರು ಬಾರಿಯ ಚಾಂಪಿಯನ್ ಎಂ.ಸಿ. ಮೇರಿಕೋಮ್(51ಕೆಜಿ)ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸ್ವೀಟಿ ಬೂರಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 36ರ ಹರೆಯದ ಮೇರಿ ಕೋಮ್ ಥಾಯ್ಲೆಂಡ್‌ನ ಜುಟಾಮಸ್ ಜಿಟ್‌ಪಾಂಗ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ಮೂರನೇ ಶ್ರೇಯಾಂಕದ ಮೇರಿ ಕೋಮ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. 16ರ ಸುತ್ತಿನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಮೊದಲು ಮೊದಲ ಮೂರು ನಿಮಿಷಗಳ ಆಟದಲ್ಲಿ ಎಚ್ಚರಿಕೆಯ ಪ್ರದರ್ಶನ ನೀಡಿದರು.

51 ಕೆಜಿ ವಿಭಾಗದಲ್ಲಿ ಮೊದಲ ವಿಶ್ವ ಪ್ರಶಸ್ತಿಯ ರೇಸ್‌ನಲ್ಲಿರುವ ಮೇರಿ ಕೋಮ್ ಎರಡನೇ ಸುತ್ತಿನಲ್ಲಿ ವೇಗವಾಗಿ ಆಡಿದರು. ತನ್ನ ಪ್ರತಿದಾಳಿಯ ಮೂಲಕ ಎದುರಾಳಿಯ ಬೆವರಿಳಿಸಿದರು.

75 ಕೆಜಿ ವಿಭಾಗದಲ್ಲಿ ಮಾಜಿ ಬೆಳ್ಳಿ ಪದಕ ವಿಜೇತೆ ಬಾಕ್ಸರ್ ಸ್ವೀಟಿ ಬೂರಾ(75ಕೆಜಿ)ಉತ್ತಮ ಹೋರಾಟದ ನೀಡಿದ ಹೊರತಾಗಿಯೂ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ವೆಲ್ಶ್‌ವುಮನ್ ಲಾರೆನ್ ಪ್ರೈಸ್ ವಿರುದ್ಧ 1-3 ಅಂತರದಿಂದ ಸೋಲನುಭವಿಸಿದರು. ಯುರೋಪಿಯನ್ ಗೇಮ್ಸ್ ಚಾಂಪಿಯನ್ ಪ್ರೈಸ್ ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಪ್ರೈಸ್ ಮೂರು ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಹೀಗಾಗಿ ಪ್ರೈಸ್ ವಿರುದ್ಧ ಗೆಲ್ಲುವುದು ಸ್ವೀಟಿಗೆ ಸುಲಭಸಾಧ್ಯವಾಗಿರಲಿಲ್ಲ. ಪಂದ್ಯದುದ್ದಕ್ಕೂ ಪ್ರೈಸ್‌ಗೆ ಸಮಬಲದ ಪಂಚ್ ನೀಡಿದ ಸ್ವೀಟಿ ಅಂತಿಮವಾಗಿ ತೀರ್ಪುಗಾರರು ಪ್ರೈಸ್ ಪರ ತೀರ್ಪು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News