ತೆರಿಗೆ ಮೂಲಕ ಭಾರತ ನಮ್ಮನ್ನು ಹೆದರಿಸಬಾರದು: ರಫೇಲ್ ತಯಾರಕ ಸಂಸ್ಥೆ

Update: 2019-10-09 17:06 GMT

ಪ್ಯಾರಿಸ್, ಅ. 9: ಭಾರತವು ಆಹ್ಲಾದಕರ ವ್ಯಾಪಾರ ವಾತಾವರಣವನ್ನು ಒದಗಿಸಬೇಕು ಹಾಗೂ ತನ್ನ ತೆರಿಗೆ ಮತ್ತು ಸುಂಕ ನೀತಿಗಳಿಂದ ‘‘ನಮ್ಮನ್ನು ಹೆದರಿಸಬಾರದು’’ ಎಂದು ರಫೇಲ್ ಯುದ್ಧ ವಿಮಾನಗಳ ಇಂಜಿನ್ ತಯಾರಿಕಾ ಸಂಸ್ಥೆ ಫ್ರಾನ್ಸ್‌ನ ಸಫ್ರಾನ್ ಏರ್‌ಕ್ರಾಫ್ಟ್ ಇಂಜಿನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಒಲಿವಿಯರ್ ಆ್ಯಂಡ್ರೀಸ್ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್‌ಗೆ ಹೇಳಿದ್ದಾರೆ.

ಭಾರತದಲ್ಲಿ ಸುಮಾರು 150 ಮಿಲಿಯ ಡಾಲರ್ (ಸುಮಾರು 1066 ಕೋಟಿ ರೂಪಾಯಿ) ಹೂಡಿಕೆ ಮಾಡಲು ಕಂಪೆನಿಯು ಮುಂದಾಗಿದೆ ಎಂದು ಘೋಷಿಸಿದ ವೇಳೆ ಅವರು ಈ ಮನವಿ ಮಾಡಿದ್ದಾರೆ.

 ಭಾರತಕ್ಕೆ ಪೂರೈಸಲಾಗುವ ರಫೇಲ್ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ಎಂ88 ಇಂಜಿನ್‌ಗಳನ್ನು ಫ್ರಾನ್ಸ್‌ನ ಈ ಬಹುರಾಷ್ಟ್ರೀಯ ಕಂಪೆನಿ ನಿರ್ಮಿಸುತ್ತದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಸಮೀಪದಲ್ಲಿರುವ ಕಂಪೆನಿಯ ನಿರ್ಮಾಣ ಘಟಕಕ್ಕೆ ರಾಜ್‌ನಾಥ್ ಸಿಂಗ್ ನೀಡಿದ ಭೇಟಿಯ ವೇಳೆ, ಅವರಿಗೆ ಸಿಇಒ ಒಲಿವಿಯರ್ ಆ್ಯಂಡ್ರೀಸ್ ಕಂಪೆನಿಯ ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ, ತರಬೇತಿ ಮತ್ತು ನಿರ್ವಹಣೆಗಾಗಿ ಭಾರತದಲ್ಲಿ ಸುಮಾರು 150 ಮಿಲಿಯ ಡಾಲರ್ ಹೂಡಿಕೆ ಮಾಡುವ ಕಂಪೆನಿಯ ಯೋಜನೆಯನ್ನು ಘೋಷಿಸಿದರು.

ಆದರೆ, ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಬೆಂಬಲ ನೀಡುವಂತೆ ಅವರು ಭಾರತಕ್ಕೆ ಕರೆ ನೀಡಿದರು.

‘‘ಭಾರತವು ವಿಮಾನಯಾನ ಕ್ಷೇತ್ರದ ಮೂರನೇ ಅತಿ ದೊಡ್ಡ ವಾಣಿಜ್ಯ ಮಾರುಕಟ್ಟೆಯಾಗಲು ತಯಾರಾಗಿದೆ ಹಾಗೂ ಗ್ರಾಹಕರಿಗೆ ಸೇವೆ ನೀಡುವುದಕ್ಕಾಗಿ ಭಾರತದಲ್ಲಿ ಸದೃಢ ನಿರ್ವಹಣೆ ಮತ್ತು ದುರಸ್ತಿ ನೆಲೆಯೊಂದನ್ನು ನಿರ್ಮಿಸಲು ನಾವು ಉತ್ಸುಕರಾಗಿದ್ದೇವೆ’’ ಎಂದು ಆ್ಯಂಡ್ರೀಸ್ ಹೇಳಿದರು.

‘‘ಆದರೆ, ಭಾರತದ ತೆರಿಗೆ ಮತ್ತು ಸುಂಕ ವ್ಯವಸ್ಥೆಗಳು ನಮ್ಮನ್ನು ಹೆದರಿಸುವುದಿಲ್ಲ ಎನ್ನುವುದನ್ನು ನಾವು ಮೊದಲು ಖಾತರಿಪಡಿಸಬೇಕಾಗಿದೆ’’ ಎಂದರು.

ರಾಜ್‌ನಾಥ್ ಭರವಸೆ

ಸಫ್ರಾನ್ ಏರ್‌ಕ್ರಾಫ್ಟ್ ಇಂಜಿನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವ್ಯಕ್ತಪಡಿಸಿದ ಕಳವಳಕ್ಕೆ ಪ್ರತಿಕ್ರಿಯಿಸಿದ ರಾಜ್‌ನಾಥ್ ಸಿಂಗ್, ‘ಮೇಕ್ ಇನ್ ಇಂಡಿಯ’ ಯೋಜನೆಯಡಿಯಲ್ಲಿ ಹೂಡಲಾಗುವ ಹೂಡಿಕೆಗಳಿಗೆ ‘‘ಸರಿಯಾದ ವಾತಾವರಣ’’ವನ್ನು ಒದಗಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಲಕ್ನೋದಲ್ಲಿ ನಡೆಯಲಿರುವ ‘ಡೆಫ್‌ಎಕ್ಸ್‌ಪೋ’ದಲ್ಲಿ ಭಾಗವಹಿಸುವಂತೆಯೂ ಸಫ್ರಾನ್‌ಗೆ ಸಿಂಗ್ ಆಹ್ವಾನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News