ಬಿಎಸ್ಸೆನ್ನೆಲ್,ಎಂಟಿಎನ್‌ಎಲ್ ಸಂಸ್ಥೆಗಳನ್ನು ಮುಚ್ಚಲು ಮುಂದಾದ ವಿತ್ತ ಸಚಿವಾಲಯ: ವರದಿ

Update: 2019-10-09 07:44 GMT

ಹೊಸದಿ ಅ.8: ಪರಿಸ್ಥಿತಿ ತೀರಾ ಬಿಗಡಾಯಿಸಿರುವ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್‌ಎಲ್‌ ಗಳ ಪುನಃಶ್ಚೇತನಕ್ಕಾಗಿ 74,000 ಕೋ.ರೂ.ಗಳ ಬೃಹತ್ ಪ್ಯಾಕೇಜ್ ಒದಗಿಸುವ ದೂರಸಂಪರ್ಕ ಇಲಾಖೆ (ಡಾಟ್)ಯ ಪ್ರಸ್ತಾವ ತಿರಸ್ಕರಿಸಿದ ಬಳಿಕ ವಿತ್ತ ಸಚಿವಾಲಯವು,ಅವೆರಡೂ ಸಂಸ್ಥೆಗಳನ್ನು ಮುಚ್ಚಿಬಿಡುವಂತೆ ಸಲಹೆ ನೀಡಿದೆ ಎಂದು Financial Express ವರದಿ ಮಾಡಿದೆ.

ಇವೆರಡೂ ಸಾರ್ವಜನಿಕ ಕ್ಷೇತ್ರದ ಘಟಕ (ಪಿಎಸ್‌ಯು)ಗಳನ್ನು ಮುಚ್ಚಿದರೆ ಹೊರೆಯು ಡಾಟ್ ಪ್ರತಿಪಾದಿಸಿರುವಂತೆ 95,000 ಕೋ.ರೂ.ಗಳಷ್ಟು ಇರುವುದಿಲ್ಲ ಎಂದು ಸಚಿವಾಲಯದಲ್ಲಿನ ಮೂಲಗಳು ಹೇಳಿವೆ. 74,000 ಕೋ.ರೂ.ಗಳ ಪ್ಯಾಕೇಜ್‌ ಗಾಗಿ ಓಲೈಸುತ್ತಿದ್ದಾಗ ಡಾಟ್ ಸಂಸ್ಥೆಗಳನ್ನು ಮುಚ್ಚಿದರೆ 95,000 ಕೋ.ರೂ.ಗಳ ಹೊರೆಯನ್ನು ಭರಿಸಬೇಕಾಗುತ್ತದೆ ಎಂದು ಡಾಟ್ ವಾದಿಸಿತ್ತು. ಬಿಎಸ್ಸೆನ್ನೆಲ್ ನ ಎಲ್ಲ 1.65 ಲಕ್ಷ ಉದ್ಯೋಗಿಗಳಿಗೆ ಅಕರ್ಷಕ ಸ್ವಯಂ ನಿವೃತ್ತಿ ಯೋಜನೆಗೆ ಮತ್ತು ಅದರ ಸಾಲ ಮರುಪಾವತಿಗೆ 95,000 ಕೋ.ರೂ.ವೆಚ್ಚವಾಗುತ್ತದೆ ಎಂದು ಅದು ಹೇಳಿತ್ತು.

 ಆದರೆ ಇವೆರಡೂ ಪಿಎಸ್‌ಯುಗಳ ಎಲ್ಲ ಸಿಬ್ಬಂದಿಗೆ ವಿಆರ್‌ಎಸ್ ನೀಡಬೇಕಿಲ್ಲ. ಐಟಿಎಸ್ ಅಧಿಕಾರಿಗಳನ್ನು ಸರಕಾರದ ಇತರ ಇಲಾಖೆಗಳಿಗೆ ನಿಯೋಜಿಸಬಹುದಾಗಿದೆ. ಇತರ ಇಲಾಖೆಗಳಿಂದ ನೇಮಕಗೊಳಿಸಿಕೊಂಡಿರುವ ಅಧಿಕಾರಿಗಳಿಗೆ ವಿಆರ್‌ಎಸ್ ನೀಡಬೇಕಾಗಬಹುದು. ನೇರವಾಗಿ ನೇಮಕಾತಿಗೊಂಡಿರುವವರು ಅತ್ಯಂತ ಕಿರಿಯ ಸಿಬ್ಬಂದಿಗಳಾಗಿದ್ದು,ಹೆಚ್ಚಿನವರು ತಂತ್ರಜ್ಞರಾಗಿದ್ದಾರೆ. ಇವರ ಸಂಬಳವೂ ಹೆಚ್ಚಿಲ್ಲ ಮತ್ತು ಸಿಬ್ಬಂದಿಯ ಒಟ್ಟು ಸಂಖ್ಯೆಯಲ್ಲಿ ಇವರ ಪಾಲು ಶೇ.10ಕ್ಕೂ ಕಡಿಮೆಯಿದೆ. ಹೀಗಾಗಿ ಎರಡೂ ಸಂಸ್ಥೆಗಳನ್ನು ಮುಚ್ಚಿದರೆ ಹೊರೆ 95,000 ಕೋ.ರೂ.ಗಿಂತ ತುಂಬ ಕಡಿಮೆಯೇ ಆಗುತ್ತದೆ. ಹೀಗಾಗಿ ಈ ಆಧಾರದಲ್ಲಿ ಸಿಬ್ಬಂದಿ ಬಲವನ್ನು ಗುರುತಿಸಿ ಮುಚ್ಚುಗಡೆಯ ನಿಖರ ವೆಚ್ಚವನ್ನು ಲೆಕ್ಕ ಹಾಕಲು ಅಂಕಿಅಂಶಗಳನ್ನು ಸಲ್ಲಿಸುವಂತೆ ಅವುಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News