ಮೋದಿಯ ಹಾಗೆ ಇಂದಿರಾ ಗಾಂಧಿ ಸೇನೆಯ ಹೆಸರಲ್ಲಿ ಎಂದೂ ಮತ ಯಾಚಿಸಿಲ್ಲ: ಶರದ್ ಪವಾರ್

Update: 2019-10-09 18:35 GMT

ಅಕೋಲಾ, ಅ. 9: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಧಾನಿ ಮೋದಿ ಅವರಂತೆ ಸೇನೆಯ ಹೆಸರಲ್ಲಿ ಎಂದಿಗೂ ಮತ ಯಾಚಿಸಿಲ್ಲ. ಯುದ್ಧದಲ್ಲಿ ದೇಶ ಜಯ ಗಳಿಸಿದಾಗ ಅದರ ಮನ್ನಣೆಯನ್ನು ಭದ್ರತಾ ಸಿಬ್ಬಂದಿಗೆ ನೀಡಿದರು ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಬುಧವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಬಾಲಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪವಾರ್, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರ ರೈತರ ಸಂಕಷ್ಟಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ರೈತರ ಸಂಕಷ್ಟಗಳಿಗೆ ಸ್ಪಂದಿಸದ ಬಿಜೆಪಿಗೆ ಅಕ್ಟೋಬರ್ 21ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಮತ ಚಲಾಯಿಸಬೇಡಿ ಎಂದು ಅವರು ಆಗ್ರಹಿಸಿದರು.

ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಮತ ಯಾಚಿಸಿದರು ಎಂದು ಪವಾರ್ ಹೇಳಿದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುದ್ಧದಲ್ಲಿ ಜಯ ಗಳಿಸಿರುವುದೇ ಅಲ್ಲದೆ, ಚರಿತ್ರೆ ನಿರ್ಮಾಣ ಮಾಡಿದರು. ಅಲ್ಲದೆ, ಜಗತ್ತಿನ ಭೂಪಟವನ್ನು ಕೂಡ ಬದಲಾಯಿಸಿದರು ಎಂದು ಅವರು ತಿಳಿಸಿದರು. ಆಗಿನ ಪಾಕಿಸ್ತಾನ ಎರಡು ಭಾಗವಾಗಿ ವಿಭಜನೆಯಾಗಿ ನೂತನ ದೇಶ ಬಾಂಗ್ಲಾದೇಶದ ರಚನೆಯಾಯಿತು. ಆದರೆ, ಸೇನೆ ಪ್ರದರ್ಶಿಸಿದ ಶೌರ್ಯದ ಹೆಸರಲ್ಲಿ ಇಂದಿರಾ ಗಾಂಧಿ ಎಂದಿಗೂ ಮತ ಯಾಚಿಸಲಿಲ್ಲ ಎಂದು ಶರದ್ ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News