ಕಾಶ್ಮೀರದಲ್ಲಿ ಪಾಕ್ ಹಿತಾಸಕ್ತಿಗಳನ್ನು ಬೆಂಬಲಿಸುವೆ: ಕ್ಸಿ ಜಿನ್‌ಪಿಂಗ್

Update: 2019-10-09 17:10 GMT

ಬೀಜಿಂಗ್, ಅ. 9: “ನಾನು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ ಹಾಗೂ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾನು ಅದನ್ನು ಬೆಂಬಲಿಸುತ್ತೇನೆ” ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬುಧವಾರ ಹೇಳಿರುವುದಾಗಿ ಆ ದೇಶದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಸಭೆಯ ವೇಳೆ, ಕಾಶ್ಮೀರ ಪರಿಸ್ಥಿತಿಯ ಸರಿ ಮತ್ತು ತಪ್ಪುಗಳು ಈಗ ಸ್ಪಷ್ಟವಾಗಿವೆ ಎಂದು ಜಿನ್‌ಪಿಂಗ್ ಹೇಳಿದರು ಎಂದು ವರದಿ ತಿಳಿಸಿದೆ.

ಸಂಬಂಧಪಟ್ಟ ಪಕ್ಷಗಳು ವಿವಾದವನ್ನು ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ಆಗಸ್ಟ್‌ನಲ್ಲಿ ರದ್ದುಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ.

ಚೀನಾ ಅಧ್ಯಕ್ಷರು ಶುಕ್ರವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಈ ಭೇಟಿಗೂ ಮುನ್ನ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಮಾತುಕತೆಗಾಗಿ ಚೀನಾ ಆಹ್ವಾನಿಸಿದೆ.

ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂರಕ್ಷಿಸುವ ಪಾಕಿಸ್ತಾನದ ಪ್ರಯತ್ನಗಳಿಗೆ ಚೀನಾ ಬೆಂಬಲ ನೀಡುತ್ತದೆ ಎಂದು ಮಂಗಳವಾರ ಇಮ್ರಾನ್‌ರನ್ನು ಭೇಟಿಯಾದ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News